ಅಥಣಿ ಪೊಲೀಸರ ಭರ್ಜರಿ ಕಾರ್ಯಾಚರಣೆ | ನಿರಂತರ ಕಾರ್ಯಾಚರಣೆಯಿಂದ ಮೊಬೈಲಗಳ ಪತ್ತೆ
ಉದಯರಶ್ಮಿ ದಿನಪತ್ರಿಕೆ
ಅಥಣಿ: ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕರ ದೈನಂದಿನ ಬದುಕಿನ ಅವಿಭಾಜ್ಯ ಅಂಗವಾಗಿರುವ ಮೊಬೈಲ್ ಫೋನ್‌ಗಳು ಕಳೆದುಹೋಗುವ ಪ್ರಕರಣಗಳು ಹೆಚ್ಚಾಗುತ್ತಿವೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು, ಅತ್ಯಾಧುನಿಕ CEIR (ಸಿ.ಇ.ಐ.ಆರ್) ಪೋರ್ಟಲ್ ತಂತ್ರಜ್ಞಾನವನ್ನು ಬಳಸಿಕೊಂಡು ಕಳೆದುಹೋದ ಮೊಬೈಲ್‌ಗಳನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದೆ.
ಬೆಳಗಾವಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಕೆ. ರಾಮರಾಜನ್ (IPS), ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಆರ್. ಬಿ. ಬಸರಗಿ ಹಾಗೂ ಅಥಣಿ ಉಪವಿಭಾಗದ ಡಿವೈಎಸ್‌ಪಿ ಪ್ರಶಾಂತ್ ಜಿ. ಮುನ್ನೊಳ್ಳಿ ಅವರ ಮಾರ್ಗದರ್ಶನದಲ್ಲಿ ವಿಶೇಷ ತಂಡಗಳನ್ನು ರಚಿಸಲಾಗಿತ್ತು. ಈ ತಂಡಗಳು ಕಳೆದ ಎರಡು ವರ್ಷಗಳಲ್ಲಿ ಕಾಣೆಯಾಗಿದ್ದ ಮೊಬೈಲ್‌ಗಳನ್ನು ಪತ್ತೆಹಚ್ಚಲು ನಿರಂತರ ಕಾರ್ಯಾಚರಣೆ ನಡೆಸಿ ಮೊಬೈಲಗಳನ್ನು ಪತ್ತೆಹಚ್ಚಿ.ದಿನಾಂಕ: 27-03-2026 ರಂದು ಪತ್ತೆಯಾದ 110 ಮೊಬೈಲ್ ಫೋನ್‌ಗಳನ್ನು ಅಥಣಿ ಪೊಲೀಸ್ ಸಮುದಾಯ ಭವನದ ಆವರಣದಲ್ಲಿ ಆಯಾ ವಾರಸುದಾರರಿಗೆ ಹಿಂದಿರುಗಿಸಲಾಗಿದೆ.
ಠಾಣಾವಾರು ಪತ್ತೆಯಾದ ಮೊಬೈಲ್‌ಗಳ ವಿವರ:
- ಅಥಣಿ ಪೊಲೀಸ್ ಠಾಣೆ: 37
- ಐಗಳಿ ಪೊಲೀಸ್ ಠಾಣೆ: 20
- ಕಾಗವಾಡ ಪೊಲೀಸ್ ಠಾಣೆ: 20
- ರಾಯಬಾಗ ಪೊಲೀಸ್ ಠಾಣೆ: 13
- ಹಾರೂಗೆರಿ ಪೊಲೀಸ್ ಠಾಣೆ: 10
- ಕುಡಚಿ ಪೊಲೀಸ್ ಠಾಣೆ: 10
ಸಾರ್ವಜನಿಕರ ಆಸ್ತಿಯನ್ನು ರಕ್ಷಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಕಾರ್ಯಪ್ರವೃತ್ತವಾಗಿದ್ದು, ಪ್ರತಿ ಪೊಲೀಸ್ ಠಾಣಾ ಮಟ್ಟದಲ್ಲಿ ಕಳುವಾದ ಅಥವಾ ಕಳೆದುಹೋದ ಮೊಬೈಲ್‌ಗಳನ್ನು ಪತ್ತೆಹಚ್ಚಲು ಒಬ್ಬ ನುರಿತ ಸಿಬ್ಬಂದಿಯನ್ನು ಪ್ರತ್ಯೇಕವಾಗಿ ನಿಯೋಜಿಸಲಾಗಿದೆ. ಉಳಿದ ಮೊಬೈಲ್‌ಗಳನ್ನು ಪತ್ತೆ ಹಚ್ಚುವ ಪ್ರಕ್ರಿಯೆಯು ತೀವ್ರಗತಿಯಲ್ಲಿ ಮುಂದುವರಿದಿದೆ ಎಂದು ಡಿವೈಎಸ್ಪಿ ಪ್ರಶಾಂತ್ ಮುನ್ನೊಳಿ ತಿಳಿಸಿದ್ದಾರೆ.
ತಮ್ಮ ಮೊಬೈಲ್ ಕಳೆದುಕೊಂಡಿದ್ದ ಸಾರ್ವಜನಿಕರು ಇಂದು ತಮ್ಮ ಫೋನ್‌ಗಳನ್ನು ಮರಳಿ ಪಡೆದು ಪೊಲೀಸರ ಕಾರ್ಯಕ್ಷಮತೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ವೇಳೆ ಸಿಪಿಐ ಸಂತೋಷ ಹಳ್ಳೂರ, ಸಿಪಿಐ ಮಲ್ಲಿಕಾರ್ಜುನ ಡಪ್ಪಿನ, ಪಿಎಸ್ಐ ಗಿರಮಲಪ್ಪ ಉಪ್ಪಾರ, ಐಗಳಿ ಪಿಎಸ್ಐ ಚಂದ್ರಶೇಖರ ಸಾಗನೂರ್,ರಾಘವೇಂದ್ರ ಖೋತ, ರಮೇಶ ತೆಲಸಂಗ, ಎಂ. ಏ. ಆಳಂದ, ಸಿಬ್ಬಂದಿಗಳಾದ ಜಮೀರ್ ಡಾಂಗೆ, ಎಸ್. ಏ. ಶೇಕ್, ಅಣ್ಣಪ್ಪ ಹಡಪದ್,ಧರ್ಮೇಂದ್ರ ಶ್ಯಾನವಾಡ,ಸುಧಾಕರ ಸನದಿ, ಧರೆಪ್ಪ ಧರಿಗೌಡರ ಸೇರಿದಂತೆ ಹಲವರು ಸಿಬ್ಬಂದಿ ಉಪಸ್ಥಿತರಿದ್ದರು.

