ಉದಯರಶ್ಮಿ ದಿನಪತ್ರಿಕೆ
ಚಡಚಣ: ಪರಿಶಿಷ್ಟ ಜಾತಿಗಳ ಒಳಮೀಸಲಾತಿಯನ್ನು ಸಮರ್ಪಕವಾಗಿ ಜಾರಿಗೊಳಿಸುವಂತೆ ಒತ್ತಾಯಿಸಿ ಕರ್ನಾಟಕ ಪ್ರದೇಶ ಮಾದಿಗರ ಸಂಘದ ಮುಖಂಡರು ಚಡಚಣ ತಹಶೀಲ್ದಾರ ಮುಖಾಂತರ ಮುಖ್ಯಮಂತ್ರಿಗಳಿಗೆ ಬುಧವಾರ ಮನವಿ ಸಲ್ಲಿಸಿದರು.
ಮಾರ್ಚ್ 27, 2026 ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ 56,432 ಹುದ್ದೆಗಳನ್ನು ಭರ್ತಿ ಮಾಡುವ ನಿರ್ಧಾರ ಕೈಗೊಂಡಿರುವ ಹಿನ್ನೆಲೆಯಲ್ಲಿ, ಒಳಮೀಸಲಾತಿಯನ್ನು ಜಾರಿಗೊಳಿಸದೆ ನೇಮಕಾತಿ ನಡೆಸಿದರೆ ಮಾದಿಗ ಸಮುದಾಯಕ್ಕೆ ಭರಿಸಲಾಗದ ಅನ್ಯಾಯವಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಪರಿಶಿಷ್ಟ ಜಾತಿಗಳಿಗೆ ನಿಗದಿಪಡಿಸಿರುವ ಶೇ.15 ಮೀಸಲಾತಿಯಲ್ಲಿ ಸಮಾನ ಅನುಪಾತದಲ್ಲಿ ಹಂಚಿಕೆ ಮಾಡಿ, ಅದರಲ್ಲಿ ಮಾದಿಗರಿಗೆ ಶೇ. 6 ಮೀಸಲಾತಿಯನ್ನು ನೀಡಬೇಕು. ಉಳಿದ ಮೀಸಲಾತಿಯನ್ನು ಇತರ ವರ್ಗಗಳಿಗೆ ಹಂಚಿಕೆ ಮಾಡಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಸರ್ಕಾರವೇ ಒಳಮೀಸಲಾತಿಯನ್ನು ಜಾರಿಗೆ ತಂದಿರುವಾಗ ಅದನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು. ಸುಪ್ರೀಂ ಕೋರ್ಟ್ ತೀರ್ಪನ್ನು ಗೌರವಿಸಿ ತಕ್ಷಣವೇ ಒಳಮೀಸಲಾತಿಯನ್ನು ಜಾರಿಗೊಳಿಸುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಮನವಿಯ ಮುಂಚೆ ಮಾದಿಗ ಸಮಾಜ ಬಾಂಧವರು ತಮಟೆ ಭಾರಿಸುತ್ತ ಚಡಚಣ ಪ್ರವಾಸಿ ಮಂದಿರದಿಂದ ಮೆರವಣಿಗೆ ಪ್ರಾರಂಭಿಸಿ ಬಸವೇಶ್ವರ ವೃತ್ತದಲ್ಲಿ ಕೆಲಕಾಲ ತಮ್ಮ ಬೇಡಿಕೆಗಳನ್ನು ಸರಕಾರ ಈಡೆರಿಸುವಂತೆ ಮತ್ತು ಒಳಮೀಸಲಾತಿ ಜಾರಿಯಾಗಲಿ ಎಂಬ ಘೋಷಣೆಗಳೊಂದಿಗೆ ತಮ್ಮ ಬೇಡಿಕೆಯನ್ನು ವ್ಯಕ್ತಪಡಿಸಿದರು.
ನಂತರ ಚಡಚಣ ತಹಶೀಲ್ದಾರ ಕಛೇರಿಗೆ ಆಗಮಿಸಿ ಮನವಿಯನ್ನು ತಹಶೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾದಿಗ ಮೀಸಲಾತಿ ಹೋರಾಟ ಸಮೀತಿಯ ವಿಜಯಪುರ ಜಿಲ್ಲಾ ಅಧ್ಯಕ್ಷ ಪ್ರಧಾನಿ ಮೂಲಿಮನಿ, ಚಡಚಣ ತಾಲೂಕ ಅಧ್ಯಕ್ಷ ಸುಭಾಸ ಗಾಯಕವಾಡ,ರೇವಣಸಿದ್ದ ಮೇಲಿನಮನಿ,ರವಿ ಕೆಂಗಾರ,ಮಹಾದೇವ ಮಾಶ್ಯಾಳ ಸೇರಿದಂತೆ ಮಾದಿಗ ಮೀಸಲಾತಿ ಹೋರಾಟ ಸಮೀತಿಯ ಸದಸ್ಯರು ಇದ್ದರು.

