ಲೇಖನ
– ಡಾ ಶಶಿಕಾಂತ ಪಟ್ಟಣ
ರಾಮದುರ್ಗ – ಪುಣೆ
ಮೊ: 9552002338
ಉದಯರಶ್ಮಿ ದಿನಪತ್ರಿಕೆ
ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ದಿನಾಂಕ 12 ಏಪ್ರಿಲ್ 2026 ರಂದು ಶ್ರೀ ಪ್ರಸನ್ನ ರಾಮಚಂದ್ರ ಗೆದ್ದೆನ್ನವರ ಇವರ ದತ್ತಿ ಉಪನ್ಯಾಸವು ಒಂದು ಗೊಂದಲದ ಗೂಡನ್ನು ಸೃಷ್ಟಿಸಿ ಹಲವು ಅನುಮಾನ ಸಂದೇಹಗಳನ್ನು ಹುಟ್ಟು ಹಾಕಿದ ಪ್ರಸಂಗ ಉಪನ್ಯಾಸಕ ವಾಸುದೇವ ಬಡಿಗೇರ್ ಮತ್ತು ಅಧ್ಯಕ್ಷರಾದ ನಿವೃತ್ತ ಕನ್ನಡ ಪ್ರಾಧ್ಯಾಪಕ ಶ್ಯಾಮಸುಂದರ ಕೊಚ್ಚಿ ಅವರಿಂದ ಜರುಗಿತು.
ದೇವರ ದಾಸಿಮಯ್ಯ ಮತ್ತು ಜೇಡರ ದಾಸಿಮಯ್ಯ ಬೇರೆ ಬೇರೆ ಎನ್ನುವ ಕಳೆದ ಹನ್ನೇರಡು ವರುಷಗಳ ನಿರಂತರ ಹೋರಾಟಕ್ಕೆ ಈ ಇಬ್ಬರೂ ಮಹನೀಯರು ಮತ್ತೆ ಹಲವು ಅನೇಕ ಗೊಂದಲ ವಿವಾದಗಳನ್ನು ಸೃಷಿಸಿದ್ದು ಒಂದು ಅರ್ಥದಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘದಂತಹ 136 ವರ್ಷಗಳ ಹಳೆಯದಾದ ಇಂತಹ ಸಾಂಸ್ಕೃತಿಕ ಸಾಹಿತಿಕ ವೇದಿಕೆಗಳಲ್ಲಿ ಅತ್ಯಂತ ವಿವಾದಗಳನ್ನು ಹುಟ್ಟು ಹಾಕಿದ ರೀತಿ ಖಂಡನೀಯವಾದದ್ದು. ಇಂತಹ ಕಾರ್ಯಕ್ರಮಗಳು ವ್ಯಕ್ತಿಗಳ ಅಧ್ಯಯನಶೀಲತೆಯನ್ನು ಹೆಚ್ಚಿಸಬೇಕೆ ಹೊರತು ಸಂದೇಹ ಅನುಮಾನಗಳನ್ನು ಹುಟ್ಟು ಹಾಕುವುದಲ್ಲ.
ದೇವರ ದಾಸಿಮಯ್ಯ ಜೇಡರ ದಾಸಿಮಯ್ಯ ಏನಿದು ವಿವಾದ?
ಆದ್ಯ ವಚನಕಾರ ಜೇಡರ ದಾಸಿಮಯ್ಯರನ್ನು ಕೆಲ ಸಂಶೋಧಕರು ದೇವರ ದಾಸಿಮಯ್ಯ ಎಂದು ಹೇಳುತ್ತಾ ವಚನ ಚಳುವಳಿ ಬಸವಣ್ಣವರಕ್ಕಿಂತ 150 ವರ್ಷ ಮುಂಚೆ ಆರಂಭವಾಗಿದ್ದು ದೇವರದಾಸಿಮಯ್ಯನು ಈ ಚಳುವಳಿಯ ನಾಯಕ ಎಂದೆನ್ನುವ ಹುನ್ನಾರ ಮತ್ತು ಹುಂಬುತನದ ಕಾರ್ಯವಾಗಿದೆ.
ಇತಿಹಾಸ ಹೇಳುವಂತೆ ದೇವರ ದಾಸಿಮಯ್ಯನು ಪೊಟ್ಟಲಕೆರೆಯ (ಆಂಧ್ರದ ಪಟಾಣ್‌ಚೆರುವು) ಜಯಸಿಂಹನ (ಸು. 1015–44) ಪತ್ನಿ ಸುಗ್ಗಲದೇವಿಗೆ ಶಿವ ದೀಕ್ಷೆಯನ್ನು ಕೊಟ್ಟವನು; ಮತ ಪ್ರಚಾರಕ. ಸದ್ಯಕ್ಕೆ ಆದ್ಯ ವಚನಕಾರ ಜೇಡರದಾಸಿಮಯ್ಯನು ನೇಯ್ಗೆಯವನು; ಕಲಬುರ್ಗಿ ಜಿಲ್ಲೆಯ ಸುರಪುರ ತಾಲ್ಲೂಕಿನ ಮುದನೂರಿನವನು; ಇಲ್ಲಿ ರಾಮೇಶ್ವರ ದೇವಾಲಯವಿದೆ; ಇವನ ವಚನಗಳ ಅಂಕಿತ ರಾಮನಾಥ. ಇವನಂತೆ ಇವನ ಪತ್ನಿ ದುಗ್ಗಳೆ ವಚನಕಾರ್ತಿ. ಇವನು ಆರನೇ ವಿಕ್ರಮಾದಿತ್ಯನ ಮೊಮ್ಮಗ ಎರಡನೇ ಜಗದೇಕಮಲ್ಲನ (1139–1149) ಕಾಲದಲ್ಲಿದ್ದವನು. ಬಸವಣ್ಣನವರ ಹಿರಿಯ ಸಮಕಾಲೀನ.
