ಇಂದು (ಮೇ.28, ಗುರುವಾರ) ಬಕ್ರೀದ್ ಹಬ್ಬದ ನಿಮಿತ್ತ ಈ ವಿಶೇಷ ಲೇಖನ
ಲೇಖನ
– ಮಲಿಕ್ ಎಲ್. ಜಮಾದಾರ
ಉಪನ್ಯಾಸಕರು
ವಿಜಯಪುರ.
ಮೊ: 9743129744
ಉದಯರಶ್ಮಿ ದಿನಪತ್ರಿಕೆ
ಅರೇಬಿಕ್ ಭಾಷೆಯಲ್ಲಿ, "ಈದ್" ಎಂದರೆ ಹಬ್ಬ ಎಂದು ಕರೆಯಲ್ಪಡುತ್ತದೆ.ಮುಸ್ಲಿಮರ ಇಸ್ಲಾಮಿಕ ಹಬ್ಬಗಳಾದ ರಂಜಾನ,ಬಕ್ರೀದ್,ಈದ್ ಮಿಲಾದ್ ,ಮೊಹರಂ ಆಚರಣೆ ಪ್ರತಿಯೊಂದು ಒಂದೊಂದು ಸಂಕೇತ ಆಧಾರಿತವಾದವುಗಳು ಅದರಂತೆ ತ್ಯಾಗ ಬಲಿದಾನದ ಸಂಕೇತವೆನಿಸಿದ ಹಬ್ಬ "ಬಕ್ರೀದ್ " ಇದನ್ನು ಇಡಿ ಜಗತ್ತಿನಾದ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತದೆ.ಇಸ್ಲಾಂ ಧರ್ಮದ ಪ್ರವಾದಿಗಳಲ್ಲಿ ಒಬ್ಬರಾದ ಇಬ್ರಾಹಿಂ(ಅಸ)ತಮ್ಮ ಮಗ ಇಸ್ಮಾಯಿಲ್(ಅಸ)ರನ್ನು ಸೃಷ್ಟಿಕರ್ತನಾದ ಅಲ್ಹಾಹನಿಗೆ ಬಲಿ ಕೊಡಲು ಮುಂದಾ ದಿನವನ್ನೆ “ಬಕ್ರೀದ್ ಅಥವಾ ಬಲಿದಾನದ ಹಬ್ಬ ವೆಂದು” ಆಚರಿಸಲಾಗುವುದು.
• ಹಜ್ ಯಾತ್ರೆ ವಿಶೇಷ
ಈದ್ ಅಲ್-ಅಧಾವನ್ನು ಸಾಮಾನ್ಯವಾಗಿ ಎರಡು ಈದ್ ಹಬ್ಬಗಳ ಪವಿತ್ರವೆಂದು ಪರಿಗಣಿಸಲಾಗಿದೆ, ಈದ್ ಅಲ್-ಫಿತರ್‌ನ ಸುಮಾರು ಎರಡು ತಿಂಗಳ ನಂತರ ಮೆಕ್ಕಾಗೆ ವಾರ್ಷಿಕ ಹಜ್ ಯಾತ್ರೆಯ ಕೊನೆಯಲ್ಲಿ ನಡೆಯುತ್ತದೆ. ಇಸ್ಲಾಮಿಕ್ ಚಂದ್ರನ ಕ್ಯಾಲೆಂಡರ್ ಪ್ರಕಾರ ಎರಡೂ ರಜಾದಿನಗಳ ದಿನಾಂಕಗಳು ಪ್ರತಿ ವರ್ಷ ಒಂದೇ ಆಗಿರುತ್ತವೆ. ಪಾಶ್ಚಾತ್ಯ ೩೬೫-ದಿನಗಳ ಗ್ರೆಗೋರಿಯನ್ ಕ್ಯಾಲೆಂಡರ್ ಸುಮಾರು ೧೧ ದಿನಗಳು ಉದ್ದವಾಗಿದೆ, ಪ್ರತಿ ವರ್ಷ ದಿನಾಂಕಗಳು ಬದಲಾಗುತ್ತವೆ
ಪಶ್ಚಿಮ ಸೌದಿ ಅರೇಬಿಯಾದಲ್ಲಿ ಇಸ್ಲಾಂನ ಪವಿತ್ರ ನಗರವಾದ ಮೆಕ್ಕಾಗೆ ವಾರ್ಷಿಕ ಹಜ್ ಯಾತ್ರೆಯ ಅಂತಿಮ ದಿನದಂದು ಈದ್ ಅಲ್-ಅಧಾವನ್ನು ಆಚರಿಸಲಾಗುತ್ತದೆ. ಎಲ್ಲಾ ಮುಸ್ಲಿಮರು ತಮ್ಮ ಜೀವಿತಾವಧಿಯಲ್ಲಿ ಒಮ್ಮೆಯಾದರೂ ಐದು ದಿನಗಳ ಹಜ್ ಪ್ರಯಾಣವನ್ನು ಮಾಡಲು ಕೇಳಿಕೊಳ್ಳುತ್ತಾರೆ ಮತ್ತು ಪ್ರತಿ ವರ್ಷ ೨ ಮಿಲಿಯನ್ ಗಿಂತಲೂ ಜನರು ಹಜ್ ಯಾತ್ರೆ ಕೈಗೊಳ್ಳುತ್ತಾರೆ.
