ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ ಹೇಳಿಕೆ
ಗುತ್ತಿಗೆದಾರರ ಶೇ.75ರಷ್ಟು ಬಿಲ್ ಬಾಕಿ ಬಿಡುಗಡೆಗೆ ಮನವಿ | ಅಂಬಿಕಾಪತಿ ಮೇಲಿನ ಆರೋಪ ಸುಳ್ಳು | ಬಿಲ್ ಪೇಮೆಂಟ್‌ನಲ್ಲಿ ಅವ್ಯವಹಾರ
ಬೆಂಗಳೂರು: ಈ ಸರಕಾರದಲ್ಲೂ ಭ್ರಷ್ಟಾಚಾರ ಇದೆ, ಇಲ್ಲ ಎಂದರೆ ನನ್ನಂತಹ ಮೂರ್ಖ ಇನ್ನೊಬ್ಬನಿಲ್ಲ. ಭ್ರಷ್ಟಾಚಾರ ಇಲ್ಲ ಎಂದು ನಾನು ಎಲ್ಲೂ ಹೇಳಿಲ್ಲ. ಅದನ್ನು ತಡೆಗಟ್ಟಬೇಕು ಎಂದು ಹೇಳಿದ್ದೇನೆ ಎಂದು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ ಹೇಳಿದ್ದಾರೆ.
ಕೆ.ಕೆ.ಗೆಸ್ಟ್ ಹೌಸ್ ನಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರಕಾರದಲ್ಲಿ ಭ್ರಷ್ಟಾಚಾರ ಇದೆ. ಆದರೆ, ಅದು ಅಷ್ಟಾಗಿ ಕಂಡುಬರುತ್ತಿಲ್ಲ ಎಂದರು.
ಬಿಬಿಎಂಪಿಯ ಬಾಕಿ ಬಿಲ್ ವಿಚಾರ ಮಾತ್ರ ಸದ್ಯಕ್ಕೆ ಮಾತನಾಡಿದ್ದೇವೆ. ಶೇ.75ರಷ್ಟು ಬಿಲ್ ಬಾಕಿ ಬಿಡುಗಡೆ ಮಾಡಲು ಹೇಳಿದ್ದೇವೆ. ಡಿಸಿಎಂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಕಮಿಷನ್ ವಿಚಾರ ತನಿಖೆ ಮಾಡಿ ಎಂದಿದ್ದೇವೆ. ಶೇ.80ಕ್ಕಿಂತ ಹೆಚ್ಚು ಸಿನಿಯಾರಿಟಿ ಮೇಲೆ ಪೇಮೆಂಟ್ ಮಾಡುವ ಭರವಸೆ ಕೊಟ್ಟಿದ್ದಾರೆ. ಅಧಿಕಾರಿಗಳ ಮೇಲಿನ ಕಮಿಷನ್ ಆರೋಪದ ವಿಚಾರವಾಗಿ ಇವತ್ತಿಗೂ ನಾನು, ಈ ಹಿಂದಿನ ಮಾತಿನ ಮೇಲೆ ನಿಂತಿದ್ದೇನೆ. ದೊಡ್ಡ ಪ್ರಮಾಣದ ಕೆಲಸ ಗುತ್ತಿಗೆ ಪಡೆದಿಲ್ಲ. ಹೀಗಾಗಿ ಭ್ರಷ್ಟಾಚಾರ ಬೆಳಕಿಗೆ ಬರುತ್ತಿಲ್ಲ ಎಂದು ಹೇಳಿದರು.
ಡಿಸಿಎಂ ಅವರಿಗೂ ಈ ಸರಕಾರದಲ್ಲಿ ಕೂಡ ಭ್ರಭ್ರಷ್ಟಾಚಾರ ನಡೆಯುತ್ತಿದೆ ಎಂದು ಹೇಳಿದ್ದೇನೆ. ಆದರೆ, ಉನ್ನತ ಅಧಿಕಾರಿಗಳ ವಿರುದ್ಧ ನಾನು ದೂರು ಹೇಳಿಲ್ಲ. ಕೆಲವೊಂದು ಅಧಿಕಾರಿಗಳು ಅಂತ ಮಾತ್ರ ಹೇಳಿದ್ದೇನೆ. ಇವತ್ತು ಕೂಡ ಡಿಕೆಶಿ ಅವರಿಗೆ ಈ ಬಗ್ಗೆ ತಿಳಿಸಿದ್ದೇನೆ. ಸರಕಾರ ಬಂದು ಐದೂವರೆ ತಿಂಗಳುಗಳು ಮಾತ್ರವೇ ಕಳೆದಿವೆ. ಬಿಲ್ ಪೇಮೆಂಟ್‌ನಲ್ಲಿ ಅವ್ಯವಹಾರ ನಡೆಯುತ್ತಿದೆ. ಇದನ್ನು ಗಮನಕ್ಕೆ ತಂದಿದ್ದೇವೆ, ಸರಿ ಮಾಡುವ ಭರವಸೆಯನ್ನು ಉಪಮುಖ್ಯಮಂತ್ರಿಗಳು ನೀಡಿದ್ದಾರೆ ಎಂದು ಹೇಳಿದರು.
ಈ ಸರಕಾರದಲ್ಲೂ ಭ್ರಷ್ಟಾಚಾರ ಇದೆ. ಈಗ
ಎಸ್‌ಐಟಿ ತನಿಖೆಗೆ ನಾವು ಬೇಡ ಅಂದಿಲ್ಲ. ಸಮಸ್ಯೆ ಇರುವ ಬಿಲ್ ಇಟ್ಟುಕೊಳ್ಳಿ, ಬೇರೆ ಬಿಲ್ ಬಿಡುಗಡೆ ಮಾಡಿ. ಶೇ.75ರಷ್ಟು ಹಣ ಸಾಕಾಗಲ್ಲ ಎಂದು ಹೇಳಿದ್ದೇವೆ. ಕಮಿಷನರ್ ಕರೆದು ಮಾತನಾಡುತ್ತೇವೆ ಎಂದು ತಿಳಿಸಿದ್ದಾರೆ ಎಂದು ಕೆಂಪಣ್ಣ ಡಿಸಿಎಂ ಜೊತೆಗಿನ ಮಾತುಕತೆಯ ವಿವರವನ್ನು ನೀಡಿದರು.