ಪಂಚರಾಜ್ಯ ಚುನಾವಣೆಯಲ್ಲಿ ಸೋಲಿನ ಭಯದಿಂದ ಮೋದಿ ಸರ್ಕಾರದ ಐಟಿ ದಾಳಿ | ತೆರಿಗೆ ವಂಚಕರ ವಿರುದ್ಧದ ಕ್ರಮಕ್ಕೆ ಸ್ವಾಗತ
ಬೆಂಗಳೂರು: ಪಂಚರಾಜ್ಯಗಳಲ್ಲಿನ ಚುನಾವಣೆ ಸೋಲಿನ ಭಯ ಮತ್ತು ಶ್ರೀಮಂತ ಉದ್ಯಮಿ–ಗುತ್ತಿಗೆದಾರರನ್ನು ಬ್ಲಾಕ್ ಮೇಲ್ ಮಾಡುವ ದುರುದ್ದೇಶದ ಕಾರಣಕ್ಕಾಗಿಯೇ ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಕರ್ನಾಟಕವೂ ಸೇರಿದಂತೆ ದೇಶದಾದ್ಯಂತ ಐಟಿ- ಇಡಿ ದಾಳಿಗಳನ್ನು ನಡೆಸುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಈ ಬಗ್ಗೆ ಬುಧವಾರ ಸರಣಿ ಟ್ವೀಟ್ ಮಾಡಿರುವ ಅವರು, ”ತಮ್ಮ ದುರುದ್ದೇಶ ಮತ್ತು ಭ್ರಷ್ಟತೆಯನ್ನು ಮುಚ್ಚಿಕೊಳ್ಳುವುದಕ್ಕಾಗಿಯೇ ಕಾಂಗ್ರೆಸ್ ವಿರುದ್ಧ ಆಧಾರರಹಿತ ಆರೋಪಗಳನ್ನು ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ನಡೆಸಲಾಗುತ್ತಿರುವ ಐಟಿ ದಾಳಿಗಳು ಮತ್ತು ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ಸಂಬಂಧ ಇಲ್ಲ, ಈ ಬಗ್ಗೆ ಯಾವುದಾದರೂ ಪುರಾವೆಗಳಿದ್ದರೆ ಕಾನೂನು ಪ್ರಕಾರ ಕ್ರಮಕೈಗೊಳ್ಳಲು ಅವರು ಸ್ವತಂತ್ರರಿದ್ದಾರೆ. ತೆರಿಗೆ ವಂಚಕರ ವಿರುದ್ಧದ ಕ್ರಮಗಳನ್ನು ನಾವು ಸ್ವಾಗತಿಸುತ್ತೇವೆ” ಎಂದಿದ್ದಾರೆ.
”ಗುತ್ತಿಗೆದಾರರು ಖೊಟ್ಟಿ ಖರೀದಿ ರಸೀದಿಗಳು ಮತ್ತು ಉಪಗುತ್ತಿಗೆದಾರರಿಂದ ಅಪ್ರಾಮಾಣಿಕವಾದ ಖರ್ಚುವೆಚ್ಚದ ದಾಖಲೆಗಳ ಮೂಲಕ ಅದಾಯವನ್ನು ಕಡಿಮೆಗೊಳಿಸಿ ತೆರಿಗೆ ವಂಚನೆ ಮಾಡಿರುವುದು ದಾಳಿಯಲ್ಲಿ ಪತ್ತೆಯಾಗಿದೆ ಎಂದು ಐಟಿ ಇಲಾಖೆಯೇ ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ. ಯಾವುದೇ ರಾಜಕೀಯ ಪಕ್ಷದ ಜೊತೆಗಿನ ವ್ಯವಹಾರದ ಬಗ್ಗೆ ಉಲ್ಲೇಖವನ್ನು ಇಲಾಖೆಯೇ ಮಾಡದೆ ಇರುವಾಗ ರಾಜ್ಯ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಕಾಂಗ್ರೆಸ್ ವಿರುದ್ಧ ಆರೋಪ ಮಾಡುತ್ತಿರುವುದು ಯಾಕೆ? ಇವರದ್ದೇ ಸರ್ಕಾರದ ವರಮಾನ ತೆರಿಗೆ ಇಲಾಖೆಯ ಮೇಲೆಯೂ ಇವರಿಗೆ ನಂಬಿಕೆ ಇಲ್ಲವೇ?” ಎಂದು ಪ್ರಶ್ನೆ ಮಾಡಿದ್ದಾರೆ.
”ಪಂಚರಾಜ್ಯಗಳಲ್ಲಿ ಮಾತ್ರವಲ್ಲ ಮುಂದಿನ ಲೋಕಸಭಾ ಚುನಾವಣೆಯಲ್ಲಿಯೂ ಬಿಜೆಪಿಯ ಸೋಲು ಬಹುತೇಕ ಖಾತರಿಯಾಗಿರುವ ಕಾರಣ ಬಿಜೆಪಿಗೆ ಹಿಂದಿನಂತೆ ಹಣ ಸಂಗ್ರಹವಾಗುತ್ತಿಲ್ಲ. ಕರ್ನಾಟಕದಲ್ಲಿ 40% ಕಮಿಷನ್ ನ ಬಹುದೊಡ್ಡ ಮೂಲ ಕೂಡಾ ನಿಂತುಹೋಗಿದೆ. ಇದಕ್ಕಾಗಿ ಶ್ರೀಮಂತ ಉದ್ಯಮಿಗಳು ಮತ್ತು ಗುತ್ತಿಗೆದಾರರನ್ನು ಬ್ಲಾಕ್ ಮೇಲ್ ಮಾಡಿ ಬೆದರಿಸಿ ಹಣ ವಸೂಲಿ ಮಾಡಲು ಐಡಿ-ಇಡಿ ದಾಳಿ ನಡೆಸಲಾಗುತ್ತಿದೆ” ಎಂದು ವಾಗ್ದಾಳಿ ನಡೆಸಿದ್ದಾರೆ.
”ತಮ್ಮ ಚುನಾವಣಾ ರಾಜಕೀಯಕ್ಕಾಗಿ ಯಾವ ಪಕ್ಷ ಹಣ ದೋಚುವುದರಲ್ಲಿ ತೊಡಗಿದೆ ಎನ್ನುವುದು ಚುನಾವಣಾ ಬಾಂಡ್ ಗಳ ಮೂಲಕ ಕೇಂದ್ರ ಬಿಜೆಪಿ ಸಂಗ್ರಹಿಸಿದ ಹಣದ ವಿವರವೇ ಸಾಕ್ಷಿಯಾಗಿದೆ. ಮಾರ್ಚ್ 2018ರಿಂದ ಜನವರಿ 2023ರ ವರೆಗಿನ ಅವಧಿಯಲ್ಲಿ 12,008 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್ ಗಳು ಮಾರಾಟವಾಗಿದ್ದು ಅದರಲ್ಲಿ ಬಿಜೆಪಿಗೆ ಸೇರಿರುವ ಬಾಂಡ್ ಗಳ ಒಟ್ಟು ಮೌಲ್ಯ 5272 ಕೋಟಿ ರೂಪಾಯಿ. ಈ ಹಣವನ್ನು ಉದ್ಯಮಿಗಳು ಸ್ವಯಿಚ್ಚೆಯಿಂದ ನೀಡಿದರೇ? ಇಲ್ಲವೇ ಬ್ಲಾಕ್ ಮೇಲ್ ನಡೆಸಲಾಗಿತ್ತೇ? ಎನ್ನುವುದನ್ನು ಅವರೇ ಸ್ಪಷ್ಟಪಡಿಸಬೇಕು” ಎಂದು ಆಗ್ರಹಿಸಿದ್ದಾರೆ.
ನಮಗೆ ಪ್ರಶ್ನಿಸಲು ಬಿಜೆಪಿಗೆ ನೈತಿಕತೆ ಇಲ್ಲ
”ಕೋಟ್ಯಂತರ ರೂಪಾಯಿ ಲಂಚ ಹೊಡೆಯುತ್ತಿದ್ದಾಗಲೆ ಸಿಕ್ಕಿಬಿದ್ದ ಶಾಸಕ ಮಾಡಾಳು ವಿರೂಪಾಕ್ಷಪ್ಪ ಜಾಮೀನು ಮೇಲೆ ಜೈಲಿನಿಂದ ಬಿಡುಗಡೆಯಾದಾಗ ಹೆಗಲ ಮೇಲೆ ಹೊತ್ತುಕೊಂಡು ಮೆರವಣಿಗೆ ನಡೆಸಿದ್ದ ರಾಜ್ಯ ಬಿಜೆಪಿ ನಾಯಕರು ಈಗ ಯಾವುದೋ ಖಾಸಗಿ ಗುತ್ತಿಗೆದಾರನ ಮನೆಯಲ್ಲಿ ಸಿಕ್ಕ ಹಣಕ್ಕಾಗಿ ನಮ್ಮ ರಾಜೀನಾಮೆ ಕೇಳುತ್ತಿದ್ದಾರೆ. ಈ ನೈತಿಕತೆ ಬಿಜೆಪಿಗೆ ಇದೆಯೇ?” ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
”ರಾಜ್ಯದಲ್ಲಿನ ಭ್ರಷ್ಟಾಚಾರದ ಇತಿಹಾಸವನ್ನು ತಿರುವಿಹಾಕಿದರೆ ಪುಟಪುಟಗಳಲ್ಲಿಯೂ ಬಿಜೆಪಿ ನಾಯಕರ ಮುಖಾರವಿಂದಗಳನ್ನು ಕಾಣಬಹುದಾಗಿದೆ. ಮಾಜಿ ಮುಖ್ಯಮಂತ್ರಿಗಳಾಧ ಬಿ.ಎಸ್. ಯಡಿಯೂರಪ್ಪ, ಮಾಜಿ ಸಚಿವರಾದ ಜನಾರ್ದನ ರೆಡ್ಡಿ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಕೃಷ್ಣಯ್ಯ ಶೆಟ್ಟಿ, ಮಾಜಿ ಶಾಸಕ ಸಂಪಂಗಿಯಿಂದ ಹಿಡಿದು ಇತ್ತೀಚಿನ ಮಾಡಾಳು ವಿರೂಪಾಕ್ಷಪ್ಪನವರ ವರೆಗೆ ರಾಜ್ಯ ಬಿಜೆಪಿ ನಾಯಕರೆಲ್ಲರೂ ಭ‍್ರಷ್ಟಾಚಾರದ ಆರೋಪದಲ್ಲಿ ಜೈಲು ಸೇರಿದವರಾಗಿದ್ದಾರೆ. ಇವರು ನಮ್ಮ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿ ಜನತೆಯೆದುರು ನಗೆಪಾಟಲಿಗೀಡಾಗಿದ್ದಾರೆ” ಎಂದು ಕಿಚಾಯಿಸಿದ್ದಾರೆ.

