ಉದಯರಶ್ಮಿ ದಿನಪತ್ರಿಕೆ
ಜಮಖಂಡಿ: ತಾಲೂಕಿನ ಮುತ್ತೂರ ಗ್ರಾಮದಲ್ಲಿ ಬಿಎಲ್‌ಡಿಇ ಸಂಸ್ಥೆಯ ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್) ವಿಶೇಷ ಶಿಬಿರದ ಅಂಗವಾಗಿ ಜಾನುವಾರುಗಳ ಉಚಿತ ತಪಾಸಣೆ ಹಾಗೂ ಚಿಕಿತ್ಸೆ ಶಿಬಿರ ಗುರುವಾರ ಯಶಸ್ವಿಯಾಗಿ ನಡೆಯಿತು.
ತಾಲೂಕಿನ ತುಂಗಳ ಗ್ರಾಮದ ದಿವಂಗತ ಬಾಲವ್ವ ಪಾಂಡಪ್ಪ ಗಿರಡ್ಡಿ ಅವರ ಸ್ಮರಣಾರ್ಥವಾಗಿ, ಜಮಖಂಡಿಯ ಬಸವಜ್ಯೋತಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಡಾ.ಟಿ.ಪಿ. ಗಿರಡ್ಡಿ ಅವರ ಪ್ರಾಯೋಜಕತ್ವದಲ್ಲಿ ಈ ಶಿಬಿರ ಆಯೋಜಿಸಲಾಯಿತು. ಮುತ್ತೂರ ಗ್ರಾಮದ ಹಿರಿಯರಾದ ಭೀಮಪ್ಪ ಹಿಪ್ಪರಗಿ ಅವರು ಗೋವು ಪೂಜೆ ನೆರವೇರಿಸುವ ಮೂಲಕ ಶಿಬಿರಕ್ಕೆ ಚಾಲನೆ ನೀಡಿದರು.
ಶಿಬಿರದಲ್ಲಿ ಆಕಳು, ಎಮ್ಮೆ, ಆಡು, ನಾಯಿ ಸೇರಿದಂತೆ ವಿವಿಧ ಜಾನುವಾರುಗಳ ಆರೋಗ್ಯ ತಪಾಸಣೆ ನಡೆಸಿ, ಚುಚ್ಚು ಮದ್ದು, ಮಾತ್ರೆಗಳು, ಔಷಧಿ ಹಾಗೂ ಪೌಡರ್‌ಗಳನ್ನು ನೀಡಿ ಚಿಕಿತ್ಸೆ ನೀಡಲಾಯಿತು. ಜಾನುವಾರುಗಳ ಮಾಲೀಕರಿಗೆ ಅಗತ್ಯ ಔಷಧಿಗಳನ್ನು ವಿತರಿಸಲಾಯಿತು.
ಜಮಖಂಡಿಯ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಮುಖ್ಯ ಪಶು ವೈದ್ಯಾಧಿಕಾರಿ ಡಾ.ಸಿ.ಎಸ್. ನಿಂಬಾಳ, ಡಾ.ಆರ್.ಬಿ.ನಾಗರಳ್ಳಿ, ಮುತ್ತೂರಿನ ಪಶು ಚಿಕಿತ್ಸಾಲಯದ ಹಿರಿಯ ಪಶು ವೈದ್ಯಾಧಿಕಾರಿ ಡಾ.ಯಲ್ಲಪ್ಪ ಅಥಣಿ, ಕಿರಿಯ ಪಶುವೈದ್ಯಕೀಯ ಪರಿವೀಕ್ಷಕ ಈಶ್ವರ ಅಕ್ಕಿ ಹಾಗೂ ಎನ್‌ಎಸ್ಎಸ್ ಶಿಬಿರಾರ್ಥಿಗಳು ಶಿಬಿರದ ಯಶಸ್ಸಿಗೆ ಸಹಕರಿಸಿದರು. ರಾಷ್ಟ್ರೀಯ ಸೇವಾ ಯೋಜನಾಧಿಕಾರಿಗಳಾದ ಡಾ. ತಿಪ್ಪೇಸ್ವಾಮಿ ಹಾಗೂ ಡಾ. ವಿ.ಎಸ್. ಕುಲಕರ್ಣಿ ಶಿಬಿರದ ಮೇಲುಸ್ತುವಾರಿ ವಹಿಸಿದ್ದರು.