ಹಬ್ಬದ ಹಿನ್ನಲೆ

ಪ್ರವಾದಿ ಇಬ್ರಾಹಿಂ (ಅಸ)ಅವರ ಸತ್ವ ಪರೀಕ್ಷೆ ಮಾಡಲು ಅಲ್ಹಾಹನು ಒಮ್ಮೆ ಅವರಿಗೆ ನಿನ್ನ ಅತಿ ಪ್ರೀತಿಯ ವಸ್ತುವಿಗೆ ಪಾತ್ರವಾದ ಒಂದು ಜೀವನವನ್ನು ಬಲೆಕೊಡಬಲ್ಲೆಯೋ ಎಂದು ಪ್ರಶ್ನಿಸುತ್ತಾನೆ. ಇದೆಲ್ಲಾ ಆಜ್ಞೆ ಭಗವಂತನದು ಎಂದು ಅರಿತ ಇಬ್ರಾಹಿಂ (ಅಸ)ರು ತಮ್ಮ ಏಕೈಕ ಪುತ್ರನಾದ ಇಸ್ಮಾಯಿಲ(ಅಸ)ರನ್ನು ಅಲ್ಹಾಹನ ಇಚ್ಚೆಯಂತೆ ಬಲಿಕೊಡಬೇಕು ಎಂದು ನಿರ್ಧಾರಕ್ಕೆ ಬರುವರು. ಮನವರಿಕೆ ಮಾಡಿಕೊಂಡ ಅವರು ತಮ್ಮ ಮಗನನ್ನು ಬಲಿಕೊಡಲು ಸಿದ್ಧರಾಗುತ್ತಾರೆ. ಬಲಿ ನೀಡಲು ತಮ್ಮ ಕೈಯಲ್ಲಿದ್ದ ಕತ್ತಿಯನ್ನು ಮಗನ ಕತ್ತಿನ ಮೇಲೆ ಇಡುತ್ತಾರೆ.ಆ ಸಂದರ್ಭದಲ್ಲಿ ಕತ್ತಿಯು ಹರಿಯಲಿಲ್ಲ ತಂದೆಯ ಇಚ್ಚೆಯನ್ನು ಪೂರೈಸಲು ಬಲಿಯಾಗುವ ಸ್ಥಾನದಲ್ಲಿದ್ದ ಪುತ್ರ ಇಸ್ಮಾಯಿಲ(ಅಸ)ರು ತಂದೆಗೆ “ಅಪ್ಪ ನಿನ್ನನ್ನು ಅತಿಯಾದ ಪುತ್ರವಾತ್ಸಲ್ಯ ಕಾಡುತ್ತಿದೆ ಆದ್ದರಿಂದ ನೀನು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ನನ್ನ ಕುತ್ತಿಗೆಗೆ ಕತ್ತಿಯನ್ನು ಹರಿಸು ಎಂದು ತಿಳಿಸುತ್ತಾನೆ.ಪುತ್ರನ ಹೇಳಿಕೆಯಂತೆ ತಂದೆ ಇಬ್ರಾಹಿಂ(ಅಸ)ಕಣ್ಣಿಗೆ ಬಟ್ಟೆ ಕಟ್ಟಿಕೊಂಡು “ಬಿಸ್ಮಿಲ್ಲಾಹ” ಎಂದು ಹೇಳಿ ಪುತ್ರನ ಕುತ್ತಿಗೆಗೆ ಕತ್ತು ಹರಿಸಿದರು ಕೊನೆಗೆ ದೈವಿಶಕ್ತಿಯಿಂದ ಪುತ್ರ ಇಸ್ಮಾಯಿಲ(ಅಸ)ಕುತ್ತಿಗೆಗೆ ಕತ್ತು ಹರೆಯಲಿಲ್ಲ.
