ಪ್ರತಿಭಟನೆಯಲ್ಲಿ ರೈತರೊಂದಿಗೆ ಶಾಸಕ ರಾಜುಗೌಡ ಪಾಟೀಲ ಭಾಗಿ
ಆಲಮಟ್ಟಿ: ಚಿಮ್ಮಲಗಿ ಏತ ನೀರಾವರಿ ಯೋಜನೆಯ ವ್ಯಾಪ್ತಿಯ ನಾಗಠಾಣ ಶಾಖಾ ಕಾಲುವೆಗಳ ಮೂಲಕ ದೇವರಹಿಪ್ಪರಗಿ ತಾಲ್ಲೂಕಿನ 7 ಕೆರೆಗಳ ಭರ್ತಿಗೆ ನೀರು ಒದಗಿಸಲು ಆಗ್ರಹಿಸಿ ಆ ಭಾಗದ ನೂರಾರು ರೈತರು ಶುಕ್ರವಾರ ಇಲ್ಲಿ ಪ್ರತಿಭಟನೆ ನಡೆಸಿದರು.
ಚಿಮ್ಮಲಗಿ ಏತ ನೀರಾವರಿ ಯೋಜನೆಗೆ ನೀರು ಕಾಲುವೆಯ ಕೊನೆಯ ಭಾಗ 137 ಕಿ.ಮೀ ವರೆಗೆ ತಲುಪುವುದಿಲ್ಲ. ಇದರಿಂದ ಆ ಭಾಗದ ಕೆರೆಗಳ ಭರ್ತಿ ಆಗಿಯೇ ಇಲ್ಲ. ಅಲ್ಲಿ ಕುಡಿಯಲು ನೀರಿನ ಸಮಸ್ಯೆಯಿದೆ. ಕಾಲುವೆಯ ಕೊನೆ ಹಂತದವರೆಗೂ ನೀರು ಪೂರೈಕೆಯ ಬಗ್ಗೆ ಲಿಖಿತ ಭರವಸೆ ನೀಡುವವರೆಗೂ ಕದಲುವುದಿಲ್ಲ ಎಂದು ಅವರು ಹೇಳಿದರು.
ಅವರ ಪ್ರತಿಭಟನೆಗೆ ದೇವರಹಿಪ್ಪರಗಿಯ ಶಾಸಕ ರಾಜುಗೌಡ ಪಾಟೀಲ ಕೂಡಾ ಸಾಥ್ ನೀಡಿದರು.
ಸಭೆ: ಇಲ್ಲಿಯ ಮುಖ್ಯ ಎಂಜಿನಿಯರ್ ಕಚೇರಿಯ ಸಭಾಂಗಣದಲ್ಲಿ ಅಧಿಕಾರಿಗಳು, ರೈತರ ಮಧ್ಯೆ ಸಭೆ ನಡೆದು, ಅಲ್ಲಿ ವಿವಿಧ ಸಮಸ್ಯೆಗಳನ್ನು ಚರ್ಚಿಸಲಾಯಿತು.
ಕೊನೆಗೆ ಅ.28 ರಿಂದ ನ.4 ರವರೆಗೆ ಕಾಲುವೆಗೆ ನೀರು ಹರಿಸಲು ನಿರ್ಧರಿಸಲಾಯಿತು. ಅಲ್ಲಿಯವರೆಗೆ ನೀರು ಸರಾಗವಾಗಿ ಹರಿಯಬೇಕು ಎಂದು ರೈತರು ಆಗ್ರಹಿಸಿದರು.
ಅದಕ್ಕೂ ಮೊದಲು ಅನಧಿಕೃತವಾಗಿ ಬಳಸುವ ನೀರನ್ನು ಬಂದ್ ಮಾಡಬೇಕು, ಔಟ್ ಲೆಟ್ ಗಳನ್ನು ಸಂಪೂರ್ಣ ಬಂದ್ ಮಾಡಬೇಕು, ಕಾಲುವೆಯ ಕೊನೆಯವರೆಗೂ ನೀರು ಹರಿಯುವವರೆಗೂ ಅಧಿಕಾರಿಗಳು, ಪೊಲೀಸ್ ರ ಸಹಾಯ ಪಡೆದು ಕಾರ್ಯನಿರ್ವಹಿಸಬೇಕು ಎಂದು ರೈತರು ಆಗ್ರಹಿಸಿದರು.
ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಗಮನಕ್ಕೆ ತಂದು ಅವರ ಸಹಕಾರ ಪಡೆದು
ನಂತರ ಕೆಬಿಜೆಎನ್ ಎಲ್ ಅಧಿಕಾರಿಗಳು ಲಿಖಿತ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂದಕ್ಕೆ ಪಡೆಯಲಾಯಿತು.
ಶಾಸಕ ರಾಜುಗೌಡ ಪಾಟೀಲ, ಮುಖ್ಯ ಎಂಜಿನಿಯರ್ ಎಚ್.ಎನ್. ಶ್ರೀನಿವಾಸ, ಸೂಪರಿಂಟೆಂಡಿಂಗ್ ಎಂಜಿನಿಯರ್ ಡಿ.ಬಸವರಾಜು, ಗೋವಿಂದ ರಾಠೋಡ, ದೇವರಹಿಪ್ಪರಗಿಯ ವೀರಗಂಗಾಧರ ಸ್ವಾಮೀಜಿ, ರೈತರಾದ ರೈತರಾದ ಅಜೀಜ್ ಯಲಗಾರ, ಬಸನಗೌಡ ಬಿರಾದಾರ, ಶ್ರೀಕಾಂತ ಭಜಂತ್ರಿ, ರಾಮು ದೇಸಾಯಿ ಇನ್ನೀತರರು ಇದ್ದರು.


