ಉದಯರಶ್ಮಿ ದಿನಪತ್ರಿಕೆ
ಜಮಖಂಡಿ: ಲಿಂಗ ದೀಕ್ಷೆ ಎಂದರೆ ಆತ್ಮಶುದ್ಧಿ, “ಲಿಂಗ ದೀಕ್ಷೆ ಎನ್ನುವುದು ಕೇವಲ ಬಾಹ್ಯ ಕ್ರಿಯೆಯಲ್ಲ, ಅದು ಅಂತರಂಗದ ಅರಿವನ್ನು ಜಾಗೃತಗೊಳಿಸುವ ಪ್ರಕ್ರಿಯೆ. ಶರೀರಕ್ಕೆ ಸ್ನಾನ ಹೇಗೋ, ಆತ್ಮಕ್ಕೆ ಲಿಂಗ ದೀಕ್ಷೆ ಹಾಗೆ ಸಂಸ್ಕಾರ ನೀಡುತ್ತದೆ,” ಎಂದು ಡಾ ಅಲ್ಲಮಪ್ರಭು ಮಹಾಸ್ವಾಮಿಗಳು ಹೇಳಿದರು
ಜಮಖಂಡಿ ತಾಲೂಕಿನ ತುಬಚಿ ಗ್ರಾಮದ ಶಿವಲಿಂಗೇಶ್ವರ ಜಾತ್ರಾ ಮಹೋತ್ಸವದ ಪುಣ್ಯ ಸಂದರ್ಭದಲ್ಲಿ ಇಲ್ಲಿನ ಶ್ರೀಮಠದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಸುಮಾರು 250ಕ್ಕೂ ಹೆಚ್ಚು ಜನರಿಗೆ ಲಿಂಗ ದೀಕ್ಷೆ ನೀಡಿ ಬಸವಣ್ಣವರ ವಾಣಿಯಂತೆ ಕಾಯಕವೇ ಕೈಲಾಸ ಪ್ರತಿಯೊಬ್ಬರೂ ತಮ್ಮ ದೈನಂದಿನ ಕಾಯಕದಲ್ಲಿ ನಿಷ್ಠೆ ಹೊಂದಿರಬೇಕು ಮತ್ತು ಅರಿವಿನ ದಾರಿಯಲ್ಲಿ ಸಾಗಬೇಕು ಎಂದು ಅವರು ಕರೆ ನೀಡಿದರು.
ಶೇಗುಣಸಿಯ ಮಹಾಂತಪ್ರಭು ಸ್ವಾಮೀಜಿಯವರು ಮಾತನಾಡಿ, ಲಿಂಗ ಧರಿಸಿದ ನಂತರ ಸಾತ್ವಿಕ ಜೀವನ ನಡೆಸುವುದು, ಅಹಿಂಸೆ ಮತ್ತು ಸತ್ಯದ ಹಾದಿಯಲ್ಲಿ ನಡೆಯುವುದು ಮುಖ್ಯ ಎಂದು ಕಿವಿಮಾತು ಹೇಳಿದರು.
ಗುರು-ಹಿರಿಯರ ಸಮ್ಮುಖದಲ್ಲಿ ನಡೆದ ಈ ಪವಿತ್ರ ಕಾರ್ಯಕ್ರಮದಲ್ಲಿ ಭಕ್ತರು ಮಠದ ಆವರಣದಲ್ಲಿ ಶ್ರದ್ಧಾ ಭಕ್ತಿಯಿಂದ ಪಾಲ್ಗೊಂಡಿದ್ದರು. ಶ್ರೀಮಠದ ಪೂಜ್ಯರು ಭಕ್ತರಿಗೆ ಇಷ್ಟಲಿಂಗ ಪ್ರದಾನ ಮಾಡಿ, ಪೂಜಾ ವಿಧಿವಿಧಾನಗಳನ್ನು ಬೋಧಿಸಿದರು.
ಬೆಳಿಗ್ಗೆಯಿಂದಲೇ ಶ್ರೀಮಠದಲ್ಲಿ ವಿಶೇಷ ಪೂಜೆ ಹಾಗೂ ಮಂತ್ರಘೋಷಗಳ ಮೂಲಕ ದೀಕ್ಷಾ ಕಾರ್ಯಕ್ರಮ ಆರಂಭವಾಯಿತು. ನೂರಾರು ಮಹಿಳೆಯರು, ಪುರುಷರು ಮತ್ತು ಮಕ್ಕಳು ಸಕ್ರಿಯವಾಗಿ ಪಾಲ್ಗೊಂಡಿದ್ದರು.
ದೀಕ್ಷೆ ಪಡೆದ ನಂತರ ಎಲ್ಲಾ ಭಕ್ತರಿಗೆ ಶಿವಲಿಂಗೇಶ್ವರ ಶ್ರೀಮಠದಲ್ಲಿ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು
ಈ ಸಂದರ್ಭದಲ್ಲಿ ಬೀಳಗಿಯ ಗುರುಪಾದ ಶಿವಾಚಾರ್ಯರು ಹಾಗೂ ವೀರಸಿದ್ದ ದೇವರು, ಶಿವಬಸವ ದೇವರು, ಚಂದ್ರಶೇಖರ್ ದೇವರು, ಅನೇಕ ಪೂಜ್ಯರು ಉಪಸ್ಥಿತರಿದ್ದರು

