ಜ.2ರ ಸಿದ್ದೇಶ್ವರ ಶ್ರೀ ಗುರುನಮನ ಕಾರ್ಯಕ್ರಮದ ರೂಪುರೇಷೆ ಸಭೆಯಲ್ಲಿ ಸಚಿವ ಎಂ.ಬಿ.ಪಾಟೀಲ ಅಭಿಮತ
ವಿಜಯಪುರ: ಮುಂಬರುವ ಜನೇವರಿ 2 ರಂದು ನಡೆಯಲಿರುವ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಗುರುನಮನ ಕಾರ್ಯಕ್ರಮದ ರೂಪುರೇಷೆಗಳ ಸುತ್ತೂರು ಮತ್ತು ಕನೇರಿ ಮಠದ ಶ್ರೀಗಳ ಚರ್ಚಿಸಿ ಕುರಿತು ಜ್ಞಾನಯೋಗಾಶ್ರಮ ಸಮಿತಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು. ಈ ತೀರ್ಮಾನಕ್ಕೆ ನಾನು ಬದ್ಧನಾಗಿರುತ್ತೇನೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.
ನಗರದ ಜ್ಞಾನಯೋಗಾಶ್ರಮದಲ್ಲಿ ಸೋಮವಾರ ರಾತ್ರಿ ನಾನಾ ಸ್ವಾಮೀಜಿಗಳ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು ಮತ್ತು ಜ್ಞಾನಯೋಗಾಶ್ರಮದ ಕುರಿತು ಯಾವ ಕೆಲಸ ವಹಿಸಿದರೂ ಭಕ್ತಿಪೂರ್ವಕವಾಗಿ ಮಾಡುತ್ತೇನೆ ಎಂದು ಹೇಳಿದರು.
ಸಿದ್ಧೇಶ್ವರ ಸ್ವಾಮೀಜಿಯವರ ಜೀವನ ವಿಭಿನ್ನವಾಗಿತ್ತು. ಅವರೊಬ್ಬ ಸಂತ ಮಾತ್ರವಲ್ಲ, ಸರಳ, ಶ್ರೇಷ್ಠ ಹಾಗೂ ಅರ್ಥಪೂರ್ಣ ಬದುಕು ಸಾಗಿಸಿದರು. ಅವರ ಜೀವನದ ಪಯಣದಲ್ಲಿ ವಿಶೇಷವಾಗಿ ಗ್ರಾಮೀಣ ಜನರ, ರೈತರ ಬದುಕಿನ ಬಗ್ಗೆ ಕಾಳಜಿ ಮತ್ತು ಬದ್ಧತೆ ಹೊಂದಿದ್ದರು. ಯುವಕರು ಮತ್ತು , ವಿಜ್ಞಾನದ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು ಎಂದು ಸಚಿವರು ಹೇಳಿದರು.
ಶ್ರೀ ಸಿದ್ಧೇಶ್ವರ ಶ್ರೀಗಳ ಅಂತಿಮ ಅಭಿವಂದನಾ ಪತ್ರ ಎಲ್ಲರಿಗಿಂತ ವಿಭಿನ್ನವಾಗಿತ್ತು. ಅದರಲ್ಲೂ ಅವರು ಶ್ರೇಷ್ಠತೆ ಮೆರೆದಿದ್ದಾರೆ. ನಿಸರ್ಗದಲ್ಲಿ ಬಂದು ನಿಸರ್ಗದಲ್ಲಿ ಲೀನವಾಗಿದ್ದೇನೆ ಎಂದು ಹೇಳಿದ್ದಾರೆ. ಅವರ ಬಯಕೆಯಲ್ಲಿ ಶ್ರೇಷ್ಠತೆ ಇತ್ತು. ಸ್ಮಾರಕ, ಪೂಜೆ ಬೇಡ ಎಂದು ಅಭಿವಂದನಾ ಪತ್ರದಲ್ಲಿ ಬರೆದಿದ್ದಾರೆ. ನಾವೂ ಬದ್ಧತೆಯಿಂದ ನಿರ್ಣಯ ಕೈಗೊಳ್ಳಬೇಕಿದೆ. ಅವರ ಆಶಯಗಳಿಗೆ ಪೂರಕವಾಗಿ ನಮ್ಮ ನಡೆ ಇರಬೇಕು. ಅವರ ಬಗ್ಗೆ ಸ್ಮರಣೆ ಇರಲಿ. ಎರಡು ದಿನಗಳ ಕಾಲ ನಡೆಸಲು ಉದ್ದೇಶಿಸಿರುವ ಕಾರ್ಯಕ್ರಮದಲ್ಲಿ ಶ್ರೀಗಳಿಗೆ ಇಷ್ಟವಾಗಿದ್ದ ಗ್ರಾಮೀಣ ಬದುಕು ಮತ್ತು ರೈತರು, ಯುವಕರು ಮತ್ತು ಶಿಕ್ಷಣ ಕುರಿತು ಹಾಗೂ ದಾರ್ಶನಿಕರ ಬಗ್ಗೆ ಗೋಷ್ಠಿಗಳು ನಡೆಯಲಿ. ಸರಳತೆಯ ಸಾಕಾರಮೂರ್ತಿಯಾಗಿದ್ದ ಶ್ರೀಗಳ ಆಶಯಗಳನ್ನು ಬಿಟ್ಟು ಬೇರೆ ಕೆಲಸ ಮಾಡಬಾರದು. ಅಭಿವಂದನಾ ಪತ್ರದಲ್ಲಿರುವ ಅವರ ಆಶಯಕ್ಕೆ ಸಾಸಿವೆ ಕಾಳಿನಷ್ಟು ವ್ಯತ್ಯಾಸವಾಗಬಾರದು. ಎಲ್ಲ ಕಾರ್ಯಕ್ರಮಗಳೂ ಸರಳವಾಗಿ ನಡೆಯಬೇಕು. ಸ್ವಚ್ಛತೆ, ಶಿಸ್ತು ಹಾಗೂ ಸಮಯಪಾಲನೆ ಅದ್ಯತೆ ನೀಡಬೇಕು ಎಂದು ಸಚಿವರು ಹೇಳಿದರು.
ಬಾಲಗಾಂವ ಶ್ರೀ ಅಮೃತಾನಂದ ಸ್ವಾಮೀಜಿ ಮಾತನಾಡಿದರು.
ಜ್ಞಾನಯೋಗಾಶ್ರಮದ ಅಧ್ಯಕ್ಷ ಬಸವಲಿಂಗ ಸ್ವಾಮೀಜಿ ಮಾತನಾಡಿ, ಸುತ್ತೂರು ಮತ್ತು ಕನೇರಿ ಸ್ವಾಮೀಜಿಗಳ ಜೊತೆ ಶೀಘ್ರದಲ್ಲಿಯೇ ಚರ್ಚೆ ನಡೆಸಿ ಮಾಹಿತಿ ನೀಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಶ್ರೀ ಹರ್ಷಾನಂದ ಸ್ವಾಮೀಜಿ, ಶ್ರೀ ಸದಾನಂದ ಸ್ವಾಮಿಜಿ, ಆಲಮಟ್ಟಿಯ ಶ್ರಿ. ರುದ್ರಮುನಿ ಶಿವಾಚಾರ್ಯರು, ಶ್ರೀ ಶ್ರದ್ಧಾನಂದ ಸ್ವಾಮೀಜಿ, ವಿ. ಸಿ. ನಾಗಠಾಣ, ಘನಶ್ಯಾಮ ತೋಶ್ನಿವಾಲ, ಸಹಜಾನಂದ ದಂಧರಗಿ ಮುಂತಾದವರು ಉಪಸ್ಥಿತರಿದ್ದರು.
ಇದಕ್ಕೂ ಮೊದಲು ಜ್ಞಾನಯೋಗಾಶ್ರಮಕ್ಕೆ ತೆರಳಿದ ಸಚಿವ ಎಂ. ಬಿ. ಪಾಟೀಲ ಮಲ್ಲಿಕಾರ್ಜುನ ಸ್ವಾಮೀಜಿಗಳ ಗದ್ದುಗೆಗೆ ನಮನ ಸಲ್ಲಿಸಿದರು.