ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನುರಿತ ಖಾಯಂ ವೈದ್ಯರನ್ನು ನೇಮಕ ಮಾಡುವಂತೆ ಆಗ್ರಹಿಸಿ ನಮ್ಮ ಕರ್ನಾಟಕ ಸೇನೆಯ ಪದಾಧಿಕಾರಿಗಳು ಶಿರಸ್ತೇದಾರ ಸುರೇಶ ಮ್ಯಾಗೇರಿ ಅವರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ತಹಶೀಲ್ದಾರ ಕಾರ್ಯಾಲಯಕ್ಕೆ ಆಗಮಿಸಿದ ನಮ್ಮ ಕರ್ನಾಟಕ ಸೇನೆಯ ಪದಾಧಿಕಾರಿಗಳು ವೈದ್ಯರ ಕುರಿತು ಗಮನ ಸೆಳೆದರು.
ಈ ಸಂದರ್ಭದಲ್ಲಿ ಸೇನೆಯ ತಾಲ್ಲೂಕು ಘಟಕದ ಅಧ್ಯಕ್ಷ ಹಸನ್ ನಧಾಫ್ ಮಾತನಾಡಿ, ತಾಲ್ಲೂಕು ಕೇಂದ್ರದಲ್ಲಿ ನಿರ್ಮಾಣವಾದ ಸಮುದಾಯ ಆರೋಗ್ಯ ಕೇಂದ್ರವನ್ನು ಉದ್ಘಾಟಿಸಿ ಆರಂಭಿಸಿಲ್ಲ. ಜೊತೆಗೆ ಈಗ ಇರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನುರಿತ ಖಾಯಂ ವೈದ್ಯರಿಲ್ಲ ಹೀಗಾದರೆ ಬಡಜನತೆಯ ಪಾಡೇನು ಎನ್ನುವಂತಾಗಿದೆ. ಪಿಎಚ್‌ಸಿಗೆ ನೇಮಕಗೊಂಡು ಬರುವ ವೈದ್ಯರು ೬ ತಿಂಗಳಲ್ಲಿ ಬೇರೆಡೆ ತೆರಳುತ್ತಾರೆ ಹೀಗಾಗಿ ಖಾಯಂ ವೈದ್ಯರು ಇಲ್ಲದ ಸ್ಥಿತಿ ಇಲ್ಲಿನ ಪಿಎಚ್‌ಸಿಯದ್ದಾಗಿದೆ. ಗ್ರಾಮೀಣ ಭಾಗದ ಜನರ ಕಾಳಜಿಯಿಂದಾದರೂ ಕೂಡಲೇ ಖಾಯಂ ವೈದ್ಯರನ್ನು ಕೂಡಲೇ ನೇಮಕ ಮಾಡಬೇಕು. ಇಲ್ಲವಾದರೇ ಎಪ್ರೀಲ್ ದಿ:೧ ರಿಂದ ಧರಣಿ ಸತ್ಯಾಗ್ರಹ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿ ಮನವಿ ಸಲ್ಲಿಸಿದರು.
ಚಿದಾನಂದ ಬಜಂತ್ರಿ, ಅಬೂಬಕರ್ ಯಲಗಾರ, ಮಲ್ಲಿಕಾರ್ಜುನ ಬಜಂತ್ರಿ ಹಾಗೂ ಸೇನೆಯ ಪದಾಧಿಕಾರಿಗಳು ಇದ್ದರು.

