೧೦ ಹೆಚ್‌ಪಿವರೆಗಿನ ಮಗ್ಗ ಮತ್ತು ಮಗ್ಗ ಪೂರ್ವ ಘಟಕಗಳಿಗೆ ಉಚಿತ ವಿದ್ಯುತ್
ವಿಜಯಪುರ: ಬಜೆಟ್‌ನಲ್ಲಿ ಘೋಷಿಸಿದಂತೆ ನೇಕಾರರಿಗೆ ೧೦ ಹೆಚ್‌ಪಿ ವರೆಗಿನ ಉಚಿತ ವಿದ್ಯುತ್ ಒದಗಿಸುವುದನ್ನು ಸರ್ಕಾರ ಆದೇಶ ಹೊರಡಿಸುವ ಮೂಲಕ ನೇಕಾರರನ್ನು ಆರ್ಥಿಕ ಸ್ವಾವಲಂಬಿಗಳನ್ನಾಗಿಸಲು ಕ್ರಮ ವಹಿಸಲಾಗಿದೆ ಎಂದು ಜವಳಿ, ಕಬ್ಬು ಅಭಿವೃದ್ದಿ ಹಾಗೂ ಸಕ್ಕರೆ, ಮತ್ತು ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಪಾಟೀಲ ಅವರು ತಿಳಿಸಿದರು.
ವಿಜಯಪುರ ಕೇಂದ್ರ ಸಹಕಾರಿ ಬ್ಯಾಂಕ್ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಉಚಿತ ಒದಗಿಸುವುದರಿಂದ ರಾಜ್ಯದ ಶೇ.೮೦ ರಷ್ಟು ಸಣ್ಣ ಪ್ರಮಾಣದ ನೇಕಾರರಿಗೆ ಅನುಕೂಲವಾಗಲಿದೆ. ೧೦ ಹೆಚ್‌ಪಿವರೆಗೆ ವಿದ್ಯುತ್ ಸಂಪರ್ಕ ಹೊಂದಿರುವ, ವಿದ್ಯುತ್ ಮಗ್ಗ ಹಾಗೂ ಮಗ್ಗ ಪೂರ್ವ ಘಟಕಗಳಿಗೆ ಇಂಧನ ವೆಚ್ಚ, ಫಿಕ್ಸ್ ಚಾರ್ಜ್, ಎಫ್‌ಎಸಿ, ಸೇರಿದಂತೆ ಸಂಪೂರ್ಣ ಬಿಲ್ ಮೊತ್ತ ಪಾವತಿಸುವುದು ರಿಯಾಯಿತಿ ನೀಡಿ ಸರ್ಕಾರದಿಂದ ಭರಿಸುವ ಮೂಲಕ ನೇಕಾರರಿಗೆ ಆರ್ಥಿಕ ಅಭಿವೃದ್ದಿಗೆ ಕ್ರಮ ವಹಿಸಲಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿ ೧೦.೦೧ ರಿಂದ ೨೦ ಹೆಚ್‌ಪಿವರೆಗೆ ವಿದ್ಯುತ್ ಸಂಪರ್ಕ ಹೊಂದಿರುವ ಅತಿ ಕಡಿಮೆ ನೇಕಾರರಿದ್ದು, ಈ ಘಟಕಗಳಿಗೆ ಮಗ್ಗ ಹಾಗೂ ಪೂರ್ವ ಘಟಕಗಳಿಗೆ ೫೦೦ ಯೂನಿಟ್‌ವರೆಗೆ ರೂ.೧.೨೫ ಪೈಸೆಯಲ್ಲಿ ವಿದ್ಯುತ್ ನೀಡಲಾಗುತ್ತದೆ. ಘೋಷಣೆ ಮಾಡಿದಂತೆ ಸರ್ಕಾರ ಕಾರ್ಯರೂಪಕ್ಕೆ ತರಲಾಗಿದೆ. ದಸರಾ ಹಿನ್ನಲೆಯಲ್ಲಿ ನೇಕಾರರಿಗೆ ಸರ್ಕಾರ ದೊಡ್ಡ ಕೊಡುಗೆ ನೀಡಿದೆ. ರಾಜ್ಯದಲ್ಲಿ ಅಂದಾಜು ೩೦ ರಿಂದ ೪೦ ಸಾವಿರ ಕುಟುಂಬಗಳು ನೇಕಾರಿಕೆ ಮೇಲೆ ಅವಲಂಬಿತವಾಗಿರುವುದರಿAದ ಇದರಿಂದ ಈ ಕುಟುಂಬಗಳಿಗೆ ಸರ್ಕಾರ ಅನುಕೂಲ ಕಲ್ಪಿಸಿದೆ ಎಂದು ತಿಳಿಸಿದರು.
