ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ: ಸಮೀಪದ ಯಲಗೂರದ ಯಲಗೂರೇಶ್ವರ ದೇವಸ್ಥಾನದಲ್ಲಿ ಭಾನುವಾರ ರಾಮನವಮಿಯನ್ನು ಸಂಭ್ರಮ, ಸಡಗರದಿಂದ ಆಚರಿಸಲಾಯಿತು.
ದೇವಸ್ಥಾನದ ಪ್ರಾಂಗಣದಲ್ಲಿ ಹೂವಿನಿಂದ ಶೃಂಗರಿಸಲ್ಪಟ್ಟಿದ್ದ ರಾಮನ ಮೂರ್ತಿಯನ್ನು ತೊಟ್ಟಿಲಿನಲ್ಲಿ ಪ್ರತಿಷ್ಠಾಪಿಸಿ ಭಕ್ತಿಯಿಂದ ನಮಿಸಿದರು. ತೊಟ್ಟಿಲನ್ನು ತೂಗಿದ ಮಹಿಳೆಯರು ರಾಮ ಎಂದು ಹೆಸರು ನಾಮಕರಣ ಮಾಡಿದರು.
ನಂತರ ಮಹಿಳೆಯರು ರಾಮನ ಹಾಗೂ ಪವನ ಸುತನ ಭಕ್ತಿಗೀತೆಗಳನ್ನು ಹಾಡಿದರು. ನಂತರ ಯಲಗೂರೇಶನಿಗೆ ಸಾಮೂಹಿಕ ಪಂಚಾಮೃತ ಅಭೀಷೇಕ, ಮಹಾಪೂಜೆ, ಮಹಾನೈವೇದ್ಯ, ಅನ್ನಸಂತರ್ಪಣೆ ಜರುಗಿದವು.
ವಾದೀಂದ್ರ ಯಲಬುರ್ಗಿ ದಂಪತಿಗಳು ಪೂಜಾ ಕಾರ್ಯಕ್ರಮ ನೆರವೇರಿಸಿದರು.
ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಅನಂತ ಓಂಕಾರ, ಅನ್ನದಾಸೋಹ ಸಮಿತಿಯ ಅಧ್ಯಕ್ಷ ಶ್ಯಾಮ ಪಾತರದ, ಯಲಗೂರದಪ್ಪ ಪೂಜಾರ, ಸಂಜೀವ ಪೂಜಾರ, ಶ್ರೀಶೈಲ ಪೂಜಾರ, ಗೋಪಾಲ ಗದ್ದನಕೇರಿ, ಸಂತೋಷ ಪೂಜಾರ, ವೆಂಕಟೇಶ ಒಡೆಯರ , ಮಹಾದೇವ ಹೂಗಾರ ಮತ್ತೀತರರು ಇದ್ದರು.
ಭಕ್ತಾದಿಗಳು ನೀಡಿದ ಕಾಣಿಕೆಯಲ್ಲಿ ೨೦೦ ಕೆಜಿಗೂ ಅಧಿಕ ದ್ರಾಕ್ಷಿ, ದ್ರಾಕ್ಷಿ ಬಳ್ಳಿಯಿಂದ ಯಲಗೂರೇಶ ಹಾಗೂ ದೇವಸ್ಥಾನದ ಪ್ರಾಂಗಣ, ತೊಟ್ಟಿಲು ಸೇರಿ ಹಲವೆಡೆ ವಿಶೇಷವಾಗಿ ಅಲಂಕಾರ ಮಾಡಲಾಗಿತ್ತು.
ಯಲಗೂರದ ಪ್ರಮೋದಾತ್ಮ ಗೋಸಂರಕ್ಷಣಾ ಕೇಂದ್ರದಲ್ಲಿ ಉತ್ತರಾದಿಮಠದ ಸತ್ಯಾತ್ಮತೀರ್ಥ ಶ್ರೀಪಾದಂಗಳವರು ಮೂಲರಾಮದೇವರ ಪೂಜೆ ಸಲ್ಲಿಸಿದರು.

