ಬಿರುಗಾಳಿಗೆ ಧರೆಗುರುಳಿದ ದ್ರಾಕ್ಷಿ ಪಡದ ಸಾಲುಗಳು | ಮಳೆಗೆ ತೊಯ್ದ ಒಣದ್ರಾಕ್ಷಿ | ಸಂಕಷ್ಟದಲ್ಲಿ ರೈತರು
ಉದಯರಶ್ಮಿ ದಿನಪತ್ರಿಕೆ
ತಿಕೋಟಾ: ದ್ರಾಕ್ಷಿ ಪಡದಲ್ಲಿನ ಹಣ್ಣಿಗೆ ಬಂದ ದ್ರಾಕ್ಷಿ ಕಟಾವು ಮಾಡಬೇಕೆನ್ನುವಷ್ಟರಲ್ಲೆ ಬಾರಿ ಬಿರುಗಾಳಿಗೆ ಸಹಿತ ಮಳೆಗೆ ದ್ರಾಕ್ಷಿ ಸಾಲುಗಳು ಧರೆಗುರುಳಿವೆ. ರ್ಯಾಕನಲ್ಲಿ ಕಟಾವು ಮಾಡಿ ಹಾಕಿದ ದ್ರಾಕ್ಷಿಯೂ ಒಣದ್ರಾಕ್ಷಿ ತಯಾರಾಗಿದ್ದು, ಒಣಹಾಕಲು ಹಾಕಿದ ಒಣದ್ರಾಕ್ಷಿ (ಮನೂಕ) ತೊಯ್ದಿದ್ದು, ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದೆ.
ತಾಲ್ಲೂಕಿನಲ್ಲಿ ಬುಧವಾರ ಸಂಜೆ ಸುರಿದ ಮಳೆಗೆ ಕೊಟ್ಯಾಳ ರಸ್ತೆಯಲ್ಲಿನ ಸೋಮನಿಂಗ ಬಸಪ್ಪ ಬಾಗಲಕೋಟ ಎಂಬ ರೈತನ ಆರು ಎಕರೆ ದ್ರಾಕ್ಷಿ ಹಣ್ಣಾಗಿದ್ದು, ಈಗಾಗಲೇ ಎರಡು ಎಕರೆ ಕಟಾವು ಮಾಡಿ ಒಣದ್ರಾಕ್ಷಿ ತಯಾರಿಸಲು ರ್ಯಕನಲ್ಲಿ ಹಾಕಿದ್ದಾರೆ. ಇನ್ನೂ ನಾಲ್ಕು ಎಕರೆ ಹಣ್ಣಾದ ದ್ರಾಕ್ಷಿ ಪಡದಲ್ಲಿ ಇದ್ದು, ದ್ರಾಕ್ಷಿ ಸಮೇತ ಸಾಲುಗಳು ನೆಲಕಚ್ಚಿವೆ.
ಬಾಬಾನಗರ ಗ್ರಾಮದ ರೈತ ಶಿವಾನಂದ ಚಂದ್ರಪ್ಪ ನಾವಿ ರೈತನು ದ್ರಾಕ್ಷಿ ಕಟಾವು ಮಾಡಿ ಒಣದ್ರಾಕ್ಷಿ ತಯಾರಿಸಿ ಬಯಲು ಪ್ರದೇಶದಲ್ಲಿ ಒಣಹಾಕಿದ್ದು, ಮಳೆಗೆ ಮೂರು ಟನ್ ಗೂ ಅಧಿಕ ಒಣದ್ರಾಕ್ಷಿ ತೊಯ್ದು ಹೋಗಿದೆ. ಸಧ್ಯ ಒಳ್ಳೆಯ ದರ ಒಣದ್ರಾಕ್ಷಿಗೆ ಇದೆ, ಆದರೆ ತೊಯ್ದ ಒಣದ್ರಾಕ್ಷಿ ಕಪ್ಪು ಬಣ್ಣಕ್ಕೆ ತಿರುಗುವುದರಿಂದ ದರ ಕುಸಿಯುವ ಆತಂಕ ಎದುರಾಗಿದೆ.