ಇವನ ವಚನಗಳಲ್ಲಿ ಆ ಕಾಲದ ಸಾಮಾಜಿಕ ಸಂಗತಿಗಳ ಪ್ರಸ್ತಾಪ ಹೇರಳವಾಗಿ ಬಂದಿದೆ. ಇವನು ಶ್ರೇಷ್ಠ ಚಿಂತಕ, ಅನುಭಾವಿ, ವಿಡಂಬನಕಾರ, ವಚನಗಳ ಕಾವ್ಯಮೌಲ್ಯ ವಿಶಿಷ್ಟವಾಗಿದೆ. ಶಿವನು ಇವನ ಮನಸ್ಸನ್ನು ಒರೆಹಚ್ಚಿ ನೋಡಿದ ಪ್ರಸಂಗ ಬಸವಣ್ಣನವರ ವಚನಗಳಲ್ಲಿ ಬಂದಿದೆ. ಅವರ ವಚನಗಳಲ್ಲಿ ಸುಮಾರು 14 ಕಡೆ ಜೇಡರ ದಾಸಿಮಯ್ಯನ ಉಲ್ಲೇಖ ಬಂದಿದೆ. ಇವನು ಶಿವನಿಂದ ತವನಿಧಿಯನ್ನು ಪಡೆದಿದ್ದನೆಂದೂ, ಇವನ ಅಹಮ್ಮನ್ನು ಇಲ್ಲವಾಗಿಸಲು ಶಂಕರದಾಸಿಮಯ್ಯನು ತವನಿಧಿಯನ್ನು ಮಾಯ ಮಾಡಿದ ಘಟನೆ ಹರಿಹರನ ಶಂಕರದಾಸಿಮಯ್ಯನ ರಗಳೆಯಲ್ಲಿ ಬಂದಿದೆ.

ಜೇಡರ ದಾಸಿಮಯ್ಯನ ಒಂದು ವಚನದಲ್ಲಿ (ಸಂಕೀವ ಸಂ. 2, ವ. 29, 2001) ನೇಯ್ಗೆಯ ಸಾಧನಗಳ ವಿವರ ಬಂದಿದೆ. ಉದಾ.ಗೆ ಉಂಕೆ=ನೂಲಿನ ಹಾಸು; ಅಣಿ=ಅಣಿದಬ್ಬೆ, ನೇಯ್ಗೆಯ ಪರಿಕರ; ಲಾಳಿ=ನೇಯ್ಗೆಯಲ್ಲಿ ಬಳಸುವ ಒಂದು ಉಪಕರಣ. ಮಗ್ಗದಲ್ಲಿ ಹೊಕ್ಕಿನ ದಾರವನ್ನು ಸೇರಿಸುವ ಸಾಧನ; ಕಂಡಿಕೆ=ಲಾಳಿಯಲ್ಲಿ ಸೇರಿಸುವ ನೂಲಿನ ಉಂಡೆ; ಸೀರೆ=ವಸ್ತ್ರ. ಈ ವೃತ್ತಿ ಪಾರಿಭಾಷಿಕ ಪದಗಳಿಂದ ಇವನು ನೇಯ್ಗೆಯವನು/ಮಗ್ಗದವನು/ ದೇವಾಂಗ ಸಮುದಾಯಕ್ಕೆ ಸೇರಿದವನೆಂಬುದು ಸ್ಪಷ್ಟವಾಗುತ್ತದೆ. ಹೀಗಿರುವಾಗ ದೇವಾಂಗ ಸಮುದಾಯಕ್ಕೆ ಸೇರದ ಕೇವಲ ಮತಪ್ರಚಾರಕ್ಕೆ, ಊರೂರು ಅಲೆಯುತ್ತಿದ್ದ ಸನ್ಯಾಸಿ ದೇವರ ದಾಸಿಮಯ್ಯನನ್ನು ಸಂಸಾರಸ್ಥನಾಗಿದ್ದ ದೇವಾಂಗ (=ಮಗ್ಗ (ಅ) ನೇಯ್ಗೆ ಕಾಯಕದವನಾದ (ಉತ್ತರ ಕರ್ನಾಟಕದಲ್ಲಿ ಇವರನ್ನು ಸಾಲೇರು ಸಕುಳ ಸಾಲಿ ಹಟಗಾರ ನೇಕಾರ ಜಾಡರು ಎಂದು ಕರೆಯುವರು).
ಬಸವಣ್ಣನವರ ಒಂದು ವಚನದಲ್ಲಿ (589) ‘ಹಾಸನಿಕ್ಕಿ ಸಾಲಿಗನಾದ’ ಅಂದರೆ, ವಸ್ತ್ರವನ್ನು ನೇಯುವ ಕಾಯಕದಿಂದ ಸಾಲಿಗ (ಸಾಲೇರು) ಜಾತಿಯನ್ನು ಹೊಂದಿದ ಎಂದು ಬಂದಿದೆ. ಇನ್ನೊಂದು ವಚನದಲ್ಲಿ – ಭಕ್ತಿಯಿಲ್ಲದ ಬಡವ ನಾನಯ್ಯ ದಾಸಯ್ಯನ ಮನೆಯಲೂ ಬೇಡಿದೆ ಚೆನ್ನಯ್ಯನ ಮನೆಯಲೂ ಬೇಡಿದೆ ಕಕ್ಕಯ್ಯನ ಮನೆಯಲೂ ಬೇಡಿದೆ ಅವರೆಲ್ಲರೂ ನೆರೆದು ತಮ್ಮ ಭಕ್ತಿಯ ಭಿಕ್ಷೆಯನ್ನಿಕ್ಕಿದರು ಎನ್ನ ಪಾತ್ರೆ ತುಂಬಿತ್ತು ಕೂಡಲ ಸಂಗಮದೇವಾ ಎನ್ನುವಲ್ಲಿ ದಾಸಿಮಯ್ಯ ಬಸವಣ್ಣನವರ ಸಮಕಾಲೀನ ಎಂದು ಸ್ಪಷ್ಟವಾಗಿ ಗೋಚರವಾಗುತ್ತದೆ. ಹೀಗಾಗಿ ಅವನು ಜೇಡರ ದಾಸಿಮಯ್ಯನೇ ಹೊರತು ದೇವರ ದಾಸಿಮಯ್ಯನಲ್ಲ.
