ಪ್ರಶ್ನಿಸಿದ ಗ್ರಾಪಂ ಸದಸ್ಯ ಮನಿಯಾರ ಗೆ ಅವಾಚ್ಯ ಪದಗಳಿಂದ ನಿಂದನೆ-ಬೆದರಿಕೆ
ಚಡಚಣ: ತಾಲೂಕಿನ ಸಮೀಪದ ದೇವರ ನಿಂಬರಗಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ವಿಶ್ವನಾಥ ಮತ್ತು ಅಧ್ಯಕ್ಷ ಭೀಮನಗೌಡ ಬಿರಾದಾರ ಇವರಿಂದ ಅಧಿಕಾರ ದುರ್ಬಳಕೆಯಾಗುತ್ತಿದೆ ಎಂದು ಗ್ರಾಪಂ ಸದಸ್ಯ ಝಾಕೀರಸಾಬ ಮನಿಯಾರ ಆರೋಪಿಸಿದ್ದಾರೆ.
ಗ್ರಾಮ ಪಂಚಾಯತಿಗೆ ಇಲಾಖೆಯಿಂದ ೧೫ ನೇ ಹಣಕಾಸಿನ ಅಡಿಯಲ್ಲಿ ಬಿಡುಗಡೆಗೊಂಡಿರುವ ಹಣ ದುರ್ಬಳಕೆಯಾಗಿದೆ. ವಿವಿಧ ಕಾಮಗಾರಿಗಳಿಗೆ ಹಣ ವೆಚ್ಚವಾಗಿದೆ ಎಂದು ಹೇಳುತ್ತಿದ್ದಾರೆ. ಎಲ್ಲ ಹಣ ಬೋಗಸ್ ರೀತಿಯಲ್ಲಿ ದುರ್ಬಳಕೆಯಾಗಿದೆ. ಸರ್ಕಾರದಿಂದ ಹತ್ತು ಹಲವು ಯೋಜನೆಗಳಿಗೆ ನೀಡಿದ್ದ ಅನುದಾನದ ಹಂಚಿಕೆಯನ್ನು ಕೇಳಲು ಹೋದರೆ
ನನಗೆ ಅವಾಚ್ಯ ಪದಗಳಿಂದ ನಿಂದಿಸಿ ಬೆದರಿಕೆಯೊಡ್ಡಿದ್ದಾರೆ. ಅಲ್ಲದೆ ಅಭಿವೃದ್ಧಿ ಅಧಿಕಾರಿ ನನ್ನ ಮೇಲೆ ಅಟ್ರಾಸಿಟಿ ಕೇಸ್ ದಾಖಲಿಸಲು ಮುಂದಾಗುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ.
ಕೂಡಲೇ ಸಂಬಂದಿಸಿದ ಅಧಿಕಾರಿಗಳು ಇತ್ತ ಗಮನ ಹರಿಸಿ ಅನ್ಯಾಯದ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಕಾನೂನು ಕ್ರಮ ಜರುಗಿಸಬೇಕೆಂದು ಸದಸ್ಯ ಮನಿಯಾರ ಆಗ್ರಹಿಸಿದ್ದಾರೆ.