ವಾಣಿಜ್ಯ ಬಳಕೆಯ ಅನಿಲ ಸಿಲಿಂಡರ್‌ಗಳಿಗಾಗಿ ಜಾತಕ ಪಕ್ಷಿಗಳಂತೆ ಕಾಯುತ್ತಿರುವ ಹೋಟೆಲ್ ಮಾಲೀಕರು
ಉದಯರಶ್ಮಿ ದಿನಪತ್ರಿಕೆ
ವರದಿ: ಸಿದ್ರಾಮ್ ಎಮ್ ಇಟ್ಟಿ
ಜಮಖಂಡಿ: ವಾಣಿಜ್ಯ ಬಳಕೆಯ ಅನಿಲ ಸಿಲಿಂಡರ್‌ಗಳಿಗಾಗಿ ಹೋಟೆಲ್ ಮಾಲೀಕರು ಜಾತಕ ಪಕ್ಷಿಗಳಂತೆ ಕಾಯುತ್ತಿದ್ದರೂ ಗ್ಯಾಸ್ ಏಜೆನ್ಸಿಗಳು ಮಾತ್ರ ಇನ್ನೂ ಗ್ಯಾಸ್ ಬಂದಿಲ್ಲ. ಏ.1ರಿಂದ ಸಮಸ್ಯೆ ಬಗೆಹರಿಯಲಿದೆ ಎಂದೇ ಹೇಳುತ್ತಿದ್ದಾರೆ.
ಹೋಟೆಲ್‌ಗಳು ಹಾಗೂ ಇನ್ನಿತರ ಸೇವಾ ಸಂಸ್ಥೆಗಳಿಗೆ ದಿನನಿತ್ಯ ಅಗತ್ಯವಿರುವ ಸಿಲಿಂಡರ್‌ಗಳ ಶೇ.50ರಷ್ಟನ್ನು ನೀಡಲಾಗುತ್ತದೆ ಎಂದು ಸರ್ಕಾರ ಘೋಷಣೆ ಮಾಡಿದೆ. ಆದರೆ ಈ ವ್ಯವಸ್ಥೆ ಏ.1ರಿಂದ ಜಾರಿಗೆ ಬರಲಿದೆ ಎಂದು ಗ್ಯಾಸ್ ಏಜೆನ್ಸಿಗಳು ಹೇಳುತ್ತಿವೆ.
ಹೀಗಾಗಿ ಬುಧವಾರˌ ಗುರುವಾರ ಕೂಡ ಅಡುಗೆ ಅನಿಲ ಸಿಲಿಂಡರ್‌ಗಳ ಅಭಾವ ಮುಂದುವರಿದಿದೆ. ಈ ನಡುವೆ ಕೆಲ ಹೋಟೆಲ್‌ಗಳು ಬಂದ್ ಮಾಡಿದ್ದರೆ, ಮತ್ತೆ ಕೆಲ ಸಣ್ಣ ಹೋಟೆಲ್‌ಗಳವರು ಸೌದೆ ಒಲೆ ಮೋರೆ ಹೋಗಿ ಅಡುಗೆ ಮಾಡುತ್ತಿದ್ದಾರೆ.
ಜಿಎಸ್ ಟಿಯೇ ದಾಖಲೆ:
ಕೇಂದ್ರ ಸರ್ಕಾರ ವಾಣಿಜ್ಯ ಸಿಲಿಂಡರ್ ನೀಡಲು ಕೆಲ ಮಾನದಂಡಗಳನ್ನು ನಿಗದಿಪಡಿಸಿದೆ. ಹೋಟೆಲ್ ಮಾಲೀಕರು ಜಿಎಸ್‌ಟಿ ದಾಖಲೆಗಳಲ್ಲಿ ಎಷ್ಟು ಸಿಲಿಂಡರ್ ಬಳಕೆಯನ್ನು ನಮೂದಿಸಿದ್ದಾರೋ, ಅದರಲ್ಲಿ ಶೇ.50 ರಷ್ಟು ಸಿಲಿಂಡರ್ ಮಾತ್ರ ದೊರಕಲಿದೆ.
ಕೆಲ ಸಣ್ಣಪುಟ್ಟ ಹೋಟೆಲ್‌ಗಳು ಜಿಎಸ್‌ಟಿ ಹೊರೆ ತಪ್ಪಿಸಲು ಕಡಿಮೆ ಸಿಲಿಂಡರ್‌ಗಳನ್ನು ದಾಖಲೆಗಳಲ್ಲಿ ನಮೂದಿಸಿದ್ದಲ್ಲಿ. ಅಂತಹ ಹೋಟೆಲ್‌ಗಳ ಸಂಕಷ್ಟ ಹೀಗೆಯೇ ಮುಂದುವರಿಯಲಿದೆ. ಅವರುಗಳು ಹೆಚ್ಚಿನ ಹಣ ತೆತ್ತು ಖಾಸಗಿಯಾಗಿ ಸಿಲಿಂಡರ್‌ಗಳನ್ನು ಖರೀದಿಸಬೇಕಿದೆ.