ದೇವರ ದಾಸಿಮಯ್ಯ/ಜೇಡರ ದಾಸಿಮಯ್ಯ ಒಬ್ಬರೇ ಆದರೆ, ಇಬ್ಬರೂ ಬೇರೆ ಬೇರೆ ಕಾಲಮಾನದಲ್ಲಿದ್ದವರು; ವೃತ್ತಿಯಲ್ಲಿ ಬೇರೆ ಬೇರೆಯವರು; ಒಬ್ಬ ಸನ್ಯಾಸಿ, ಇನ್ನೊಬ್ಬ ಸಂಸಾರಿ ಎಂಬುದನ್ನು ಹೇಗೆ ಸಮರ್ಥಿಸುವುದು? ದೇವರ ದಾಸಿಮಯ್ಯನ ಪತ್ನಿ ದುಗ್ಗಳೆ ಎಂದು ಹೇಳುವುದಾದರೆ ಇದಕ್ಕಿಂತ ಅಪಚಾರ ಬೇರೊಂದಿದೆಯೆ? ಸಂಶೋಧಕನದು ಈಗಾಗಲೇ ತೋಡಿರುವ ಸಂದೇಹ ವಿವಾದಗಳ ಗುಂಡಿಯನ್ನು ಮುಚ್ಚ ಬೇಕೇ ವಿನಃ ; ಗುಂಡಿಗಳನ್ನು ತೋಡುವುದೇ ಸಂಶೋಧನೆ ಕೆಲಸವಾಗಬಾರದು. ಇಂತಹ ವಿವಾದಗಳ ಗುಂಡಿಗಳನ್ನು ಮುಚ್ಚುತ್ತಾ ಹೋಗುವುದೇ ನಮ್ಮ ಕೆಲಸವಾದರೆ ಇದಕ್ಕೆ ಕೊನೆಯೆಲ್ಲಿ?
ಹರಿಹರನ ಶಂಕರ ದಾಸಿಮಯ್ಯನ ರಗಳೆಯಲ್ಲಿ ಜೇಡರ ದಾಸಿಮಯ್ಯ ಮತ್ತು ದುಗ್ಗಳೆಯರು ಸತಿ ಪತಿಯರೆಂದೇ ಉಲ್ಲೇಖಿತರಾಗಿದ್ದಾರೆ. ಅವರಿಬ್ಬರದೂ ಅತ್ಯಂತ ಸುಖಮಯ ಸಂಸಾರವಾಗಿತ್ತು. ದುಗ್ಗಳೆ ತನ್ನ ವಚನಗಳಲ್ಲಿ ಬಸವ, ಚನ್ನಬಸವ, ಅಲ್ಲಮರನ್ನು ಸ್ತೋತ್ರ ಮಾಡಿದ್ದಾಳೆ (‘ಭಕ್ತನಾದಡೆ ಬಸವಣ್ಣ ನಂತಾಗಬೇಕು. ಜಂಗಮನಾದರೆ ಪ್ರಭುದೇವರಂತಾಗಬೇಕು. ಭೋಗಿಯಾದಡೆ ಚೆನ್ನಬಸವಣ್ಣನಂತಾಗಬೇಕು’) ಎಂದರೆ ದುಗ್ಗಳೆ, ಜೇಡರ ದಾಸಿಮಯ್ಯರು ಬಸವಣ್ಣ, ಅಲ್ಲಮ ಇವರ ಸಮಕಾಲೀನರು: ಅವರ ಕಾಲ ಸ್ಪಷ್ಟವಾಗಿ ಕ್ರಿ.ಶ. 1160: ಬಸವಣ್ಣ ಆ ಕಾಲದಲ್ಲಿ ಆಳಿದ ಬಿಜ್ಜಳನ ಭಂಡಾರಿ.

ದೇವರ ದಾಸಿಮಯ್ಯನ ಕಾಲ ಕ್ರಿ. ಶ. 1040; ಜೇಡರ ದಾಸಿಮಯ್ಯನ ಕಾಲ ಕ್ರಿ. ಶ. 1140 ರಿಂದ 1160 ಎಂದು ನಿರ್ಧಾರವಾಗುತ್ತದೆ . ಇವರಿಬ್ಬರೂ ಬೇರೆ ಬೇರೆ ಎಂಬುದನ್ನು (ದಿ.) ಎಚ್. ದೇವೀರಪ್ಪನವರು ಸ್ಪಷ್ಟಪಡಿಸಿದ್ದಾರೆ. ಹಸ್ತಪ್ರತಿಗಳಲ್ಲಿ ‘ಜೇಡರ ದಾಸಿಮಯ್ಯನ ವಚನಗಳು’ ಎಂದು ಮಾತ್ರ ಇದೆ. ಶ್ರೇಷ್ಠ ವಿದ್ವಾಂಸರಾದ ಡಾ. ಟಿ. ವಿ. ವೆಂಕಟಾಚಲಶಾಸ್ತ್ರೀ, ಡಾ ಎಂ ಚಿದಾನಂದ ಮೂರ್ತಿ, ಪ್ರೊ. ಜಿ. ಎಸ್. ಸಿದ್ಧಲಿಂಗಯ್ಯ, ಡಾ. ಎಂ. ಎಂ. ಕಲಬುರ್ಗಿ, ಡಾ. ಎಸ್. ಎಂ. ವೃಷಭೇಂದ್ರಸ್ವಾಮಿ, ಡಾ. ಎನ್. ವಿದ್ಯಾಶಂಕರ್ ಮುಂತಾದ ಅನೇಕ ಸಂಶೋಧಕರು ಇವರೆಲ್ಲರೂ ಜೇಡರ ದಾಸಿಮಯ್ಯ ಮತ್ತು ದೇವರ ದಾಸಿಮಯ್ಯ ಇಬ್ಬರೂ ಬೇರೆ ಬೇರೆ ಇವರ ಕಾಲ ಘಟ್ಟವು ಬೇರೆ ಎಂದು ಸ್ಪಷ್ಟವಾಗಿ ನಿರೂಪಿಸಿದ್ದಾರೆ.