ಇದನ್ನು ಕಂಡ ಪ್ರತ್ಯಕ್ಷರಾದ ದೇವಧೂತ ಜಿಬ್ರಾಯಿಲ “ಓ.. ಇಬ್ರಾಹಿಂ(ಅಸ)ಅವರೇ ನೀವು ಅಲ್ಲಾಹನಲ್ಲಿಟ್ಟ ಸತ್ವ ನಿಷ್ಠೆಯ ಭಕ್ತಿಯ ಫಲದಿಂದ ನಿಮ್ಮ ಮೇಲೆ ಈವರೆಗೆ ನಡೆದಿರುವ ದೈವಿಭಕ್ತಿಯ ಪರೀಕ್ಷೆ ಮಾಡಿಬೆಟ್ಟೇನು ನೀವು ಇಟ್ಟ ಭಕ್ತಿ ಶ್ರದ್ದೆಯಿಂದ ನಿಮ್ಮ ಪುತ್ರ ಉಳಿದನು. ಅದೇ ಕಾರಣಕ್ಕೆ ಪುತ್ರ ಬಲಿದಾನದ ಸ್ಥಳದಲ್ಲಿ ಇಸ್ಮಾಯಿಲ್(ಅಸ)ಅವರನ್ನು ಸರಿಸಿ ಪುತ್ರ ಬಲಿದಾನದ ಬದಲು ಪ್ರಾಣಿಯನ್ನು ಬಲಿ ನೀಡು ಎಂದು ಅಲ್ಹಾಹನೇ ಅಜ್ಞಾಪಿಸಿದ್ದಾನೆ” ಎಂದು ಹೇಳುತ್ತಾರೆ. ಅಲ್ಹಾಹನ ಆಜ್ಞೆಯಂತೆ ಇಬ್ರಾಹಿಂ(ಅಸ) ಅವರು ಪ್ರಾಣಿ ಬಲಿಯನ್ನು ಕೊಡುತ್ತಾರೆ. ಶೈತಾನ್ ಅಥವಾ ಸೈತಾನನು ಇಬ್ರಾಹಿಂ(ಅಸ) ಅವರನ್ನು ಗೊಂದಲಗೊಳಿಸಲು ಪ್ರಯತ್ನಿಸುತ್ತಾನೆ. ಆದರೆ ಇಬ್ರಾಹಿಂ(ಅಸ)ಅವರು ಯಾವುದೇ ಗೊಂದಲಕ್ಕೀಡಾಗದೆ ಇಬ್ರಾಹಿಂ(ಅಸ)ಅವರು ಅವನನ್ನು ಓಡಿಸುತ್ತಾನೆ. ಪ್ರವಾದಿ ಇಬ್ರಾಹಿಂ(ಅಸ)ಅವರು ಅಲ್ಲಾಹನಲ್ಲಿಟ್ಟದ್ದ ಸತ್ವ ನಿಷ್ಠೆಯ ಪ್ರತೀಕವನ್ನು ಈ ದಿನದಂತು ನಾವು ಸ್ಮರಿಸಬಹುದಾಗಿದೆ.
ವಿಶೇಷ ಪ್ರಾರ್ಥನೆ
ಮುಸ್ಲಿಂ ಆರಾಧಕರು ಸಾಮಾನ್ಯವಾಗಿ ಹಬ್ಬದ ಮೊದಲ ದಿನದ ಮುಂಜಾನೆ ಸಾಮೂಹಿಕ ಈದ್ಗಾ ಮೈದಾನಕ್ಕೆ ತೆರಳಿ ಒಗ್ಗೂಡಿ ವಿಶೇಷ ಸಾಮೂಹಿಕವಾಗಿ ವಿಶೇಷ ಪ್ರಾರ್ಥನೆ ಅಥವಾ ಸಲಾತ್ ಮಾಡುತ್ತಾರೆ. ದಾನ-ದೇಣಿಗೆ ನೀಡುತ್ತಾರೆ. ಮತ್ತು ಕುಟುಂಬ ಮತ್ತು ಸ್ನೇಹಿತರೊಂದಿಗೆ ಭೇಟಿ ನೀಡುತ್ತಾರೆ, ಪರಸ್ಪರ ಉಡುಗೊರೆಗಳನ್ನು ವಿನಿಮಯ ಮಾಡಿಕೊಂಡು ಪ್ರೀತಿ ಹಂಚುತ್ತಾರೆ. ಪ್ರಾರ್ಥನೆ ಸಲ್ಲಿಸಿದ ನಂತರ ಪರಸ್ಪರ ಭೇಟಿಯಾಗುವ ಮೂಲಕ ಭಾಂಧವ್ಯಕ್ಕೆ ಸಾಕ್ಷಿಯಾಗುತ್ತಾರೆ. ಮನೆ ಮನೆಗೆ ತೆರಳಿ ಕುರ್ಬಾನಿ ಕಾರ್ಯದಲ್ಲಿ ತೊಡಗಿಸಿಕೊಳ್ಳುತಾರೆ.