ಕಾಳಸಂತೆಯಲ್ಲಿ ಮಾರಾಟ?:
ಕೆಲ ಹೋಟೆಲ್ ಮಾಲೀಕರು ಹೇಳುವಂತೆ ಕೆಲವು ಗ್ಯಾಸ್ ಏಜೆನ್ಸಿಗಳ ಕೆಲಸಗಾರರು ಕಾಳಸಂತೆಯಲ್ಲಿ ಸಿಲಿಂಡರ್‌ಗಳನ್ನು ಮಾರಾಟ ಮಾಡುತ್ತಿದ್ದಾರೆ. ಸಮುದಾಯ ಭವನ, ಆಸ್ಪತ್ರೆ, ಹಾಸ್ಟೆಲ್‌ಗಳ ಹೆಸರಿನಲ್ಲಿ ಸಿಲಿಂಡರ್ ಗಳನ್ನು ಪಡೆದುಕೊಂಡು ಅವುಗಳನ್ನು ಪ್ರತಿಷ್ಠಿತ ಹೋಟೆಲ್‌ಗಳಿಗೆ ಹೆಚ್ಚು ಹಣಕ್ಕೆ ಮಾರಾಟ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ಈ ಬಗ್ಗೆ ಅಧಿಕಾರಿಗಳು ತನಿಖೆ ನಡೆಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
25 ದಿನಕ್ಕೆ ಇಳಿಕೆ
ಗ್ರಾಮೀಣ ಭಾಗದ ಗ್ರಾಹಕರಿಗೆ 45 ದಿನಗಳಿಗೆ ಒಮ್ಮೆ ಸಿಲಿಂಡರ್ ನೀಡುವ ನಿಯಮವನ್ನು ತರಲಾಗಿತ್ತು. ಈ ಸಂಬಂಧ ಜನರಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದ ಗ್ರಾಹಕರಿಗೂ 25 ದಿನಗಳ ನಂತರ ಸಿಲಿಂಡರ್ ಬುಕಿಂಗ್ ಮಾಡುವ ವ್ಯವಸ್ಥೆಯನ್ನು ಮರು ಜಾರಿಗೆ ತರಲಾಗಿದೆ. ಆದರೆ, ಉಜ್ವಲ ಯೋಜನೆಯಲ್ಲಿ ಸಿಲಿಂಡರ್ ಪಡೆದವರು 45 ದಿನಗಳ ನಂತರವೇ ಸಿಲಿಂಡರ್ ಬುಕ್ ಮಾಡಬೇಕು.
ಪೆಟ್ರೋಲ್ – ಡಿಸೇಲ್ ಗಿಲ್ಲ ಸಮಸ್ಯೆ
ನಗರದಾದ್ಯಂತ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಪೆಟ್ರೋಲ್ ಮಾರಾಟ ಎಂದಿನಂತೆ ಇದೆ. ಯಾವುದೇ ಪೆಟ್ರೋಲ್ ಬಂಕ್‌ಗಳು ಬಂದ್ ಆಗಿಲ್ಲ. ಬಂಕ್‌ಗಳಿಗೆ ಬೇಕಾದ ಪೆಟ್ರೋಲ್ ಹಾಗೂ ಡೀಸೆಲ್ ಸಮರ್ಪಕವಾಗಿ ಸರಬರಾಜಾಗುತ್ತಿದೆ.
“ಪೆಟ್ರೋಲ್ ಹಾಗೂ ಡೀಸೆಲ್ ಮಾರಾಟಕ್ಕೆ ಯಾವುದೇ ತೊಂದರೆ ಇಲ್ಲ. ಕಾಲಕಾಲಕ್ಕೆ ಸರಿಯಾಗಿ ಕಂಪನಿಗಳಿಂದ ಬಂಕ್ ಗಳಿಗೆ ಪೆಟ್ರೋಲ್ ಹಾಗೂ ಡೀಸೆಲ್ ಸರಬರಾಜು ಆಗುತ್ತಿದೆ. ಯಾವುದೇ ರೀತಿ ವ್ಯತ್ಯಾಸವಾಗಿಲ್ಲ. ಸಾರ್ವಜನಿಕರು ಯಾವುದೇ ಉಹಾಪೋಹಳಿಗೆ ಕಿವಿಗೋಡದೆ ದಿನನಿತ್ಯದಂತೆ ಪೇಟ್ರೊಲ್ ಹಾಗೂ ಡಿಸೈಲ್ ಹಾಕಿಸಿಕೊಂಡು ಹೋಗಬೇಕು.”
– ಕಾಶೀನಾಥ ಚನವೀರ
ಚಕ್ರೇಶ್ವರಿ ಪೆಟ್ರೋಲ್ ಬಂಕ್ ಮಾಲೀಕ, ಗೋಠೆ
“ಹೋಟೆಲ್ ಹಾಗೂ ಸೇವಾ ವಲಯದ ಸಂಸ್ಥೆಗಳಿಗೆ ಶೇ.50 ರಷ್ಟು ಸಿಲಿಂಡರ್‌ಗಳನ್ನು ನೀಡಲಾಗುತ್ತದೆ ಎಂದು ಸರ್ಕಾರ ಹೇಳಿದೆ. ಅದರಂತೆ ಅಧಿಕಾರಿಗಳ ಮಟ್ಟದಲ್ಲಿ ಸಭೆ ನಡೆದಿದ್ದು, ಯಾರಿಗೆ ಎಷ್ಟು ಸಿಲಿಂಡರ್ ನೀಡಬೇಕು ಎಂಬುದನ್ನು ಇಲಾಖೆಯ ಅಧಿಕಾರಿಗಳು ನಿರ್ಧರಿಸಲಿದ್ದಾರೆ. ಏ.1ರ ನಂತರ ಸಮಸ್ಯೆ ಬಗೆಹರಿಯಲಿದೆ.”
ಹೆಸರು ಹೇಳಲಿಚ್ಛಿಸದ ಗ್ಯಾಸ್ ಏಜೇನ್ಸಿಯ ಸಿಬ್ಬಂದಿ