ಸಂಶೋಧನೆ ನಿಂತ ನೀರಲ್ಲ
ಡಾ ಎಂ ಎಂ ಕಲಬುರ್ಗಿ ಗುರುಗಳು ಸಂಶೋಧನೆ ನಿಂತ ನೀರಲ್ಲ, ಕಾಲ ಕೆಳಗಿನ ಕೆಂಡಕ್ಕಿಂತ ಕಣ್ಣ ಮುಂದಿನ ಬೆಳಕು ಮುಖ್ಯ, ಸತ್ಯ ಶೋಧಕ ನಿತ್ಯ ಶಿಲುಬೆಗೆ ಇರಬೇಕಾಗುತ್ತದೆ, ಸಂಶೋಧಕ ತಪ್ಪು ಹೇಳಿರಬಹುದು ಆದರೆ ಸುಳ್ಳು ಹೇಳಿರಲಾರ, ಎಂಬ ಅನೇಕ ಸ್ವಂತ ಅನುಭವದ ಮಾತುಗಳನ್ನು ಆಡಿದ್ದಾರೆ. ಡಾ ವಾಸುದೇವ ಬಡಿಗೇರ ಡಾ ಎಂ ಎಂ ಕಲಬುರ್ಗಿ ಅವರಿಗೆ ದೇವರ ದಾಸಿಮಯ್ಯನ ಬಗ್ಗೆ ಪ್ರಸ್ತಾಪ ಮಾಡಿದೆ, ಆಗ ಅವರು ನನಗೆ ಆಕಾರ ಶಾಸನಗಳ ಕೊರತೆಯಿದೆ ಅಂತಹ ಕೆಲಸ ನಿನ್ನಿಂದ ಆಗಬೇಕು ಎಂದು ಹೇಳಿದರಂತೆ ಎಂದು 12 ರಂದು ವಿದ್ಯಾವರ್ಧಕ ಸಂಘದಲ್ಲಿ ನಡೆದ ಉಪನ್ಯಾಸದಲ್ಲಿ ಹೇಳಿದರು. ಇದು ಒಂದು ಹಾಸ್ಯಾಸ್ಪದದ ಸ್ವಯಂ ಹೊಗಳಿಕೆಯ ಪರಾಕಾಷ್ಠೆ, ಡಾ ಎಂ ಚಿದಾನಂದ ಮೂರ್ತಿ, ಡಾ ಎಂ ಎಂ ಕಲಬುರ್ಗಿ ಅವರ ಸಂಶೋಧನೆಯ ಅನುಭವ ವಾಸುದೇವ ಬಡಿಗೇರ ಅವರ ವಯಸ್ಸಿಗಿಂತ ಹೆಚ್ಚಿನದು, ನಿವೃತ್ತಿಯ ನಂತರವೂ ಸಂಶೋಧನೆಯನ್ನು ಉಸಿರನ್ನಾಗಿ ಕಂಡುಕೊಂಡವರು ಡಾ ಎಂ ಎಂ ಕಲಬುರ್ಗಿ ಗುರುಗಳು, ಅವರನ್ನು ಕಡಿಮೆ ಮಾಡಿ ಅವರಿಗಿಂತ ಮತ್ತು ಉಳಿದ ಸಂಶೋಧಕರಿಗಿಂತ ವಾಸುದೇವ ಬಡಿಗೇರ ತಾವು ಶ್ರೇಷ್ಠ ಸಂಶೋಧಕರು ಎನ್ನುವ ಭ್ರಮೆಯಲ್ಲಿದ್ದಾರೆ. ಸಂಶೋಧನೆ ನಿಂತ ನೀರಲ್ಲ ಸತ್ಯ ಆದರೆ ಕೊಳಚೆ ನೀರಾಗಬಾರದು.
