ಮಾದ್ಯಮ ಸ್ವಾತಂತ್ರ್ಯದ ಮೇಲಿನ ದಾಳಿಯ ವಿರುದ್ಧ ಪತ್ರಕರ್ತರಿಂದ ಪ್ರೆಸ್ ಕ್ಲಬ್ ಆಫ್ ಇಂಡಿಯಾದಲ್ಲಿ ಅಹೋರಾತ್ರಿ ಪ್ರತಿಭಟನೆ
ನವದೆಹಲಿ: ಪತ್ರಿಕಾ ಸ್ವಾತಂತ್ರ್ಯದ ರಕ್ಷಣೆಗೆ ತಕ್ಷಣ ಮಧ್ಯಪ್ರವೇಶಿಸುವಂತೆ ಮಾದ್ಯಮ ಸಂಸ್ಥೆಗಳು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆದಿದ್ದು, ಮಾದ್ಯಮ ಸ್ವಾತಂತ್ರ್ಯದ ಮೇಲಿನ ದಾಳಿಯ ವಿರುದ್ಧ ಪತ್ರಕರ್ತರು ಪ್ರೆಸ್ ಕ್ಲಬ್ ಆಫ್ ಇಂಡಿಯಾದಲ್ಲಿ ಅಹೋರಾತ್ರಿ ಪ್ರತಿಭಟನೆಯನ್ನು ಕೂಡ ನಡೆಸಿದ್ದಾರೆ.
ಪ್ರೆಸ್ ಕ್ಲಬ್ ಆಫ್ ಇಂಡಿಯಾ, ಇಂಡಿಯನ್ ವುಮೆನ್ ಪ್ರೆಸ್ ಕಾರ್ಪ್ಸ್, ಪ್ರೆಸ್ ಅಸೋಸಿಯೇಷನ್, ದೆಹಲಿ ಯೂನಿಯನ್ ಆಫ್ ಜರ್ನಲಿಸ್ಟ್ಸ್, ಕೇರಳ ಯೂನಿಯನ್ ಆಫ್ ವರ್ಕಿಂಗ್ ಜರ್ನಲಿಸ್ಟ್ಸ್, ಡಿಜಿಪಬ್, ಫಾರಿನ್ ರೆಸ್ಪಾಂಡೆಂಟ್ ಕ್ಲಬ್, ವೆಟರನ್ ಜರ್ನಲಿಸ್ಟ್ ಗ್ರೂಪ್ ಮತ್ತು ಆಲ್ ಇಂಡಿಯಾ ಲಾಯರ್ಸ್ ಯೂನಿಯನ್ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆದಿವೆ. ವಾಕ್ ಸ್ವಾತಂತ್ರ್ಯ, ಉದ್ಯೋಗ ಮತ್ತು ನಮಗೆ ನೀಡಿರುವ ಸಂವಿಧಾನದತ್ತ ಸ್ವಾತಂತ್ರ್ಯಗಳನ್ನು ರಕ್ಷಿಸಲು ರಾಷ್ಟ್ರಪತಿಗಳ ಮಧ್ಯಸ್ಥಿಕೆಯನ್ನು ಅವರು ಕೋರಿದ್ದಾರೆ.
ಇಂದು ಭಾರತದಲ್ಲಿ ಸ್ವತಂತ್ರ ಮಾಧ್ಯಮಗಳು ಎದುರಿಸುತ್ತಿರುವ ಅಭೂತಪೂರ್ವ ಪರಿಸ್ಥಿತಿ ಬಗ್ಗೆ ರಾಷ್ಟ್ರಪತಿಗಳ ಗಮನ ಸೆಳೆಯಲಾಗಿದೆ. ಪತ್ರಕರ್ತರ ವಿರುದ್ಧ ಕಠಿಣ ಕಾನೂನುಗಳ ಬಳಕೆ ಹೆಚ್ಚಾಗಿದೆ. ಕಠಿಣ ಕಾನೂನುಗಳಲ್ಲಿ ಜೈಲು ವಾಸ ಕಾಯಂ ಆಗಿದೆ. ಇಂತಹ ಕಠಿಣ ಕಾನೂನುಗಳ ಅಡಿಯಲ್ಲಿ, ಲ್ಯಾಪ್‌ಟಾಪ್‌ಗಳು, ಹಾರ್ಡ್ ಡಿಸ್ಕ್‌ಗಳು ಮತ್ತು ಮೊಬೈಲ್ ಫೋನ್‌ಗಳಂತಹ ಸಾಧನಗಳನ್ನು ವಶಪಡಿಸಿಕೊಳ್ಳಲಾಗುತ್ತಿದೆ. ಆದ್ದರಿಂದ ಮಾದ್ಯಮ ಸ್ವಾತಂತ್ರ್ಯ ಮತ್ತು ಪತ್ರಕರ್ತರ ವೃತ್ತಿ ಹಾಗೂ ಬದುಕನ್ನು ರಕ್ಷಿಸಬೇಕು ಎಂದು ಒತ್ತಾಯಿಸಲಾಗಿದೆ.
ಇತ್ತೀಚೆಗೆ ನ್ಯೂಸ್‌ಕ್ಲಿಕ್ ಸಂಸ್ಥಾಪಕ ಪ್ರಬೀರ್ ಪುರಕಾಯಸ್ಥ ಮತ್ತು ಹೆಚ್‌ಆರ್(HR) ಅಮಿತ್ ಚಕ್ರವರ್ತಿ ಅವರನ್ನು ಯುಎಪಿಎ ಅಡಿಯಲ್ಲಿ ಬಂಧಿಸಲಾಗಿತ್ತು. 44 ಇತರ ಪತ್ರಕರ್ತರಿಗೆ ಸಂಬಂಧಿಸಿದ ಡಿಜಿಟಲ್ ಸಾಧನಗಳನ್ನು ಕೂಡ ವಶಪಡಿಸಿಕೊಳ್ಳಲಾಗಿತ್ತು. ಇದರ ಬೆನ್ನಲ್ಲೇ ಈ ಪತ್ರ ಬರೆಯಲಾಗಿದೆ.