ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಪಟ್ಟಣ ಸೇರಿದಂತೆ ಮುಳಸಾವಳಗಿ ಗ್ರಾಮದಲ್ಲಿ ಶುಕ್ರವಾರ ಬೀಸಿದ ಭಾರಿ ಬಿರುಗಾಳಿ ಹಾಗೂ ಮಳೆಗೆ ಬೆಳೆಗಳು ನೆಲಕ್ಕೋರಗಿ ರೈತರು ಹಾನಿಗೀಡಾಗಿದ್ದಾರೆ.
ಶುಕ್ರವಾರ ರಾತ್ರಿ ಆರಂಭಗೊಂಡ ಮಳೆ ಹಾಗೂ ಬಿರುಗಾಳಿಗೆ ಮುಳಸಾವಳಗಿ ಗ್ರಾಮದ ಶಿವಪುತ್ರ ಬಂದ್ರೋಡ ಎಂಬುವವರ ೨ ಎಕರೆಯಲ್ಲಿನ ಜೋಳದ ಬೆಳೆ, ರಾಜಕುಮಾರ ಬಂದ್ರೋಡ ಎಂಬುವವರ ಎರಡು ಎಕರೆ ಮೆಕ್ಕೆಜೋಳ, ಸಾಹೇಬಗೌಡ ಹಿರ್ ಇವರ ಎರಡು ಎಕರೆ ಮೆಕ್ಕೆಜೋಳ ಮತ್ತು ಒಂದು ಎಕರೆ ಗೋಧಿ, ಲಗ್ಮವ್ವ ಬಂದ್ರೋಡ ಎಂಬುವವರ ೧ ಎಕರೆ ಮೆಕ್ಕೆಜೋಳ ನೆಲಕ್ಕೆ ಬಿದ್ದು ಹಾಳಾಗಿದೆ. ಇನ್ನೂ ಪಟ್ಟಣದ ಇಂಡಿ ರಸ್ತೆಯಲ್ಲಿನ ೧೦೦೮ ಪಂಚಾಚಾರ್ಯ ಕಲ್ಯಾಣ ಮಂಟಪದ ಮುಂಭಾಗದ ಗ್ಲಾಸ್‌ಗಳು ಒಡೆದಿದ್ದು ಸಾಕಷ್ಟು ಹಾನಿ ಸಂಭವಿಸಿದೆ.
ರಾತ್ರಿ ಸುಮಾರು ಒಂದು ಗಂಟೆ ಕಾಲ ಸುರಿದ ಗುಡುಗು, ಮಿಂಚು ಸಹಿತ ಮಳೆಯಿಂದ ಯಾವುದೇ ಹೆಚ್ಚಿನ ಹಾನಿಯಾಗಿಲ್ಲವಾದರೂ, ರಭಸವಾಗಿ ಬೀಸಿದ ಗಾಳಿ ಮಾತ್ರ ರೈತ ಸಮುದಾಯಕ್ಕೆ ಸಾಕಷ್ಟು ಹಾನಿ ಮಾಡಿದೆ.