ವಾಸುದೇವ ಬಡಿಗೇರ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಇತಿಹಾಸದ ಸಂಶೋಧಕರು, ಸುಳ್ಳನ್ನು ನವಿರಾಗಿ ಹೇಳುವ ಕಲೆಯನ್ನು ಕರಗತ ಮಾಡಿಕೊಂಡವರು, ಮೂರು ವರುಷದ ಹಿಂದೆ ಈ ಮಹಾನ್ ಸಂಶೋಧಕರಿಗೆ ಫೋನ್ ಮಾಡಿ ಮಾತನಾಡಿದ್ದೆ, ತಮ್ಮ ಮೊಂಡುತನ ಕಲ್ಪನೆ ಗ್ರಹಿಕೆಗಳನ್ನೇ ಸಂಶೋಧನೆಯೆಂದು ತಿಳಿದಿರುವ ವಾಸುದೇವ ಬಡಿಗೇರ ಅವರಿಗೆ ಸಮಕಾಲೀನ ಅಥವಾ ಹಿರಿಯ ಸಂಶೋಧಕರ ಸಂಶೋಧನೆಗಳ ಬಗ್ಗೆಯೂ ಅವಲೋಕನ ಮಾಡಲಿ, ವಾಸುದೇವ ಬಡಿಗೇರ ಅವರು ಕೇವಲ ದೇವರ ದಾಸಿಮಯ್ಯ ಮತ್ತು ಜೇಡರ ದಾಸಿಮಯ್ಯ ಇವರ ಬಗ್ಗೆಯಾಗಿರದೆ ಮಾದಾರ ಚೆನ್ನಯ್ಯ ಮೂರನೆಯ ಶತಮಾನಾದವರೆಂಬ ಇನ್ನೊಂದು ಹಸಿ ಶುದ್ಧ ಸುಳ್ಳನ್ನು ಉಪನ್ಯಾಸದಲ್ಲಿ ಹೇಳಿದ್ದಾರೆ. ಚೋಳರಲ್ಲಿ ಕ್ರಿಸ್ಟ ಶಕ ಪೂರ್ವದ ಅಶೋಕನ ಶಾಸನಗಳಲ್ಲಿ ತಮಿಳರ ಚೋಳರ ಬಗ್ಗೆ ಉಲ್ಲೇಖವಿದ್ದರೂ ಸಹಿತ ಮಧ್ಯಕಾಲೀನ ಇತಿಹಾಸದಲ್ಲಿ ಅದು ಕ್ರಿಸ್ತ ಶಕ 848 ರಲ್ಲಿ ಎಂದು ಆರಂಭವಾಗುತ್ತದೆ, ಕಕ್ಕಯ್ಯ ವಚನಾಕಾರನು 9 ನೇ ಶತಮಾನದವನೆಂದು ಹೇಳಿದ್ದು, ಕೆಂಭಾವಿ ಬೋಗಣ್ಣ ಕುಂಬಾರ ಗುಂಡಯ್ಯ ಶಂಕರ ದಾಸಿಮಯ್ಯ ಇವರೆಲ್ಲರೂ ಬಸವ ಪೂರ್ವಯುಗದ ಶರಣರು ಎಂದು ಯಾವುದೇ ಆಧಾರವಿರದೆ ಬುರುಡೆ ಬಿಟ್ಟರು. ಡಾ ಪಿ ವಿ ನಾರಾಯಣ ಅವರ ಉಲ್ಲೇಖವನ್ನು ಪ್ರಸ್ತುತಪಡಿಸುತ್ತ ದಾಸಿಮಯ್ಯನವರ ವಚನಗಳು ಬಸವ ಪೂರ್ವ ಎನ್ನಲೂ ಸಾಧ್ಯವಿಲ್ಲ ಎಂದು ಹೇಳಿದ್ದು ವಾಸುದೇವ ಅವರ ಮಾನಸಿಕ ಗೊಂದಲವನ್ನು ತೋರಿಸುತ್ತದೆ.
ದೇವರ ದಾಸಿಮಯ್ಯನವರ ಬಗೆಗಿನ ವಾಸುದೇವ ಬಡಿಗೇರ ಅವರ ಆಧಾರಗಳೇನು ?
16 ಮತ್ತು 17 ನೆಯ ಶತಮಾನದ ಅದೃಶ್ಯ ಕವಿ ಮತ್ತು ಭೈರವೇಶ್ವರ ಕಾವ್ಯದ ಕಥಾಮಣಿ ಸೂತ್ರ ರತ್ನಾಕರದ ಕರ್ತಾ ಶಾಂತಲಿಂಗ ದೇಶಿಕರ ಪವಾಡಗಳು, ವಿಚಿತ್ರದ ಸಂಗತಿಯೆಂದರೆ ವಾಸುದೇವ ಬಡಿಗೇರ ಅವರು ಪುರಾಣ ಪವಾಡಗಳನ್ನು ಆಕರ ಎಂದು ಪರಿಗಣಿಸಲಾಗುವುದಿಲ್ಲ ಎಂದೆನ್ನುತ್ತಲೇ ಇಂತಹ ವಿಷಯಗಳನ್ನು ಪ್ರಸ್ತಾಪ ಮಾಡಿದ್ದು ನಗೆ ಪಾಟಲಿಗೆ ಎಡೆ ಮಾಡಿತು, ವಿಶ್ವ ವಿದ್ಯಾಲಯದ ಈ ಪ್ರಾಧ್ಯಾಪಕರಿಗೆ ವಚನ ಸಾಹಿತ್ಯದ ಅಧ್ಯನದ ಕೊರತೆ ಇರಬಹುದು ಎಂದು ತಿಳಿದುಕೊಂಡಿದ್ದೆ, ಆದರೆ ಅವರ ಇತಿಹಾಸದ ಪ್ರಜ್ಞೆ ಮತ್ತು ಅಧ್ಯಯನದ ಕೊರತೆಯೂ ಎದ್ದು ಕಾಣುತ್ತಿತ್ತು. ಕಕ್ಕಯ್ಯ 9 ನೆಯ ಶತಮಾನದವನು ಎನ್ನುವ ಇವರಿಗೆ ಖಾನಾಪುರ ತಾಲೂಕಿನ ಕಕ್ಕೇರಿಯಲ್ಲಿರುವ ಕಕ್ಕಯ್ಯನ ಬಿಷ್ಟಾದೇವಿಯ ಸಮಾಧಿ ಸುಳ್ಳೇ ? ಕ್ಷೇತ್ರ ಕಾರ್ಯ ಭೌಗೋಲಿಕ ಆಕಾರ ಮತ್ತು ವಚನಗಳನ್ನು ಪರಿಗಣಿಸಬೇಕೆನ್ನುವ ವಾಸುದೇವ ಬಡಿಗೇರ ಅವರು ಏನೇನೋ ಕಲ್ಪಿಸಿ ಇತಿಹಾಸವನ್ನು ಹಿಗ್ಗಾ ಮುಗ್ಗಾ ಜಗ್ಗಾಡಿ ಶರಣ ಸಂಸ್ಕೃತಿಗೆ ಅಪಮಾನ ಮಾಡಿದ್ದಾರೆ.
