ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಮಕ್ಕಳಲ್ಲಿ ಸಂಸ್ಕೃತಿ-ಸಂಸ್ಕಾರ ಮತ್ತು ಮೌಲ್ಯವನ್ನು ಕಲಿಸುವಲ್ಲಿ ಇಡೀ ಕುಟುಂಬದ ಪಾತ್ರ ಇದ್ದರೂ ಅದರಲ್ಲಿ ತಾಯಂದಿರ ಪಾತ್ರ ಅತ್ಯಂತ ಪ್ರಮುಖವಾಗಿದೆ. ಅದಕ್ಕಂತಲೇ ಹಿರಿಯರು ಮನೆಯೇ ಮೊದಲ ಪಾಠಶಾಲೆ. ತಾಯಿಯೇ ಮೊದಲ ಗುರು ಎಂದು ಹೇಳಿದ್ದಾರೆ. ಮಗುವು ಚಿಕ್ಕವನಿರುವಾಗಲೇ ತಾಯಿಯಾದವಳು ತಪ್ಪು ಮಾಡಿದಾಗ ತಿದ್ದಿ ಸನ್ಮಾರ್ಗದಲ್ಲಿ ನಡೆಯುವಂತೆ ಪ್ರೋತ್ಸಾಹಿಸಿ, ಒಳ್ಳೆಯ ನಾಗರೀಕನಾಗುವಂತೆ ರೂಪಿಸಬೇಕು ಎಂದು ಹಿರಿಯ ಮಕ್ಕಳ ಸಾಹಿತಿ ಫ.ಗು.ಸಿದ್ದಾಪೂರ ಅವರು ಅಭಿಪ್ರಾಯಪಟ್ಟರು.
ನಗರದ ಅಥಣಿ ರಸ್ತೆಯ ಅಲ್-ಅಮೀನ್ ಆಸ್ಪತ್ರೆ ಎದುರಿಗೆ ಇರುವ ಸೇನಾ ನಗರದ ಶಿವಾಲಯದ ದೇವಸ್ಥಾನದಲ್ಲಿ ಹಿರಿಯ ನಾಗರೀಕರ ಕ್ಷೇಮಾಭಿವೃದ್ಧಿ ಸಂಘ (ರಿ), ನವರಸಪುರ ಇವರ ಸಹಯೋಗದಡಿಯಲ್ಲಿ ಜರುಗಿದ “ಮಕ್ಕಳಲ್ಲಿ ಸಂಸ್ಕೃತಿ-ಸಂಸ್ಕಾರ & ಮೌಲ್ಯಧಾರಣೆಯಲ್ಲಿ ತಾಯಂದಿರ ಪಾತ್ರ” ವಿಷಯ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಇಂದಿನ ಮಕ್ಕಳಲ್ಲಿ ಸಂಸ್ಕೃತಿ-ಸಂಸ್ಕಾರ ಮಾಯವಾಗುತ್ತಿರುವುದು ತೀರ ಕಳವಳಕಾರಿ ಸಂಗತಿ. ತಾಯಿ ಮಕ್ಕಳಿಗೆ ದೇಶಕ್ಕಾಗಿ ತ್ಯಾಗ ಮಾಡಿದ ವೀರ-ಮಹಾಪುರುಷರು ಜೀವ-ತತ್ವ-ಸಿದ್ದಾಂತ, ರಾಷ್ಟ್ರಪ್ರೇಮ, ತ್ಯಾಗ-ಬಲಿದಾನ ಮತ್ತು ಸಾಧಕರ ಯಶೋಗಾಥೆಯ ಬಗ್ಗೆ ನೀತಿ ಕಥೆಗಳನ್ನು ಹೇಳುವುದರ ಮೂಲಕ ಮನವರಿಕೆ ಮಾಡಿಕೊಡಬೇಕು. ತನ್ನ ಮಕ್ಕಳನ್ನು ಜಗತ್ತಿಗೆ ಬೆಳಕನ್ನು ನೀಡುವ ಆದರ್ಶ ಮಹಾಪುರುಷರನ್ನಾಗಿ ಮಾಡುವ ಕನಸನ್ನು ನನಸಾಗಿಸುವ ಪ್ರವೃತ್ತಿ ಮತ್ತು ಪ್ರಯತ್ನ ತಾಯಿಯಲ್ಲಿರಬೇಕು. ಮನೆಯಲ್ಲಿನ ಹಿರಿಯರು ಮಕ್ಕಳಿಗೆ ಬಾಲ್ಯದಲ್ಲಿಯೇ ಒಳ್ಳೆಯ ಸಂಸ್ಕಾರ ನೀಡಿ ಅವರು ಮುಂದೆ ದೇಶದ ಜವಾಬ್ದಾರಿಯುತ ನಾಗರೀಕರಾಗಿ ಹೊರ ಹೊಮ್ಮದಂತೆ ರೂಪಿಸಬೇಕಾಗಿರುವುದು ಇಂದಿನ ಅಗತ್ಯತೆಯಾಗಿದೆ ಎಂದರು.
ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಎಸ್.ಎಲ್.ಇಂಗಳೇಶ್ವರ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಬಿ.ಡಿ.ಕಡಕೋಳ, ಲಕ್ಷ್ಮಣ ಶಿಂಧೆ, ಕೆ.ಜೆ.ಕೋಟ್ಯಾಳ,, ಎಸ್.ಐ.ಹಿರೇಮಠ ಇನ್ನಿತರರು ವೇದಿಕೆಯ ಮೇಲಿದ್ದರು.
ಕಾರ್ಯಕ್ರಮದಲ್ಲಿ ಸುರೇಶ ಹಲಕುಡೆ, ಎ.ಬಿ.ಬಿರಾದಾರ, ಆಶಾ ಬಾಸೂತಕರ, ಶಾಂತಾ ಹೆರಕಲ್, ವೆಂಕಟೇಶ ಹೊಸಮನಿ, ಪ್ರೊ. ಎಂ.ಎಸ್.ಖೊದ್ನಾಪೂರ, ಶಿವಾಲಯ ದೇವಸ್ಥಾನದ ಅಧ್ಯಕ್ಷ ಗುರುಬಸಯ್ಯ ಹಿರೇಮಠ, ಎಸ್.ಎ. ಘೋರ್ಪಡೆ, ಎಸ್.ಎ.ಇಂಗಳೆ, ಶ್ರೀಶೈಲ ಕಿಚಡಿ, ಬಿ.ಆರ್.ಬಿರಾದಾರ, ಎಸ್.ಜಿ., ನಿಂಗನಗೌಡ್ರ ಇನ್ನಿತರರು ಸಹ ಉಪಸ್ಥಿತರಿದ್ದರು.
ಎಸ್.ಎಂ.ಸಾಲಿಮಠ ಕಾರ್ಯಕ್ರಮ ನಿರೂಪಿಸಿದರು. ಎ.ಬಿ.ಬಿರಾದಾರ ವಂದಿಸಿದರು.

