ಲೇಖನ
– ರಶ್ಮಿ ಕೆ. ವಿಶ್ವನಾಥ್,
ಮೈಸೂರು
ಉದಯರಶ್ಮಿ ದಿನಪತ್ರಿಕೆ
ಅಂದು ಬೆಳಗ್ಗೆ ನಮ್ಮ ಕೆಳಗಿನ ಮನೆಯ ಅಂಕಲ್ ಸಹ ಸೇರಿ ಒಟ್ಟು 5 ಜನ ಮಾತ್ರ ಆ ಮನೆಯ ಮುಂದೆ ನಿಂತಿದ್ದರು. ‘ಇದ್ಯಾಕೆ ಅಲ್ಲಿ ಜನರಿದ್ದಾರೆ?’ ಕೇಳಿಕೊಂಡೆ. ಉತ್ತರ ಸಿಗಲಿಲ್ಲ ಸುಮ್ಮನಾದೆ.
ಸ್ವಲ್ಪ ಹೊತ್ತಿನ ಬಳಿಕ ನಮ್ಮ ಮನೆಯ ಕೆಳಗಿನ ಮನೆ ಆಂಟಿ ಕಣ್ಣಿಗೆಬಿದ್ದರು. “ಆಂಟಿ, ಯಾಕೆ ಅಂಕಲ್ ಅಲ್ಲಿದ್ದಾರೆ? ಏನಾಗಿದೆ ಅಲ್ಲಿ?” ಕೇಳಿದೆ. ಆಂಟಿ ಚಿಂತೆ ಬೇರೆಯೇ ಇತ್ತು. “ಅಯ್ಯೊ, ಆ ಮನೆಯ ತಾತಪ್ಪ ತೀರಿಕೊಂಡಿದ್ದಾರೆ. ಇವರು ಎಲ್ಲೇ ಸಾವು ಅಂದರೂ ಹೋಗಿಬಿಡ್ತಾರೆ. ಅವರಿಗೆ ನೆಂಟರಾರು ಇಲ್ವಂತೆ. ಇವರು ಇನ್ನೂ ತಿಂಡಿಯನ್ನೂ ತಿಂದಿಲ್ಲ, ಹೋಗಿ ಅಲ್ಲಿ ಚಟ್ಟ ಕಟ್ಟಿಸುತ್ತಿದ್ದಾರೆ”. ನನಗೆ ಏನು ಹೇಳಬೇಕೊ ತಿಳಿಯಲೆ ಇಲ್ಲ. “ಹೋಗ್ಲಿ ಬಿಡಿ ಆಂಟಿ. ಪುಣ್ಯದ ಕೆಲಸ, ಮಾಡಲಿ. ಪಾಪ ಅವರಿಗೆ ಯಾರು ಇಲ್ಲ ಅಂದರೆ, ಯಾರಾದರು ಒಬ್ಬರು ನಿಂತು ನೋಡಲೇಬೇಕಲ್ಲ” ಎಂದವಳೆ. ಒಳಗೆ ಬಂದುಬಿಟ್ಟೆ.
ಆದರೆ ಮನಸು ಮಾತ್ರ ಅಲ್ಲೇ ಸುತ್ತುತಿತ್ತು. ‘ಸಾವು ಎಂದರೂ ಆ ರಸ್ತೆಯ ಜನರು ಹೋಗಿಲ್ವೆ?’ ಯಾಕೊ ಸಮಾಧಾನ ಅನ್ನಿಸಲೇ ಇಲ್ಲ.

ಮನುಷ್ಯ ಸಾಧಿಸಿದ್ದೀನೆಂದುಕೊಂಡಿದ್ದಾನೆ. ಆದರೆ ಅದು ನಿಜವೇ ಎಂಬುದೇ ಸಂಶಯ. ಕಸ ರಸವಾಗುವುದು ಬೇಡ. ಕೊನೆಯ ಪಕ್ಷ ರಸವನ್ನು ರಸವಾಗಿ ಉಳಿಸಿದ್ದರಾದರೂ ಸಾಕಿತ್ತು. ಆದರೆ ರಸ ಕಸವಾಗುತ್ತಿದೆ. ಭೂಮಿ ಸತ್ವ ಕಳೆದುಕೊಳ್ಳುತ್ತಿದೆ. ಹಾಗೇಯೇ ಭೂಮಿಯ ಮೇಲಿನ ಮನುಷ್ಯನ ಮನಸ್ಸಿನ ಭಾವನೆಗಳು ಕೂಡ.
