ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ದೈವಸ್ವರೂಪಿ ಸಂತ, ಫಕೀರ, ಅವತಾರ ಪುರುಷ ಮತ್ತು ಸದ್ಗುರು ಶ್ರೀ ಸಾಯಿಬಾಬಾ ಅವರು ಜನಹಿತ, ಸಮಾಜ ಕಲ್ಯಾಣಕ್ಕಾಗಿ ಅನೇಕ ಕಷ್ಟ-ಸಂಕಷ್ಟಗಳನ್ನು ಎದುರಿಸಿ, ತಮ್ಮ ಪವಾಡಗಳ ಮೂಲಕ ವಿಶ್ವದೆಲ್ಲೆಡೆ ಆರಾಧಿಸುವ ದೇವರಾದರು. ಅಧ್ಯಾತ್ಮಿಕ ಸಾಧಕರಾಗಿದ್ದ ಶ್ರೀ ಸಾಯಿಬಾಬಾ ಅವರು ದೇವನೊಬ್ಬ ನಾಮ ಹಲವು ಎಂಬ ಸಂದೇಶ ಸಾರುತ್ತಾ, ಭಕ್ತಿಯೋಗ, ಜ್ಞಾನ ಯೋಗ, ಕರ್ಮಯೋಗ ಮತ್ತು ಆತ್ಮ ಸಾಕ್ಷಾತ್ಕಾರಗಳ ಮೂಲಕ ಸರ್ವೇ ಜನಾಃ ಸುಖಿನೋ ಭವಂತು ಎಂಬ ಸಾಮಾಜಿಕ ಕಲ್ಯಾಣಕ್ಕಾಗಿ ಧಾರ್ಮಿಕ ಚಿಂತನೆ ನಡೆಸಿದ ಶ್ರೇಷ್ಠ ಸಂತರಾಗಿದ್ದರು ಎಂದು ಪ್ರೊ. ಎಂ.ಎಸ್.ಖೊದ್ನಾಪೂರ ಅಭಿಪ್ರಾಯಪಟ್ಟರು.
ಅವರು ನಗರದ ಅಥಣಿ ರಸ್ತೆಯಲ್ಲಿರುವ ಅಲ್-ಅಮೀನ್ ಆಸ್ಪತ್ರೆ ಎದುರಿಗೆ ಇರುವ ಎನ್.ಜಿ.ಓ ಕಾಲನಿಯಲ್ಲಿ ರಾಮ ನವಮಿ ಉತ್ಸವದ ಅಂಗವಾಗಿ ಸಾಯಿಬಾಬಾ ದೇವಸ್ಥಾನದಲ್ಲಿ ನಡೆದ ಹೋಮ-ಹವನ, ಮಹಾಪೂಜೆ ಮತ್ತು ಮಹಾಪ್ರಸಾದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಅವರು ಮಾತನಾಡುತ್ತಾ, ಶ್ರದ್ಧಾ ಮತ್ತು ಸಬೂರಿ ಎಂಬ ಸಂದೇಶ ಸಾರಿದ ಶ್ರೀ ಸಾಯಿಬಾಬಾ ಇಂದು ವಿಶ್ವದೆಲ್ಲೆಡೆ ಭಕ್ತಿ-ಭಾವದಿಂದ ಪೂಜಿಸುವ ದೇವರಾಗಿದ್ದಾರೆ. ನಮ್ಮಲ್ಲಿರುವ ಕಾಮ, ಕ್ರೋಧ, ಮದ, ಮೋಹ, ಲೋಭ ಮತ್ತು ಮತ್ಸರಗಳೆಂಬ ಅರಿಷಡ್ವರ್ಗಗಳನ್ನು ತ್ಯಜಿಸಿ ಜೀವನದಲ್ಲಿ ಪ್ರೀತಿ, ಶಾಂತಿ, ನೆಮ್ಮದಿ, ಸಮಾನತೆ, ಸಾಮರಸ್ಯತೆ, ಸಂಸ್ಕೃತಿ-ಸಂಸ್ಕಾರ, ಧರ್ಮಸಹಿಂಷ್ಣುತೆ, ನಾವೆಲ್ಲರೂ ಒಂದೇ ಎಂಬ ಭಾವ ಒಡಮೂಡಲು ಧಾರ್ಮಿಕ ಮತ್ತು ಅಧ್ಯಾತ್ಮಿಕತೆಯ ಕಾರ್ಯದಲ್ಲಿ ತೊಡಗಬೇಕು ಎಂದರು.
ಇದೇ ಸಂದರ್ಭದಲ್ಲಿ ಉಮೇಶ ವಂದಾಲ, ಕಾರ್ಪೋರೇಟರ್ ರಾಜಶೇಖರ ಕುರಿ, ಬಸಪ್ಪ ಬಾಗೇವಾಡಿ, ರಾವಸಾಬ ಮೆಣಸಂಗಿ, ಮಡಿವಾಳ ಮಾಕೊಂಡ ಇನ್ನಿತರನ್ನು ಸನ್ಮಾನಿಸಲಾಯಿತು.
ಈ ಸಮಾರಂಭದಲ್ಲಿ ಸಾಯಿಬಾಬಾ ಸೇವಾ ಸಮೀತಿಯ ಸದಸ್ಯರಾದ ಪಂಕಜ ಪೋಳ, ಸಂಪತ್‌ಕುಮಾರ ಕುಲಕರ್ಣಿ, ಅಪ್ಪು ಇಂಗಳೆ, ನಾರಾಯಣ ಇಂಗಳೆ, ಧನರಾಜ ಪೋಳ, ಪ್ರಭು ಬಳೂಲಗಿಡದ, ಶರತ ಬಾಗೇವಾಡಿ, ರಾಜೇಂದ್ರ ಕಬಾಡೆ, ಗೋಲ್ಲಾಳ ಎಚ್ಚಿ, ದೇವಸ್ಥಾನದ ಸಮೀತಿ ಸದಸ್ಯರು ಉಪಸ್ಥಿತರಿದ್ದರು.

