ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಮೇ 20, 2024 ರಂದು ವಿಜಯಪುರದ ಸೈಬರ್ ಪೊಲೀಸ್ ಠಾಣೆಯಲ್ಲಿ ಬಬಲೇಶ್ವರ ತಾಲೂಕಿನ ತಿಗಣಿಬಿದರಿ ಗ್ರಾಮದ ಸುರೇಶ್ ಅಥಣಿ ಎಂಬುವವರು ವಂಚನೆ ಪ್ರಕರಣದ ದೂರು ದಾಖಲಿಸಿದ್ದರು.
ಆರೋಪಿಯು ಎಸ್.ಪಿ. ಲಕ್ಷ್ಮಣ್ ನಿಂಬರಗಿ ಅವರ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆ ಹಾಗೂ ಇಮೇಲ್ ಐಡಿ (nimbargilaxman29@gmail.com) ಸೃಷ್ಟಿಸಿದ್ದನು. ಈ ನಕಲಿ ಐಡಿ ಮೂಲಕ ದೂರುದಾರರಿಗೆ ಸಂಪರ್ಕಿಸಿ, PWD ಇಲಾಖೆಯಲ್ಲಿ SDC ನೌಕರಿ ಕೊಡಿಸುವುದಾಗಿ ನಂಬಿಸಿ ₹5,04,600 ಹಣವನ್ನು ಪಡೆದು ವಂಚಿಸಿದ್ದನು. ಈ ಕುರಿತು ಪ್ರಕರಣ ದಾಖಲಾಗಿತ್ತು, ಪ್ರಕರಣದ ಬೆನ್ನತ್ತಿದ CEN ಪೊಲೀಸರು ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ದುರದುಂಡಿ ಗ್ರಾಮದ ನಿವಾಸಿ ಹನುಮಂತ ಭಜಂತ್ರಿ ಎಂಬಾತನನ್ನು ಬಂಧಿಸಿದ್ದಾರೆ.
ಆರೋಪಿಯು ತನ್ನ ತಪ್ಪನ್ನು ಒಪ್ಪಿಕೊಂಡಿದ್ದು, ಬಂಧಿತ ಆರೋಪಿಯು ಇದೇ ರೀತಿ ಹುಬ್ಬಳ್ಳಿ, ಶಿವಮೊಗ್ಗ ಮತ್ತು ಇತರೆಡೆಗಳಲ್ಲೂ ನಕಲಿ ಪ್ರೊಫೈಲ್ ಸೃಷ್ಟಿಸಿ ವಂಚಿಸಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆ. ಇತರ ಅಧಿಕಾರಿಗಳ ಹೆಸರನ್ನೂ ಬಳಸಿಕೊಂಡು ವಂಚನೆ ಮಾಡಿದ್ದಾನೆಯೇ ಎಂಬ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ವಿಜಯಪುರ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.

