ಇಂಡಿ, ಆಲಮೇಲ, ಸಿಂದಗಿ ಹಾಗೂ ದೇವರ ಹಿಪ್ಪರ ತಾಲೂಕಿಗೆ ಭೇಟಿ ನೀಡಿ ವಿವಿಧ ಕಾಮಗಾರಿ ಪರಿಶೀಲಿಸಿದ ಡಿಸಿ ಟಿ.ಭೂಬಾಲನ್
ವಿಜಯಪುರ: ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಶುಕ್ರವಾರ ಇಂಡಿ, ಆಲಮೇಲ, ಸಿಂದಗಿ ಹಾಗೂ ದೇವರ ಹಿಪ್ಪರಗಿ ತಾಲೂಕಿಗೆ ಭೇಟಿ ನೀಡಿ, ವಿವಿಧ ಕಾಮಗಾರಿಗಳ ಪರಿಶೀಲನೆ ನಡೆಸಿದರು.
ಇಂಡಿ ಸರ್ಕಾರಿ ಆಸ್ಪತ್ರೆಗೆ ದಿಢೀರನೆ ಭೇಟಿ ನೀಡಿ, ಆಸ್ಪತ್ರೆಯಲ್ಲಿ ರೋಗಿಗಳಿಗೆ ಒದಗಿಸುತ್ತಿರುವ ವೈದ್ಯಕೀಯ ಹಾಗೂ ಔಷಧೋಪಚಾರ ಹಾಗೂ ಹೊಂದಿರುವ ಸೌಲಭ್ಯಗಳ ಕುರಿತು ಪರಿಶೀಲನೆ ನಡೆಸಿದರು. ಅಲ್ಲಿನ ಸಿಬ್ಬಂದಿ ಹಾಜರಾತಿ ಪರಿಶೀಲಿಸಿ, ಗೈರುಹಾಜರಿದ್ದ ಸಿಬ್ಬಂದಿಗಳ ಮೇಲೆ ಶಿಸ್ತು ಕ್ರಮ ಜರುಗಿಸಲು ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದರು. ಇಂದಿರಾ ಕ್ಯಾಂಟೀನಿಗೆ ಭೇಟಿ ನೀಡಿ ಸಾರ್ವಜನಿಕರಿಗೆ ಒದಗಿಸುತ್ತಿರುವ ಆಹಾರದ ಗುಣಮಟ್ಟ ಮತ್ತು ಪ್ರಮಾಣದ ಕುರಿತಾಗಿ ಪರಿಶೀಲಿಸಿ, ಅಲ್ಲಿ ಸ್ವಚ್ಛತೆ ಕಾಪಾಡಲು ಸೂಚಿಸಿದರು. ಇಂಡಿ ಪುರಸಭೆಗೆ ಭೇಟಿ ನೀಡಿದ ಅವರು, ಆಸ್ತಿ ತೆರಿಗೆ, ಟ್ರೇಡ್ ಲೈಸೆನ್ಸ್, ವಾಣಿಜ್ಯ ಮಳಿಗೆಗಳ ಬಾಡಿಗೆ ವಸೂಲಾತಿ ಕುರಿತು ಪರಿಶೀಲನೆ ನಡೆಸಿದರು. ಇಂಡಿ ಮೆಗಾ ಮಾರುಕಟ್ಟೆಗೆ ಭೇಟಿ ನೀಡಿ, ಆರು ತಿಂಗಳೊಳಗೆ ಬಾಕಿ ಕಾಮಗಾರಿ ಪೂರ್ಣಗೊಳಿಸುವಂತೆಯೂ, ನಗರದ ಸ್ವಚ್ಛತೆ ಹಾಗೂ ಸೌಂದರ್ಯೀಕರಣಕ್ಕೆ ಆದ್ಯತೆ ನೀಡುವಂತೆ ಪುರಸಭೆ ಮುಖ್ಯಾಧಿಕಾರಿಗಳಿಗೆ ಸೂಚಿಸಿದರು. ಇಂಡಿ ನಗರದಲ್ಲಿ ಅಮೃತ ನಗರೋತ್ಥಾನ ಹಂತ-೪ರ ಕಾಮಗಾರಿಗಳ ಕುರಿತು ಪರಿಶೀಲನೆ ನಡೆಸಿದರು.
