ವಿಜಯಪುರ: ಬರ ಸಮಸ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಕೆರೆಗಳಿಗೆ ಸಮರ್ಪಕವಾಗಿ ನೀರು ಹರಿಸಬೇಕು ಮತ್ತು ವಿದ್ಯುತ್ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.
ನಗರದಲ್ಲಿರುವ ತಮ್ಮ ಗೃಹ ಕಚೇರಿಯಲ್ಲಿ ಇಂದು ಮಂಗಳವಾರ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ ಅವರು, ರೈತರ ಸಮಸ್ಯೆಗಳಿಗೆ ಕೂಡಲೆ ಸ್ಪಂದಿಸಿದರು. ಅಲ್ಲದೇ, ಸಂಬಂಧಿಸಿದ ಅಧಿಕಾರಿಗಳಿಗೆ ಮೊಬೈಲ್ ಕರೆ ಮಾಡಿ ಕೂಡಲೇ ಕ್ರಮ ಸಮಸ್ಯೆಗಳಿಗೆ ಸ್ಪಂದಿಸುವಂತೆ ಸೂಚನೆ ನೀಡಿದರು.
ತಿಡಗುಂದಿ ಸುತ್ತಮುತ್ತಲಿನ ನಾನಾ ಗ್ರಾಮಗಳಿಂದ ಆಗಮಸಿದ್ದ ರೈತರು, ಮುಳವಾಡ ಏತ ನಿರಾವರಿ ಯೋಜನೆಯ ತಿಡಗುಂದಿ ಅಕ್ವಾಡಕ್ಟ್ ಮೂಲಕ ಕೆರೆಗಳಿಗೆ ನೀರು ಹರಿಸಬೇಕು. ಇದರಿಂದ ಮಖಣಾಪುರ, ಡೋಮನಾಳ, ತಿಡಗುಂದಿ, ಬೊಮ್ಮನಳ್ಳಿ, ಮಿಂಚನಾಳ, ಗುಣಕಿ ಸೇರಿದಂತೆ ನಾನಾ ಗ್ರಾಮಗಳಿಗೆ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದು ಸಚಿವರ ಬಳಿ ಅಳಲು ತೋಡಿಕೊಂಡರು. ಆಗ ಕೂಡಲೇ ಸ್ಪಂದಿಸಿದ ಸಚಿವರು ಕೆಬಿಜೆಎನ್ಎಲ್ ಸೂಪರಿಂಟೆಂಡೆಂಟ್ ಎಂಜಿನಿಯರ್ ಮತ್ತು ಚೀಫ್ ಎಂಜಿನಿಯರ್ ಅವರಿಗೆ ಕರೆ ಮಾಡಿ ಕೂಡಲೇ ಕಾಲುವೆಗಳಿಗೆ ನೀರು ಹರಿಸಬೇಕು ಎಂದು ಸೂಚನೆ ನೀಡಿದರು.
ಈ ಮಧ್ಯೆ, ಕಾರಜೋಳ ಗ್ರಾಮದಿಂದ ಆಗಮಿಸಿದ್ದ ರೈತರು ತಮ್ಮ ಗ್ರಾಮದ ಕೆರೆಗೆ ನೀರು ಹರಿಸುವಂತೆ ಮನವಿ ಮಾಡಿದರು. ಆಗ ಸಚಿವರು, ಸಣ್ಣ ನೀರಾವರಿ ಇಲಾಖೆಯ ಎಂಜಿನಿಯರ್ ಗಳಿಗೆ ಕರೆ ಮಾಡಿ ಕೆರೆಗೆ ನೀರು ತುಂಬಿಸುವಂತೆ ಸೂಚನೆ ನೀಡಿದರು. ಅಲ್ಲದೇ, ನೀರು ಹರಿಸಲು ಅನುಕೂಲವಾಗುವಂತೆ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡುವಂತೆ ಹೆಸ್ಕಾಂ ಅಧಿಕಾರಿಗಳಿಗೆ ಕರೆ ಮಾಡಿ ಸೂಚನೆ ನೀಡಿದರು.
ಈ ಮಧ್ಯೆ ನಾನಾ ಗ್ರಾಮಗಳಿಂದ ಆಗಮಿಸಿದ್ದ ರೈತರು, ರಸ್ತೆ, ಶಾಲಾ ಕೋಠಡಿಗಳು ಸೇರಿದಂತೆ ನಾನಾ ಬೇಡಿಕೆಗಳ ಕುರಿತು ಸಚಿವರಿಗೆ ಮನವಿ ಪತ್ರ ಸಲ್ಲಿಸಿದರು. ಎಲ್ಲ ಸಮಸ್ಯೆಗಳಿಗೆ ಸಚಿವ ಎಂ. ಬಿ. ಪಾಟೀಲ ಅವರು ಸ್ಥಳದಲ್ಲಿಯೇ ಸ್ಪಂದಿಸಿದರು.
Related Posts
Add A Comment