ಆಲಮಟ್ಟಿ: ಬೆಳ್ಳಂ ಬೆಳಿಗ್ಗೆ ಕೆಂಪು ಕಲರವದ ನಾದ ಘಮಘಮಿಸಿ ಪರಿಮಳಿಸಿತ್ತು. ದೇಗುಲದ ಅಂಗಳದಲ್ಲಿ ಕೆಂಪು ನಾರಿಯರ ದಂಡವೇ ನೆರದಿತ್ತು. ಭಕ್ತಿಭಾವ ಮೇಳೈಸಿತ್ತು.
ಮಂಗಳವಾರ ನಸುಕಿನಲ್ಲೇ ಆಲಮಟ್ಟಿಗೆ ಸನಿಹದ ಚಿಮ್ಮಲಗಿ ಭಾಗ-1 ಎ ಗ್ರಾಮದ ಅಂಬಾಭವಾನಿ ದೇವಸ್ಥಾನದಲ್ಲಿ ಈ ವಿಶೇಷ ಭಕ್ತಿ ಅನುವರಣದ ದೃಶ್ಯ ವೈಭವ ಗೋಚರಿಸಿತು.
ಗ್ರಾಮದ ಹಾಗೂ ಸುತ್ತಲಿನ ಮಹಿಳೆಯರು ನವರಾತ್ರಿ ಹಬ್ಬದ ಮೂರನೇ ದಿನದಂದು ಕೆಂಪು ಸೀರೆಯನ್ನುಟ್ಟು ಅಂಬಾಭವಾನಿ ದರ್ಶನಕ್ಕಾಗಿ ದೇವಸ್ಥಾನಕ್ಕೆ ಪೂಜ್ಯ ಭಾವದಿ ಲಗ್ಗೆಯಿರಿಸಿ ತಮ್ಮ ಮನದಾಳದ ಭಕ್ತಿ ತರ್ಪಣ ಸಮಪಿ೯ಸಿದರು.
ನವರಾತ್ರಿ ಹಿನ್ನೆಲೆಯಲ್ಲಿ ಒಂಬತ್ತು ದಿನಗಳ ಕಾಲ ನಾನಾ ವಿಧವಾಗಿ ನವದುಗಾ೯ ಮಾತೆಯನ್ನು ಎಲ್ಲೆಡೆ ಭಜಿಸಲಾಗುತ್ತಿದೆ. ಇಲ್ಲಿಯೂ ನಿತ್ಯ ಅಧಿಪತ್ಯದ ದೇವತೆಯಾಗಿರುವ ಅಂಬಾಭವಾನಿ ಜಗನ್ಮಾತೆಯ ಪೂಜಾ-ಪುನಸ್ಕಾರ ಶ್ರದ್ಧಾ ಭಕ್ತಿಗಳಿಂದ ಮಹಿಳೆಯರು ನೆರವೇರಿಸುತ್ತಲ್ಲಿದ್ದಾರೆ. ತಾಯಿ ರೂಪದಲ್ಲಿ ಅಂಬಾಭವಾನಿ ದೇವಿಯನ್ನು ಆರಾಧಿಸಿ ಧ್ಯಾನ ಸ್ತುತಿ, ಆರ್ಚನೆ, ಭಜನೆ, ಪೂಜೆ ಸಲ್ಲಿಸುತ್ತಿದ್ದಾರೆ.
ಈ ವೇಳೆ ದೇವಸ್ಥಾನದ ಅರ್ಚಕ ರವಿ ಮಹೇಂದ್ರಕರ, ಗ್ರಾಮದ ಪ್ರಮುಖರಾದ ರಾಜೇಂದ್ರ ಬೊಮ್ಲೇಕರ್, ಕಾಶೀನಾಥ್ ಮಹೇಂದ್ರಕರ, ಜಗದೀಶ್ ಮಹೇಂದ್ರಕರ, ಶಂಕರ ರಾಠೋಡ, ಮಾತೆಯರಾದ ಅನಸೂಯಾ ರಾಠೋಡ, ಮಾದೇವಿ ಹಿರೇಮಠ, ಸವಿತಾ ಹಿರೇಮಠ, ವಿದ್ಯಾ ಮಹೇಂದ್ರಕರ, ಮಾದೇವಿ ಮಹೇಂದ್ರಕರ, ಭುವನೇಶ್ವರಿ ಗೋಕಲೆ, ಶಕುಂತಲಾ ಪತ್ತಾರ, ಮಂಜುಳಾ ಕ್ಷೀರಸಾಗರ, ಮಾನಂದಾ, ಬೋರಾ, ಭುವನೇಶ್ವರಿ, ಹುಂಡೇಕಾರ ಮೊದಲಾದವರಿದ್ದರು.
Related Posts
Add A Comment