ವಿಜಯಪುರ: ಗ್ರಾಮೀಣ ಭಾಗದ ಜನರು ಗುಳೆ ಹೋಗುವುದನ್ನು ತಪ್ಪಿಸುವ ಮತ್ತು ಅವರಿಗೆ ಉದ್ಯೋಗ ಖಾತರಿ ನೀಡುವ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಕೂಲಿ ಕಾರ್ಮಿಕರಿಗೆ ಅಕುಶಲ ಕೆಲಸ ಒದಗಿಸುವುದರ ಜತೆಗೆ ಅವರ ಜೀವನಾಧಾರಕ್ಕೆ ನೆರವಾಗುವ ವೈಯಕ್ತಿಕ ಕಾಮಗಾರಿಗಳಿಗೆ ನೀಡುತ್ತಿದ್ದ ರೂ. ೨.೫೦ ಲಕ್ಷ ಮೊತ್ತವನ್ನು ೫ ಲಕ್ಷ ರೂ.ಗೆ ಹೆಚ್ಚಿಸಿ ಸರ್ಕಾರ ಆದೇಶಿಸಿದೆ ಎಂದು ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಾಹುಲ್ ಶಿಂಧೆ ಅವರು ತಿಳಿಸಿದ್ದಾರೆ.
ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕೂಲಿಕಾರ್ಮಿಕರಿಗೆ ಅಕುಶಲ ಕೆಲಸ ಒದಗಿಸುವುದರ ಜೊತೆಗೆ ಅರ್ಹ ಫಲಾನುಭವಿಗಳಿಗೆ ಜೀವನಾಧಾರಕ್ಕೆ ನೆರವಾಗುವ ವೈಯಕ್ತಿಕ ಕಾಮಗಾರಿಗಳಾದ ಬದು ನಿರ್ಮಾಣ, ಕೃಷಿ ಹೊಂಡ, ಎರೆ ಹುಳು ತೊಟ್ಟಿ ಹಾಗೂ ಇತರೆ ನಿರ್ಮಾಣ ಒಳಗೊಂಡಂತೆ ಇತ್ಯಾದಿ ತಮ್ಮ ಆಸ್ತಿಗಳನ್ನು ಅಭಿವೃದ್ಧಿಪಡಿಸಿಕೊಳ್ಳುವ ಮೂಲಕ ಆರ್ಥಿಕ ಪರಿಸ್ಥಿತಿಯನ್ನು ಉತ್ತಮಪಡಿಸುವುದು ಈ ಯೋಜನೆಯ ಉದ್ದೇಶವಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲೆಮಾರಿ ಬುಡಕಟ್ಟುಗಳು, ಅಧಿಸೂಚನೆಯಿಂದ ಕೈಬಿಟ್ಟ ಬುಡಕಟ್ಟುಗಳು, ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳು, ಮಹಿಳಾ ಪ್ರಧಾನ ಕುಟುಂಬಗಳು, ವಿಶೇಷ ಚೇತನ ಕುಟುಂಬಗಳು, ಭೂ ಸುಧಾರಣಾ ಫಲಾನುಭವಿಗಳು, ವಸತಿ ಯೋಜನೆಯ ಫಲಾನುಭವಿಗಳು, ಅರಣ್ಯ ಹಕ್ಕು ಕಾಯ್ದೆ ೨೦೦೬ರ ಫಲಾನುಭವಿಗಳು, ಸಣ್ಣ ಮತ್ತು ಅತಿ ಸಣ್ಣ ರೈತರು ಸೇರಿದಂತೆ ಮಹಾತ್ಮ ಗಾಂಧಿ ನರೇಗಾ ಯೋಜನೆಯ ಅಧಿನಿಯಮ ೨೦೦೫ರ ಪ್ರಕಾರ ಅರ್ಹ ಕುಟುಂಬ ಈ ಯೋಜನೆಯ ಪ್ರಯೋಜನ ಪಡೆಯಬಹುದಾಗಿದೆ.
ಅರ್ಹ ಕುಟುಂಬದ ಫಲಾನುಭವಿಯು ನರೇಗಾ ಯೋಜನೆ ಜಾಬ್ ಕಾರ್ಡ್ ಹೊಂದಿರಬೇಕು. ಫಲಾನುಭವಿಗೆ ನೀಡಲಾದ ವೈಯಕ್ತಿಕ ಕಾಮಗಾರಿಗಳಲ್ಲಿ ಆ ಕುಟುಂಬದ ಒಬ್ಬ ಸದಸ್ಯ ಕೆಲಸ ನಿರ್ವಹಿಸಬೇಕು. ಈ ಷರತ್ತುಗಳಿಗೆ ಒಳಪಟ್ಟಲ್ಲಿ ನರೇಗಾ ಯೋಜನೆಯ ವೈಯಕ್ತಿಕ ಕಾಮಗಾರಿಗಳ ಜೀವಿತಾವಧಿಯಲ್ಲಿ ೫ ಲಕ್ಷ ರೂ.ವರೆಗೆ ಪಡೆಯಬಹುದಾಗಿದೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನರೇಗಾ: ವೈಯಕ್ತಿಕ ಕಾಮಗಾರಿ ಮೊತ್ತ ಹೆಚ್ಚಳ :ಜಿಪಂ ಸಿಇಓ ಶಿಂಧೆ
Related Posts
Add A Comment