ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಮಡಿವಾಳ ಮಾಚಿದೇವರ ರಥೋತ್ಸವ ಹಾಗೂ ಪಲ್ಲಕ್ಕಿ ಮಹೋತ್ಸವ ಸಾವಿರಾರು ಭಕ್ತವೃಂದದೊಂದಿಗೆ ವಿಜೃಂಭಣೆಯಿಂದ ಜರುಗಿತು.
ಪಟ್ಟಣದಲ್ಲಿ ಮಾಚಿದೇವರ ರಥೋತ್ಸವದ ಅಂಗವಾಗಿ ಗುರುವಾರ ಗದ್ದುಗೆಮಠದಲ್ಲಿ ಸಾಂಪ್ರದಾಯಿಕವಾಗಿ ನಡೆದು ಬಂದ ಪೂಜಾ ವಿಧಿವಿಧಾನಗಳು ಬೆಳಿಗ್ಗೆ ಹೋಮ ಹವನದೊಂದಿಗೆ ಆರಂಭಗೊಂಡವು. ನಂತರ ‘ಆರಾ’ ಎಂದೇ ಕರೆಯಲಾಗುವ ಪ್ರಕೃತಿಗೆ ಆಹಾರ ನೀಡುವುದು ಜರುಗಿತು. ಆನಂತರ ಮಾಚಿದೇವರನ್ನು ಹೊತ್ತ ಪಲ್ಲಕ್ಕಿ ಗದ್ದುಗೆಮಠದಿಂದ ಹೊರಟು ಮೇನ್ ಬಜಾರಿನಲ್ಲಿರುವ ತೇರಿನವರೆಗೆ ಸಾಗಿ ೫ ಸುತ್ತು ಪ್ರದಕ್ಷಿಣೆ ಹಾಕಿ ‘ನೈವೇದ್ಯ(ಬಡ್ಯಾಣ)’ ಅರ್ಪಿಸಲಾಯಿತು. ತದನಂತರ ಬೆಳಿಗ್ಗೆಯಿಂದಲೇ ಬೃಹತ್ ಹೂವಿನ ಹಾರ, ತಳಿರು ತೋರಣಗಳಿಂದ ಶೃಂಗಾರಗೊಂಡ ರಥ(ತೇರ)ಕ್ಕೆ ನೆರೆದ ಸಾವಿರಾರು ಜನ ಭಕ್ತರು ಜಯಕಾರ ಉದ್ಘೋಶಗಳಿಂದ ಚಾಲನೆ ನೀಡಲಾಯಿತು. ರಥೋತ್ಸವಕ್ಕೆ ಯುವಭಕ್ತ ಸಮೂಹ ಭಕ್ತಿಯ ಶಕ್ತಿಯೊಂದಿಗೆ ಉತ್ಸಾಹದಿಂದ ರಥವನ್ನು ಸರಾಗವಾಗಿ ಮಾನೆದೊಡ್ಡಿ ಹತ್ತಿರದವರೆಗೆ ಎಳೆದು ತಮ್ಮ ಭಕ್ತಿ, ಭಾವ ತೋರಿದರು.
“ದೇವರ ತೇರನ್ನು ನಾವು ಎಳೆದರೇ, ನಮ್ಮ ಬದುಕಿನ ತೇರನ್ನು ಭಗವಂತ ಎಳೆಯುತ್ತಾನೆ” ಎಂಬ ಮಾತಿನಂತೆ ರಥೋತ್ಸವದಲ್ಲಿ ವಿಶೇಷವಾಗಿ ಯುವಕರು ಪಾಲ್ಗೊಂಡರು.
ತೇರು ಸಾಗುವಾಗ ಮಹಿಳೆಯರು, ಮಕ್ಕಳು, ಯುವಕರು ತಾವು ತಂದ ಉತ್ತತ್ತಿ, ಬಾಳೆಹಣ್ಣುಗಳನ್ನು ಅದರ ಮೇಲೆ ಸಮರ್ಪಿಸಿ ಸಂತಸಪಟ್ಟರು. ನಂತರ ಮಾಚಿದೇವರನ್ನು ಹೊತ್ತ ಪಲ್ಲಕ್ಕಿ ಉತ್ಸವ ಹೊರವಲಯದ ಮಡಿವಾಳ ಮಾಚಿದೇವರ ದೇವಸ್ಥಾನದವರೆಗೆ ಮೆರವಣಿಗೆಯಲ್ಲಿ ತೆರಳಿ ಪುನಃ ಮರಳಿ ಗದ್ದಿಗೆಮಠಕ್ಕೆ ಬಂದು ಸೇರಿತು.
ಬೆಳಿಗ್ಗೆಯಿಂದ ಆರಂಭವಾದ ಈ ಎಲ್ಲ ಧಾರ್ಮಿಕ ಕಾರ್ಯಗಳಲ್ಲಿ ಪಟ್ಟಣದ ಭಕ್ತ ಸಮೂಹ ಶ್ರದ್ಧಾ ಭಕ್ತಿಯಿಂದ ಪಾಲ್ಗೊಂಡು ಮಾಚಿದೇವರ ಕೃಪೆಗೆ ಪಾತ್ರವಾಯಿತು. ಇನ್ನೂ ಪೊಲೀಸ್ ಹಾಗೂ ಹೆಸ್ಕಾಂ ಸಿಬ್ಬಂದಿ ಸಹ ಎಲ್ಲ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಂಡು ತಮ್ಮ ಕಾರ್ಯ ನಿರ್ವಹಿಸಿದರು.