ವಿದ್ಯಾವರ್ಧಕ ಸಂಘದಲ್ಲಿ ಇನ್ನೊಂದು ಬಹು ಚರ್ಚಿತ ಗೊಂದಲವೆಂದರೆ ಇನ್ನೊಬ್ಬ ಕನ್ನಡ ನಿವೃತ್ತ ಪ್ರಾಧ್ಯಾಪಕ ಡಾ ಶಾಮಸುಂದರ ಕೊಚ್ಚಿ ಇವರು ತಮ್ಮ ಅಧ್ಯಕ್ಷೀಯ ಭಾಷಣವನ್ನು ಮಾಡದೆ ಇನ್ನೊಂದು ಮಿನಿ ಉಪನ್ಯಾಸ ಮಾಡುತ್ತಾ ಲಿಂಗಾಯತ ಬಣಜಿಗರಿಗೆ ಲಿಂಗ ದೀಕ್ಷೆ ಕೊಟ್ಟವರೇ ದೇವಾಂಗದವರು ಎಂಬ ಶುದ್ಧ ಹಸಿ ಸುಳ್ಳನ್ನು ಹೇಳಿದ್ದು ಸಭೆಯಲ್ಲಿ ಬಸವಂತಪ್ಪ ತೋಟದ, ಮಹಾಂತೇಶ ನರೇಗಲ್, ಅನಿಲ ಅಂಗಡಿ ಮುಂತಾದವರಿಂದ ಸ್ವಲ್ಪ ಮಟ್ಟಿಗೆ ಪ್ರತಿ ರೋಧ ಬಂತು. ಹೀಗೆ ಒಂದು ಲಿಂಗಾಯತ ಸಮುದಾಯವನ್ನು ಗುರಿ ಮಾಡಿಕೊಂಡು ಕೊಚಿಯವರ ಸರಸ್ವತಿಕ ಲೋಕದಲ್ಲಿ ಕೊಚ್ಚಿಯಲ್ಲಿ ಕಲ್ಲು ಎಸೆದು ಮತ್ತಷ್ಟು ಗಬ್ಬು ಎಬ್ಬಿಸಬಾರದು. ಅವರು ಮಾತಾಡಿದ್ದು ದುರುದ್ದೇಶದ ಯೋಜನೆಯಾಗಿರಬಹುದು. ಇಂತಹ ವಿವಾದಾಸ್ಪದ ಉಪನ್ಯಾಸಗಳನ್ನು ಸಂಯೋಜಕರು ಬಲು ಎಚ್ಚರದಿಂದ ಸಂಘಟಿಸಲಿ.
ಕೆಲವರ ಜಾಣ ಮೌನ
ಈ ವಿಷಯವನ್ನು ನಾನು ಶ್ರೀ ಶಂಕರ ಹಲಗತ್ತಿ, ಶ್ರೀ ಶಂಕರ ಕುಂಬಿ, ಶ್ರೀಮತಿ ವಿಶ್ವೇಶ್ವರಿ ಹಿರೇಮಠ ಅವರಿಗೆ ಮೊದಲೇ ತಿಳಿಸಿದ್ದೆ. ಆದರೆ ಬಸವ ಸಮಿತಿಯ ಡಾ ಅರವಿಂದಣ್ಣ ಜತ್ತಿ, ಖ್ಯಾತ ಸಂಶೋಧಕ ಡಾ ವೀರಣ್ಣ ರಾಜೂರ ಅವರು ಮೌನಕ್ಕೆ ಜಾರಿದರು. ನಾನೂ ಕೂಡ 30 ವರ್ಷಗಳ ಹಿಂದೆ ದೇವರ ದಾಸಿಮಯ್ಯ ಮತ್ತು ಜೇಡರಾವ್ ದಾಸಿಮಯ್ಯ ಇಬ್ಬರೂ ಒಬ್ಬರೇ ಎಂದು ತಿಳಿದುಕೊಂಡವನು. ಒಮ್ಮೆ ಡಾ ಎಚ್ ಚಂದ್ರಶೇಖರ ಖ್ಯಾತ ಭೂಗರ್ಭ ವಿಜ್ಞಾನಿ ಮತ್ತು ಡಾ ಎಂ ಎಂ ಕಲಬುರ್ಗಿ ಗುರುಗಳ ಆಪ್ತ ನನಗೆ ಫೋನ್ ಮಾಡಿ ಇವರಿಬ್ಬರೂ ಬೇರೆ ಬೇರೆ ಎಂದು ತಿಳಿಸಿದರು. ಅದೇ ರೀತಿ ಡಾ ಎಂ ಚಿದಾನಂದ ಮೂರ್ತಿ ಸರ್ ಮತ್ತು ಡಾ ಎಸ್ ವಿದ್ಯಾಶಂಕರ ಅವರೊಂದಿಗೆ ಹಲವು ವಿಷಯದಲ್ಲಿ ಭಿನ್ನಾಭಿಪ್ರಾಯಗಳಿದ್ದರೂ ಸಹಿತ ದೇವರ ದಾಸಿಮಯ್ಯ ಮತ್ತು ಜೇಡರ ದಾಸಿಮಯ್ಯ ಇಬ್ಬರೂ ಬೇರೆ ಬೇರೆ ಎನ್ನುವಲ್ಲಿ ನಾವು ಪರಸ್ಪರ ಚರ್ಚಿಸಿದ್ದೆವು. ಅದೇ ರೀತಿ ಸಂಶೋಧನೆಗಳಲ್ಲಿ ಸಣ್ಣ ತಪ್ಪು ಕಂಡು ಬಂದರೂ ಸಹಿತ ಅದನ್ನು ತಿದ್ದಿಕೊಳ್ಳುವ ಕಾರ್ಯವನ್ನು ಡಾ ಎಂ ಎಂ ಕಲಬುರ್ಗಿ ಅವರು ಮಾಡುತ್ತಿದ್ದರು.
