ಉದಯರಶ್ಮಿ’ ವರದಿಗೆ ತಕ್ಷಣ ಸ್ಪಂದಿಸಿದ ಪಪಂ ಮುಖ್ಯಾಧಿಕಾರಿ ಮುಲ್ಲಾ
ದೇವರಹಿಪ್ಪರಗಿ: ಪಟ್ಟಣದಲ್ಲಿ ಸ್ಥಳೀಯ ಆಡಳಿತವು ಬಹುದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಬೀದಿ ದೀಪಗಳನ್ನು ಅಳವಡಿಸುವುದರ ಮೂಲಕ ಸಾರ್ವಜನಿಕರ ಬೇಡಿಕೆ ಈಡೇರಿಸಿದೆ.
ಈ ಕುರಿತು ’ಉದಯರಶ್ಮಿ’ ಪತ್ರಿಕೆಯು ಅ.17 ರ ಸಂಚಿಕೆಯಲ್ಲಿ ಈ ಸಮಸ್ಯೆ ಕುರಿತು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯ ಕುರಿತು “ದೇವರಹಿಪ್ಪರಗಿಯಲ್ಲಿ ಬೆಳಗದ ಬೀದಿದೀಪಗಳು” ಶಿರೋನಾಮೆಯಡಿ ವಿವರವಾದ ವರದಿ ಪ್ರಕಟಿಸಿತ್ತು. ಇದಕ್ಕೆ ಸ್ಪಂದಿಸಿದ ಸ್ಥಳೀಯ ಆಡಳಿತವು ಬುಧವಾರ ಅಗತ್ಯವಿದ್ದಲ್ಲಿ ಬೀದಿದೀಪಗಳನ್ನು ಅಳವಡಿಸುವ ಕಾರ್ಯ ಮಾಡಿದೆ.
ಪಟ್ಟಣದ ಅಂಬೇಡ್ಕರ್ ವೃತ್ತದ ಹೈಮಾಸ್ಟ್ ದೀಪ ಸರಿಪಡಿಸುವುದರ ಜೊತೆಗೆ ಇಂಡಿ ರಸ್ತೆಯಲ್ಲಿನ ಬೀದಿದೀಪಗಳನ್ನು ರಿಪೇರಿಗೊಳಿಸುವ ಕುರಿತಂತೆ ಸೋಮವಾರವಷ್ಟೇ ಪತ್ರಿಕೆ ವರದಿ ಮಾಡಿತ್ತು. ವರದಿಗೆ ತಕ್ಷಣ ಸ್ಪಂದಿಸಿದ ಮುಖ್ಯಾಧಿಕಾರಿ ಎಲ್.ಡಿ.ಮುಲ್ಲಾ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಆಗಮಿಸಿ ಹೈಮಾಸ್ಟ್ ದೀಪ ಹಾಗೂ ಬೀದಿದೀಪಗಳನ್ನು ಸರಿಗೊಳಿಸಿ ಸಾರ್ವಜನಿಕರಿಗೆ ಹಾಗೂ ಮುಖ್ಯವಾಗಿ ನವರಾತ್ರಿ ಪೂಜೆ ಕೈಗೊಂಡಿರುವ ಮಹಿಳೆಯರ ಮನವಿಗೆ ಸ್ಪಂದಿಸಿದ್ದಾರೆ.
ದೀಪಗಳ ಕುರಿತು ಅಗತ್ಯ ಕ್ರಮ ಕೈಗೊಂಡ ಮುಖ್ಯಾಧಿಕಾರಿ ಹಾಗೂ ಸಿಬ್ಬಂದಿಯ ಕಾರ್ಯವನ್ನು ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಭಾಸ್ಕರ್ ಗುಡಿಮನಿ, ಕಾಶೀನಾಥ ತಳಕೇರಿ, ಜಾನು ಗುಡಿಮನಿ ಶ್ಲಾಘಿಸಿದ್ದಾರೆ.