ಉದಯರಶ್ಮಿ ದಿನಪತ್ರಿಕೆ
ಇಂಡಿ: ಪ್ರಕೃತಿ ನಮಗೆ ಬದುಕಲು ಬೇಕಾದ ಗಾಳಿ ನೀರು ಆಹಾರ ನೆರಳನ್ನು ನೀಡಿದೆ. ಪರಿಸರ ಹಾಳಾದರೆ ಮಾನವನ ಅಸ್ತಿತ್ವವೇ ಪ್ರಶ್ನಾರ್ಥಕವಾಗುತ್ತದೆ. ಇಂದಿನ ಮರ ನಾಳಿನ ಜೀವ ಎಂಬ ಧ್ಯೇಯ ವಾಕ್ಯದೊಂದಿಗೆ ನಾವೆಲ್ಲರೂ ಪರಿಸರ ರಕ್ಷಣೆಗಾಗಿ ಪಣ ತೊಡೋಣ ಎಂದು ಹಿರಿಯ ದಿವಾಣಿ ನ್ಯಾಯಾಧೀಶ ಕೊಟೆಪ್ಪ ಕಾಂಬಳೆ ಹೇಳಿದರು.
ತಾಲೂಕಿನ ಸಾವಳಸಂಗ ಗುಡ್ಡದ ಶ್ರೀ ಸಿದ್ದೇಶ್ವರ ಸ್ವಾಮೀಜಿ ವೃಕ್ಷೆೋಧ್ಯಾನದಲ್ಲಿ ತಾಲುಕು ಆಡಳಿತ ಇಂಡಿ, ಕಾನುನು ಸೇವಾ ಸಮಿತಿ ಇಂಡಿ ಮತ್ತು ಅರಣ್ಯ ಇಲಾಖೆ ಇವರ ಸಹಯೋಗದಲ್ಲಿ ನಡೆದ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರಧಾನ ದಿವಾಣಿ ನ್ಯಾಯಾಧೀಶ ಸುನೀಲಕುಮಾರ ಎಂ.ಎಸ್ ಮಾತನಾಡಿ, ಇಂದಿನ ಮಕ್ಕಳಿಗೆ ಪ್ರಕೃತಿಯ ಮಹತ್ವ ತಿಳಿಸಿಕೊಟ್ಟು ಸ್ವಚ್ಚತೆಯ ಅಭ್ಯಾಸ ಕಲಿಸುವದು ಅತ್ಯಗತ್ಯ. ಹೆಚ್ಚುತ್ತಿರುವ ಮಾಲಿನ್ಯ ಅರಣ್ಯ ನಾಶದಿಂದಾಗಿ ಇಂದು ಭೂಮಿ ಗಂಭೀರ ಸಮಸ್ಯೆ ಎದುರಿಸುತ್ತಿದೆ. ಪ್ರಕೃತಿಯ ಸಮತೋಲನಕ್ಕಾಗಿ ಎಲ್ಲರೂ ಒಗ್ಗೂಡಿ ಎಂದರು.
ಕಿರಿಯ ದಿವಾನಿ ನ್ಯಾಯಾಧೀಶ ವಿಕಾಸ ದಳವಾಯಿ ಮಾತನಾಡಿ, ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಿ ಹಸಿ ಮತ್ತು ಒಣ ಕಸವನ್ನು ಪ್ರತ್ಯೇಕಿಸುವುದರ ಮೂಲಕ ಮರು ಬಳಕೆಗೆ ಒತ್ತು ನೀಡಬೇಕು. ಪರಿಸರದ ಸ್ವಚ್ಚತೆಗೆ ನಮ್ಮ ಮೊದಲ ಆದ್ಯತೆಯಾಗಬೇಕು ಎಂದರು.
ಕಂದಾಯ ಉಪವಿಬಾಗಾಧಿಕಾರಿ ಚಿದಾನಂದ ಗುರುಸ್ವಾಮಿ, ಇಒ ಮಹಾದೇವಪ್ಪ ಏವೂರ, ತಹಸೀಲ್ದಾರ ಸಂಜಯ ಇಂಗಳೆ, ಸಾಮಾಜಿಕ ವಲಯ ಅರಣ್ಯ ಅಧಿಕಾರಿ ಮಂಜುನಾಥ ಧುಳೆ, ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಎಸ್.ಜಿ. ಸಂಗಾಲಕ , ಪ್ರವೀಣಕುಮಾರ ಹಚ್ಚಾಳಕರ ಮಾತನಾಡಿದರು.
ಇದೇ ಸಂದರ್ಭದಲ್ಲಿ ಸಸಿಗಳನ್ನು ನೆಡಲಾಯಿತು. ಜೊತೆಗೆ ಪರಿಸರ ಸಂರಕ್ಷಣೆಯ ಭಿತಿ ಚಿತ್ರಗಳನ್ನು ಪ್ರದರ್ಶಿಸಿ ಜಾಗೃತಿ ಮೂಡಿಸಿದರು.