ಕರ್ನಾಟಕ ವಿದ್ಯಾವರ್ಧಕ ಸಂಘದ ಸತೀಶ್ ತುರಮರಿ ಶಿವಾನಂದ ಭಾವಿಕಟ್ಟಿ ಮುಂತಾದವರ ಜೊತೆಗೆ ಮಾತನಾಡಿದ್ದೇನೆ. ವಾಸುದೇವ ಬಡಿಗೇರ ಅವರು ಅವರ ಪುಸ್ತಕವನ್ನು ಒಮ್ಮೆ ಓದಲು ಸಲಹೆ ನೀಡಿದ್ದಾರೆ. ಆದರೆ ಅವರ ಕಪೋಲ ಕಲ್ಪಿತ ಗ್ರಹಿಕೆ ಪ್ರಮಾದಗಳ ವಿಷಯಗಳನ್ನು ಅವರ ಉಪನ್ಯಾಸದಲ್ಲಿ ಕೇಳಿದ ಮೇಲೆ ಆ ಪುಸ್ತಕು ಎಂತಹುದು ಇರಬಹುದು ಎಂದು ಗೊತ್ತಾಗುತ್ತದೆ.
ವಾಸುದೇವ ಬಡಿಗೇರ ಅವರು ನನಗೆ ದಾಖಲೆ ಕೊಡಲು ಹೇಳಿದ್ದಾರೆ. ಈ ಕೆಳಗಿನ ದಾಖಲೆ ಕೊಡುವುದಲ್ಲದೆ ತಾವು ಇಚ್ಛಿಸಿದಲ್ಲಿ ಚರ್ಚೆಗೆ ಬರಲು ನಾನು ಸಿದ್ಧ. ಇಂತಹ ಚರ್ಚೆಯು ಸೋಲು ಗೆಲುವು ಎಂದಾಗದೆ ಸತ್ಯದ ಚರಿತ್ರೆಯ ಸ್ಥಾಪನೆಯಾಗ ಬೇಕು. ನಮ್ಮ ಹೊಸ ಶೋಧಗಳು ಲಿಂಗ ಮೆಚ್ಚಿ ಅಹುದಹುದೆನ್ನ ಬೇಕು.
ಇನ್ನು ಕರ್ನಾಟಕ ವಿದ್ಯಾವರ್ಧಕ ಸಂಘವು ಇಂತಹ ಸೂಕ್ಶ್ಮಾತಿ ಸೂಕ್ಷ್ಮ ವಿಷಯಗಳ ಬಗ್ಗೆ ಉಪನ್ಯಾಸವನ್ನು ಸಂಘಟಿಸುವಲ್ಲಿ ಸ್ವಲ್ಪ ಎಚ್ಚರ ಕಾಳಜಿಯನ್ನು ವಹಿಸ ಬೇಕೆಂದು ಕರ್ನಾಟಕ ವಿದ್ಯಾವರ್ಧಕ ಸಂಘದ ಸರ್ವ ಪದಾಧಿಕಾರಿಗಳಲ್ಲಿ ವಿನಮ್ರವಾಗಿ ವಿನಂತಿಸುತ್ತೇನೆ. ಅದೇ ರೀತಿ ಕನ್ನಡದ ಅಸ್ಮಿತೆ ಹಂಪಿಯ ಕನ್ನಡ ವಿಶ್ವ ವಿದ್ಯಾಲಯದ ಕುಲಪತಿಗಳಾದ ಡಾ ಪರಮಶಿವಯ್ಯ ಮತ್ತು ಕುಲ ಸಚಿವರಾದ ಡಾ ವಿರುಪಾಕ್ಷಿ ಪೂಅಜರಹಳ್ಳಿ ಅವರು ಇಂತಹ ವಿವಾದಾಸ್ಪದ ಕೃತಿಗಳನ್ನು ನಿಗ್ರಹಿಸಿರಿ. ಸತ್ಯಾಸತ್ಯತೆ ಹೊರಬರಲಿ ಆದರೆ ಇಂತಹ ಅರ್ಥವಿರದ ಗೊಂದಲ ಸೃಷ್ಟಿಸುವ ಕೃತಿಗಳು ಕನ್ನಡ ವಿಶ್ವ ವಿದ್ಯಾಲಯಕ್ಕೆ ಕಪ್ಪು ಚುಕ್ಕೆ ತಾರದಿರಲಿ.
ಡಾ ವಾಸುದೇವ ಬಡಿಗೇರ ಅವರು ಇನ್ನೂ ಮುಂದಾದರೂ ಇಂತಹ ವಿವಾದಗಳ ದುಸ್ಸಾಹಸಕ್ಕೆ ಕೈ ಹಾಕದಿರಲೆಂದು ಅವರಲ್ಲಿ ಕೋರುತ್ತೇನೆ. ಶ್ರೀ ಪ್ರಸನ್ನ ರಾಮಚಂದ್ರ ಗೆದ್ದೆನ್ನವರ ಅವರ ದತ್ತಿಯ ಬಗ್ಗೆ ಇನ್ನೊಮ್ಮೆ ಆಲೋಚನೆ ಮಾಡಿ ನಿರ್ಧರಿಸಲಿ, ನನಗೆ ಶಿವ ಭಕ್ತ ದೇವರ ದಾಸಿಮಯ್ಯನವರ ಬಗ್ಗೆ ಗೌರವವಿದೆ. ಆದರೆ ಅವರು ಆದ್ಯ ವಚನಕಾರ ಜೇಡರ ದಾಸಿಮಯ್ಯನವರಲ್ಲ.