ಡಿಸಿಸಿ ಬ್ಯಾಂಕ್, ಸಹಕಾರ ಇಲಾಖೆ ಸೇರಿದಂತೆ ಎಲ್ಲ ಸಹಕಾರಿಗಳು ಸಹಕಾರ ಸಪ್ತಾಹ ವಿಜಯಪುರ ಜಿಲ್ಲೆಯಲ್ಲಿ ನವೆಂಬರ್ ೨೦ರಂದು ಆಚರಣೆ ಮಾಡಲು ನಿರ್ಣಯಿಸಲಾಗಿದ್ದು, ಈ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು, ಸಹಕಾರ ಇಲಾಖೆ ಸಚಿವರು, ಸಹಕಾರಿ ಯೂನಿಯನ್ ಅಧ್ಯಕ್ಷರು, ಎಲ್ಲ ಸಹಕಾರ ಇಲಾಖೆ ಮುಖ್ಯಸ್ಥರು, ಅಧ್ಯಕ್ಷರು, ಉಪಾಧ್ಯಕ್ಷರು, ಸಹಕಾರಿಗಳೂ, ಅರ್ಬನ್ ಬ್ಯಾಂಕ್, ಕೋ-ಆಪ್‌ರೇಟಿವ್ ಸೊಸಾಯಿಟಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಕೇಂದ್ರ ಸಚಿವ ನಿತಿನ ಗಡ್ಕರಿ ಅವರಿಗೂ ಕಾರ್ಯಕ್ರಮಕ್ಕೆ ಆಗಮಿಸಲು ಪತ್ರ ಬರೆದು ವಿನಂತಿಸಲಾಗಿದೆ ಎಂದು ಹೇಳಿದರು.
ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ಸಹಕಾರಿ ಧುರೀಣರಿಗೆ ಸಹಕಾರ ರತ್ನ ಪ್ರಶಸ್ತಿ ವಿತರಣೆ ಮಾಡಲಾಗುವುದು. ಜಿಲ್ಲೆಯ ಸಹಕಾರಿಗಳು ಸ್ವಯಂ ಪ್ರೇರಣೆಯಿಂದ ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಮನವಿ ಮಾಡಿಕೊಂಡ ಸಚಿವರು, ಜಿಲ್ಲೆಯಲ್ಲಿ ಬರಗಾಲವಿರುವುದರಿದಂದ ಯಾವುದೇ ಆಡಂಬರವಿಲ್ಲದೇ ಅರ್ಥಪೂರ್ಣವಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ನವೆಂಬರ್ ೧ ರಿಂದ ಕಬ್ಬು ನುರಿಸುವ ಹಂಗಾಮು ಆರಂಭಿಸಲು ಎಲ್ಲ ಸಕ್ಕರೆ ಕಾರ್ಖಾನೆಗಳಿಗೆ ಈ ಮೊದಲು ಆದೇಶ ನೀಡಲಾಗಿತ್ತು. ಆದರೆ ಈ ವರ್ಷ ಬರಗಾಲವಿರುವುದರಿಂದ ನೀರಿನ ಕೊರತೆಯಿಂದ ಕಬ್ಬು ನುರಿಸುವ ಹಂಗಾಮನ್ನು ಒಂದು ವಾರ ಮೊದಲು ಅಕ್ಟೋಬರ್ ೨೫ರಿಂದ ಕಬ್ಬು ನುರಿಸುವ ಹಂಗಾಮು ಆರಂಭಿಸಲು ಅನುಮತಿ ನೀಡಲಾಗಿದೆ ಎಂದು ಅವರು ತಿಳಿಸಿದರು.