ಊಟಕ್ಕೆಂದು ಹೋದ ಸ್ನೇಹಿತರು ಮಸಣ ಸೇರಿದರು | ರಸ್ತೆ ಬದಿ ನಿಂತವರಿಗೆ ಅಪ್ಪಳಿಸಿದ ಯಮಸ್ವರೂಪಿ ಲಾರಿ
ವಿಜಯಪುರ: ಹೈವೇ ಪಕ್ಕ ನಿಂತವರ ಮೇಲೆ ಲಾರಿಯೊಂದು ಹಾಯ್ದು ಹೋಗಿರುವ ಪರಿಣಾಮ ಸ್ಥಳದಲ್ಲಿಯೇ ನಾಲ್ವರು ಬೈಕ್ ಸವಾರರು ಅಸುನೀಗಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ.
ವಿಜಯಪುರ ನಗರದ ರಾಷ್ಟ್ರೀಯ ಹೆದ್ದಾರಿ 52 ಟೋಲ್ ನಾಕಾದ ಬಳಿ ಈ ದಾರುಣ ಘಟನೆ ಜರುಗಿದೆ.
ಮೃತ ಯುವಕರನ್ನು ನಗರದ ವಜ್ರ ಹನುಮಾನ ನಗರದ ನಿವಾಸಿಗಳಾದ ಶಿವಾನಂದ ಚೌಧರಿ (25), ಸುನೀಲ ಖಾನಾಪೂರ (26), ಈರಣ್ಣ ಕೋಲಾರ( 26), ಪ್ರವೀಣ ಪಾಟೀಲ್ (31) ಹಾಗೂ ಸುನೀಲ ತಂದೆ ಪ್ರಭು ಖಾನಾಪೂರ (26 ) ಎಂದು ಗೊತ್ತಾಗಿದೆ.
ಈ ನಾಲ್ವರೂ ಮೃತ ಯುವಕರು ಸ್ನೇಹಿತರಾಗಿದ್ದು ಊಟಕ್ಕೆಂದು ನಗರದ ಹೊರವಲಯದ ಹೊಟೇಲಿಗೆಂದು ತೆರಳಿ ಬೈಕ್ ಸಮೇತ ಹೈವೇ ಪಕ್ಕ ರಸ್ತೆ ಬದಿಗೆ ನಿಂತಾಗ ಯುವಕರ ಮೇಲೆ ವೇಗವಾಗಿ ಬಂದ ಲಾರಿಯೊಂದು ಇವರಿಗೆ ಡಿಕ್ಕಿಯಾದ ಪರಿಣಾಮ ಇವರೆಲ್ಲ ಸ್ಥಳದಲ್ಲಿಯೇ ದುರ್ಮರಣಕ್ಕೀಡಾಗಿದ್ದಾರೆ.
ಘಟನೆ ಬಳಿಕ ಲಾರಿ ಸಮೇತ ಚಾಲಕ ಪರಾರಿಯಾಗಿದ್ದಾನೆ.
ಅಪಘಾತದಲ್ಲಿ ಮೃತರಿಗೆ ಸೇರಿದ್ದ KA28 EZ 7126 ಹಾಗೂ KA28 W 9952 ನಂಬರಿನ ಪಲ್ಸರ್ ಹಾಗೂ ಸಿಬಿಝಡ್ ಈ ಎರಡೂ ಬೈಕುಗಳು ಜಖಂಗೊಂಡಿವೆ.
ಸ್ಥಳಿಯರ ಮಾಹಿತಿ ಪ್ರಕಾರ MH12 QW8521 ನಂಬರಿನ ಲಾರಿ ಎಂಬ ಮಾಹಿತಿ ದೊರೆತಿದೆ. ಸ್ಥಳಕ್ಕೆ ವಿಜಯಪುರ ಗ್ರಾಮೀಣ ವಿಭಾಗದ ಡಿವೈಎಸ್ಪಿ ಗಿರಿನಲ್ಲ ತಳಕಟ್ಟಿ ಹಾಗೂ ಇತರ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಿಜಯಪುರ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಊಟಕ್ಕೆಂದು ಹೊರಗೆ ಹೋದ ಈ ನತದೃಷ್ಟ ಯುವಕರು ಜವರಾಯನ ಪಾದ ಸೇರಿದ್ದು ವಿಧಿಯ ವೈಚಿತ್ರವೇ ಸರಿ.
![IMG 20231018 WA0015 1](https://udayarashminews.com/wp-content/uploads/2023/10/IMG-20231018-WA0015-1-880x1024.jpg)