ಎಲ್ಲರಿಗೂ ಭಕ್ತಿಪೂರ್ವಕ ಶರಣಾರ್ಥಿ
ಬಾಕ್ಸ್ ೧
ನಾನು ಕಂಡುಕೊಂಡ ಆಕರಗಳು
1 ಡಾ ಎಚ ದೇವೀರಪ್ಪ ದೇವರ ದಾಸಿಮಯ್ಯ ಮತ್ತು ಜೇಡರಾವ್ ದಾಸಿಮಯ್ಯ ಬೇರೆ ಬೇರೆ
2 ಜೇಡರ ದಾಸಿಮಯ್ಯ – ಸಿರಿಗೇರಿ ಶ್ರೀ ಮಠದ ಪ್ರಕಾಶನ 1973
3 ಡಾ ಎಂ ಚಿದಾನಂದ ಮೂರ್ತಿ ಅವರ ವಚನ ಶೋಧ 1 2 3
4 ಡಾ ಎಂ ಎಂ ಕಲಬುರ್ಗಿ ಅವರ ಮಾರ್ಗ ಕೃತಿಗಳು
5 ಇಲ್ಲದ ಬೆಕ್ಕು ಕತ್ತಲೆಯಲ್ಲಿ ಹುಡುಕುವಂತೆ ಡಾ ವಿದ್ಯಾಶಂಕರ ಮತ್ತು ಡಾ ಎಂ ಚಿದಾನಂದ ಮೂರ್ತಿ ಕೃಪೆ: ಪ್ರಜಾವಾಣಿ » ಸಂಗತ, ಮಂಗಳವಾರ, ಮಾರ್ಚ 25, 2014
6 ನನ್ನ ಶರಣರು ದೇವರು ಮತ್ತು ನನ್ನ ಇನ್ನೂ ಅನೇಕ ಕೃತಿಗಳು
7 ವಚನ ಸಂಪುಟ
8 ತಾಡೋಲೆಗಳು
ಬಾಕ್ಸ್ ೨
ವಾಸುದೇವ ಬಡಿಗೇರ್ ಅವರಿಗೆ ನೇರ ಪ್ರಶ್ನೆಗಳು
1) ದೇವರ ದಾಸಿಮಯ್ಯ ವಚನಕಾರನಾಗಿದ್ದು ಬಸವಣ್ಣನವರ ಉಲ್ಲೇಖವನ್ನು ಮಾಡಿಲ್ಲ ಎನ್ನುವ ನೀವು ಇಮ್ಮಡಿ ಜಯಸಿಂಹನ ಉಲ್ಲೇಖವನ್ನು ತನ್ನ ವಚನದಲ್ಲಿ
ದಾಖಲಿಸಿದ್ದಾರೆಯೇ ?
2) ದಾಸಿಮಯ್ಯನ ಹೆಂಡತಿ ದುಗ್ಗಳೆ ಬಸವಣ್ಣ ಅಲ್ಲಮ ಚೆನ್ನ ಬಸವಣ್ಣ ಸಿದ್ಧರಾಮರನ್ನು ತನ್ನ ವಚನದಲ್ಲಿ ಉಲ್ಲೇಖ ಮಾಡಿದ್ದಾರೆ. ಹಾಗಿದ್ದಲ್ಲಿ ತನಗಿಂತ 140 ವರ್ಷಗಳ ನಂತರ ಬಂದ ಶರಣರನ್ನು ಹೆಸರಿಸಲು ಹೇಗೆ ಸಾಧ್ಯ?
3) ನೀವು ಕೊಟ್ಟ ಗುಡಿ ದೇವಾಲಯಗಳ ಶಾಸನಗಳನ್ನೇದಾರೂ ದಾಕಹಳೆಯಾಗಿ ಕೊಡ ಬಲ್ಲಿರಾ ?
4) ಬಸವೋತ್ತರ ಕಾಲದ ಅದೃಶ್ಯ ಕವಿ ಶಾಂತದೇಶಿಕರ ಕಾವ್ಯಗಳ ಕಥಾಪ್ರಸಂಗ ಪುರಾಣ ಪವಾಡಗಳು ನಿಮ್ಮ್ ಅರ್ಥದಲ್ಲಿ ಆಕರಗಳೇ ಹೇಗೆ ?
5) ಈ ಹಿಂದೆ ಬಸವಣ್ಣನವರ ಚರಿತ್ರೆಯ ಪುಸ್ತಕವನ್ನು ಬರೆಯುವ ಹುಮ್ಮಸದಲ್ಲಿ ಬಸವಣ್ಣನವರು ವಿಶ್ವ ಕರ್ಮದವರೆಂದು ಬಿಂಬಿಸಲು ಹೋಗಿ ನೀವು ಚರ್ಚೆಗೆ ಗುರಿಯಾಗಿದ್ದ ಹಾಗೆ ಮತ್ತೆ ಈಗ ಇಂತಹ ಪೊಳ್ಳು ಆಕರಗಳನ್ನು ಇಟ್ಟುಕೊಂಡು ಮತ್ತೆ ಅಪಹಾಸ್ಯಕ್ಕೆ ಗುರಿಯಾಗಬೇಡಿ
6) ಹಸ್ತ ಪ್ರತಿಗಳಲ್ಲಿ ಜೇಡರ ದಾಸಿಮಯ್ಯ ಎನ್ನುವುದು ತಮ್ಮ ಗಮನಕ್ಕೆ ಬಂದಿಲ್ಲವೇ ?
7) ಕೆಂಭಾವಿ ಭೋಗಣ್ಣ ಶಂಕರದಾಸಿಮಯ್ಯ ಕುಂಬಾರ ಗುಂಡಯ್ಯ ಮಾದಾರ ಚೆನ್ನಯ್ಯ ಕಕ್ಕಯ್ಯ ಮುಂತಾದ ಅನೇಕರು ನಿಮ್ಮ ಪ್ರಕಾರ ಬಸವ ಪೂರ್ವದವರೇ?
8) ಬಸವಣ್ಣನವರ ವಚನಗಳಲ್ಲಿ ದಾಸ ದುಗ್ಗಳೆಯರ ಉಲ್ಲೇಖವು ನಿಮ್ಮ ಗಮನಕ್ಕೆ ಬಂದಿಲ್ಲವೇ?
9) ವಚನ ದರ್ಶನದ ಮುಂದುವರೆದ ಭಾಗ ನಿಮ್ಮ ಈ ಹೊಸ ಶೋಧವೇ?