ಅಕಾಲಿಕ ಮಳೆಯ ಆಗಮನದಿಂದ ರೈತ ಸಂಕಷ್ಟದಲ್ಲಿ ಸಿಲುಕುತ್ತಿದ್ದು, ಒಂದಲ್ಲ ಒಂದು ತೊಂದರೆ ಎದುರಾಗುತ್ತಲೆ ಇದೆ. ಇದರಿಂದ ರೈತ ಸಾಲದಲ್ಲಿ ಸಿಲುಕಿ ನಲುಗುವಂತಾಗಿದೆ. ಚಾಟ್ನಿ ಮಾಡಿ ಕಡ್ಡಿ ತಯಾರಿಸಿ ಔಷಧಿ, ಗೊಬ್ಬರ, ಕೂಲಿಕಾರರ ಖರ್ಚು ಸೇರಿ ಲಕ್ಷಾಂತರ ಖರ್ಚು ಮಾಡಿ ಒಳ್ಳೆಯ ಆದಾಯದ ನಿರೀಕ್ಷೆಯಲ್ಲಿ ರೈತ ಇರುವಾಗ ನಿಸರ್ಗವು ಸಹ ರೈತನಿಗೆ ನೆರವಾಗುವದಿಲ್ಲ. ಅಕಾಲಿಕ ಮಳೆಗೆ ತುತ್ತಾಗಿ ಮತ್ತಷ್ಟು ನಲುಗಿ ಹೋಗುತ್ತಿದ್ದಾನೆ.

“ಬಿರುಗಾಳಿಗೆ ಕಟಾವಿಗೆ ಬಂದ ದ್ರಾಕ್ಷಿ ಸಾಲುಗಳು ಬಿದ್ದಿವೆ. ನೆಲಕ್ಕಪ್ಪಳಿಸಿ ಕಾಯಿ ಹಾಳಾಗಿದೆ. ಹಾಳಾದ ಕಾಯಿ ಒಣದ್ರಾಕ್ಷಿ ಸಹ ಮಾಡಲು ಬರುವದಿಲ್ಲ.”
– ಸೋಮನಿಂಗ ಬಸಪ್ಪ ಬಾಗಲಕೋಟ
ರೈತ
“ಒಣಗಲು ಹಾಕಿದ ಒಣದ್ರಾಕ್ಷಿ ಮಳೆಗೆ ತೊಯ್ದಿದೆ, ಇದರಿಂದ ದರ ಕುಸಿದು ಹೋಗುವದು. ಅದಕ್ಕೆ ವಾಸಿಂಗ್ ಮಾಡಲು ಮತ್ತಷ್ಟು ಖರ್ಚಾಗುವದು.”
– ಶಿವಾನಂದ ಚಂದ್ರಪ್ಪ ನಾವಿ
ರೈತ
ಕೋಟ್
“ರೈತರಿಗೆ ಬಹಳ ಅನ್ಯಾವಾಗುತ್ತಿದ್ದು, ಹಾನಿಗಿಡಾದ ರೈತರ ತೋಟಗಳಿಗೆ ಅಧಿಕಾರಿಗಳು ಕೂಡಲೇ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ವೀಮಾ ಕಂಪನಿ ಹಾಗೂ ಸರ್ಕಾರ ಕೂಡಲೇ ಸ್ಪಂದಿಸಬೇಕು.”
– ಸಿದ್ಧಗೊಂಡ ರುದ್ರಗೌಡರ
ಪ್ರಧಾನ ಕಾರ್ಯದರ್ಶಿಗಳು,
ಕರ್ನಾಟಕ ದ್ರಾಕ್ಷಿ ಬೆಳೆಗಾರರ ಸಂಘ ಪ್ರಾದೇಶಿಕ ಕಚೇರಿ ವಿಜಯಪುರ

