ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ತಾಲ್ಲೂಕು ನಿವೃತ್ತ ನೌಕರರ ಸಂಘದ ಪದಾಧಿಕಾರಿಗಳು ಪಿಂಚಣಿ ಹಾಗೂ ಕುಟುಂಬ ಪಿಂಚಣಿಗೆ ಸಂಬಂಧಿಸಿದಂತೆ ಬೇಡಿಕೆ ಈಡೇರಿಸಲು ಆಗ್ರಹಿಸಿ, ತೋಳಿಗೆ ಕಪ್ಪು ಪಟ್ಟಿ ಧರಿಸಿ ತಹಶೀಲ್ದಾರ ನಿಂಗಪ್ಪ ಬಿರಾದಾರ ಅವರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ತಹಶೀಲ್ದಾರ ಕಾರ್ಯಾಲಯಕ್ಕೆ ಬುಧವಾರ ಬೆಳಿಗ್ಗೆ ಆಗಮಿಸಿದ ತಾಲ್ಲೂಕು ನಿವೃತ್ತ ನೌಕರರ ಸಂಘದ ಪದಾಧಿಕಾರಿಗಳು ಪಿಂಚಣಿ ಸಮಸ್ಯೆ ಕುರಿತು ತಹಶೀಲ್ದಾರರ ಗಮನ ಸೆಳೆದರು.
ಈ ಸಂದರ್ಭದಲ್ಲಿ ತಾಲ್ಲೂಕು ಘಟಕದ ಅಧ್ಯಕ್ಷ ಸಿ.ಕೆ.ಕುದರಿ ಮಾತನಾಡಿ, ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್ತಿನ ಅಧಿವೇಶನದಲ್ಲಿ ನಿವೃತ್ತ ನೌಕರರಿಗೆ ಹಾಗೂ ಕುಟುಂಬ ಪಿಂಚಣಿದಾರರಿಗೆ ಮುಂಬರುವ ದಿನಗಳಲ್ಲಿ ಯಾವುದೇ ವೇತನ ಪರಿಷ್ಕರಣೆ ಹಾಗೂ ವರ್ಷದಲ್ಲಿ ಎರಡು ಬಾರಿ ನೀಡುತ್ತಿರುವ ತುಟ್ಟಿಭತ್ಯೆ ನೀಡಲು ಸಾಧ್ಯವಾಗುವುದಿಲ್ಲ ಎಂಬ ವಿಷಯ ಮಂಡಿಸಿರುವುದು ನಿವೃತ್ತ ನೌಕರರು ಹಾಗೂ ಕುಟುಂಬದವರಿಗೆ ಆಘಾತಕಾರಿ ವಿಷಯವಾಗಿದೆ. ಹೀಗೆ ಮಾಡುವುದರಿಂದ ನಿವೃತ್ತ ನೌಕರರು ಹಾಗೂ ಕುಟುಂಬ ಪಿಂಚಣಿದಾರರ ಕುಟುಂಬಗಳು ಬೀದಿ ಪಾಲಾಗುತ್ತವೆ. ಅಲ್ಲದೆ ಈ ವಿಷಯದ ಕುರಿತು ಸರ್ವೋಚ್ಛ ನ್ಯಾಯಾಲಯ ಪಿಂಚಣಿ ಭಿಕ್ಷೆಯಲ್ಲ ಅದನ್ನು ಪಡೆಯುವುದು ನಿವೃತ್ತ ನೌಕರರ ಹಕ್ಕು ಎಂದು ತೀರ್ಪು ನೀಡಿದೆ. ಆದ್ದರಿಂದ ಸರ್ಕಾರ ಪಿಂಚಣಿದಾರರ ಜೀವನ ಸುಗಮಗೊಳಿಸಲು ಈಗ ಇರುವ ಪಿಂಚಣಿ ಹಾಗೂ ಕುಟುಂಬ ಪಿಂಚಣಿಯನ್ನು ಯಥಾಸ್ಥಿತಿ ಮುಂದುವರೆಸಬೇಕು ಎಂದು ಆಗ್ರಹಿಸಿ ಮನವಿ ಸಲ್ಲಿಸಿದರು.
ಎಂ.ಎಚ್.ಪಟೇಲ, ಎಸ್.ವ್ಹಿ.ಆಲಾಳಮಠ, ಕೆ.ಸಿ.ಮಠ, ಎಂ.ಆರ್.ಶಿರಸಂಗಿಮಠ, ಬಿ.ಎನ್.ಬಬಲೇಶ್ವರ, ಎ.ಸಿ.ಲೋಗಾಂವಿ, ಪಿ.ಎಸ್.ಮಿಂಚನಾಳ, ಕೆ.ಎಮ್.ನಂದಿ, ಎನ್.ಎಸ್.ಹರಸೂರ, ವೈ.ಜಿ.ತಾವರಖೇಡ, ಬಿ.ಆಯ್.ಹೊಸಳ್ಳಿ, ಲಕ್ಷ್ಮಣ ಮಡ್ಡೆಪ್ಪಗೋಳ, ಬಿ.ಜಿ.ಪಾಟೀಲ, ಬಿ.ಎಸ್.ಉತ್ನಾಳ, ಬಿ.ಎಮ್ ಕಠಾರೆ, ಹೊನವಾಡ, ಬಿ.ಎನ್.ಪಾಟೀಲ, ರಾವುತ ತಳಕೇರಿ ಇದ್ದರು.