ಕಾರ್ಯಕ್ರಮಗಳಿಗೆ ಹೋದಾಗ, ನೆಂಟರಿಷ್ಟರು ಸಿಕ್ಕಿದರೆ, ಅವರೇ ಮಾತನಾಡಿಸಲಿ ನಾನೇಕೆ ಮೊದಲು ಹೋಗಿ ಮಾತನಾಡಿಸಬೇಕು ಎಂಬ ಅಹಂ. ಪಕ್ಕದ ಮನೆಯವರ ಜೊತೆ ಕುಶಲೋಪರಿ ಹಂಚಿಕೊಳ್ಳುವುದರಲ್ಲಿ ಅಹಂ, ಸಾರ್ವಜನಿಕ ಜಾಗಗಳಲ್ಲಿ ಪಕ್ಕದಲ್ಲಿ ಕುಳಿತಿರುವವರ ಜೊತೆ ಮಾತನಾಡಿಸುವಲ್ಲಿ ಅಹಂ. ಹತ್ತಿರದಲ್ಲಿರುವವರನ್ನು ಮಾತನಾಡಿಸಲು ಆ ‘ಈಗೊ’ ಎಂಬ ಶತ್ರು ಬಿಡೋದೆ ಇಲ್ಲ. ಅದಕ್ಕೆ ‘ಅಹಂ’ ಎಂಬ ಹೆಸರು ಕೊಡಬೇಕೊ ಇಲ್ಲ ‘ನಮಗ್ಯಾಕೆ ಬೇಕು’ ಎಂಬ ತಾತ್ಸಾರ ಎಂದು ಹೇಳಬೇಕೊ ತಿಳಿಯದು. ಆದರೆ ಅದು ಬೇಡವೆನಿಸುವಷ್ಟರಮಟ್ಟಿಗೆ ವಿಮುಖರಾಗುತ್ತಿರುವುದಂತು ನಿಜ. ‘ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನʼ ಎಂಬ ಗೋಪಾಲಕೃಷ್ಣ ಅಡಿಗರ ಸಾಲುಗಳಂತೆ, ಅಕ್ಕ-ಪಕ್ಕದವರನ್ನು ಬಿಟ್ಟು, ಮೊಬೈಲ್ನಲ್ಲಿ ಕರೆಯುವ ಯಾವುದೋ ಮೋಹನ ಮುರಳಿಯ ನಾದಕ್ಕೆ ಕಿವಿಕೊಡುವುದೇ ಹೆಚ್ಚಾಗಿಬಿಟ್ಟಿದೆ.
Facebook Friends, ಯೋಗಬಂಧುಗಳು, Friendchat, ಇನ್ಸ್ಟಾಗ್ರಾಮ್ ಹೀಗೆ ಹೊಸ ಹೊಸ ಸಂಬಂಧಗಳನ್ನು ಹುಡುಕಿಕೊಂಡು ಹೋಗುತ್ತಾ ಇದ್ದೇವೆ. ಆದರೆ ನಮ್ಮವರಲ್ಲದವರನ್ನು ನಂಬುವುದಾದರೂ ಹೇಗೆ? ಸಾಧನೆ ಅಭಿವೃದ್ಧಿಗೆ ಪೂರಕವಾಗಿರಬೇಕೇ ಹೊರತು, ಮಾರಕವಾಗಬಾರದು. ಎಲ್ಲಾ ಯಂತ್ರಗಳ ಜೊತೆ, ಮನುಷ್ಯನ ಮನಸ್ಸು ಕೂಡ ಜೀವಕಳೆದುಕೊಂಡಿರುವ ಯಂತ್ರವೇ ಆಗಿಬಿಡುತ್ತಿದೆ . ಅದಕ್ಕೆ ಸ್ವಲ್ಪ ಭಾವನೆಗಳ ಚಿಲುಮೆಯನ್ನು ತುಂಬಿಸಬೇಕು. ಸಾಧನೆ ಬೇಕಾದಷ್ಟು ಆಗಿದೆ. ಜೊತೆಯಲ್ಲಿಯೇ ಸಮಾಜವನ್ನು ಬದಲಾಯಿಸುತ್ತಾ ಬರುತ್ತಿದೆ. ಈವಾಗಲಾದರು ಎಚ್ಚುತ್ತುಕೊಳ್ಳದಿದ್ದರೆ ಪರೋಕ್ಷವಾಗಿ ಬಾಧಿಸುವುದಂತು ಖಂಡಿತ.