ದೇವರ ಹಿಪ್ಪರಗಿ ಪಟ್ಟಣ ಪಂಚಾಯತಿ ಒಣ ತ್ಯಾಜ್ಯ ಸಂಗ್ರಹ ಘಟಕಕ್ಕೆ ಭೇಟಿ ನೀಡಿ, ಎರೆ ಹುಳ ಗೊಬ್ಬರ ತಯಾರಿಕೆ ಹಾಗೂ ಪ್ಲಾಸ್ಟಿಕ್ ತ್ಯಾಜ್ಯವನ್ನು ಬೇರ್ಪಡಿಸಿರುವುದನ್ನು ಪರಿಶೀಲಿಸಿ, ಮುಖ್ಯಾಧಿಕಾರಿ ಹಾಗೂ ಆರೋಗ್ಯ ನಿರೀಕ್ಷಕರ ಕಾರ್ಯ ಪ್ರಶಂಸಿಸಿದರು.
ಇಂಡಿ, ಸಿಂದಗಿ ಹಾಗೂ ಪಟ್ಟಣ ಪಂಚಾಯತಿ ಆಲಮೇಲ, ದೇವರ ಹಿಪ್ಪರಗಿಯ ಪುರಸಭೆ ಮುಖ್ಯಾಧಿಕಾರಿಗಳಿಗೆ ಆಸ್ತಿ ತೆರಿಗೆ ವಸೂಲಾತಿ ಮತ್ತು ಮರು ಮೌಲ್ಯಮಾಪನ ಇತರ ಕುರಿತು ಕಟ್ಟುನಿಟ್ಟಾಗಿ ಸೂಚನೆ ನೀಡಿದರು. ನಗರ ಸ್ವಚ್ಛತೆ ಕಾಪಾಡಿಕೊಳ್ಳುವುದರ ಜೊತೆಗೆ ಸೌಂದರ್ಯೀಕರಣಕ್ಕೆ ಆದ್ಯತೆ ಮತ್ತು ಉದ್ಯಾನಗಳಲ್ಲಿ ಗಿಡಮರ ಬೆಳೆಸಲು ಹೇಳಿದರು.
ಇಂಡಿ, ಸಿಂದಗಿ, ಆಲಮೇಲ ಮತ್ತು ದೇವರಹಿಪ್ಪರಗಿ ತಹಶೀಲ್ದಾರರ ಕಚೇರಿಗೆ ಭೇಟಿ ನೀಡಿ, ಸರಕಾರದ ಸೌಲಭ್ಯಗಳನ್ನು ಸಾರ್ವಜನಿಕರಿಗೆ ಒದಗಿಸುವಂತೆಯೂ, ಯಾವುದೇ ಸಮಸ್ಯೆ ಬಾರದ ರೀತಿಯಿಂದ ಕಾರ್ಯ ನಿರ್ವಹಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ವಿಜಯಕುಮಾರ ಮೆಕ್ಕಳಕಿ, ಆಲಮೇಲ ತಹಶೀಲ್ದಾರ ಸುರೇಶ ಚವಲರ್, ಇಂಡಿ ತಹಶಿಲ್ದಾರ ಬಿ.ಎಸ್ ಕಡಕಬಾವಿ ಸಹಾಯಕ ಕಾರ್ಯಪಾಲಕ ಅಭಿಯಂತರರು ಅನಿಲ್ ಮುದ್ದಾ, ಕಾರ್ಯಪಾಲಕ ಅಭಿಯಂತರರು ಎಂ.ಎಲ್ ಪಡಗಾನೂರ, ಸೆರಿದಂತೆ ತಾಲೂಕಿನ ಅಧಿಕಾರಿ ಸಿಬ್ಬಂದಿ ಉಪಸ್ಥಿತರಿದ್ದರು.

