ವರ್ಗಾವಣೆ ದಂಧೆಯಲ್ಲಿ ವ್ಯಾಪಕ ಭ್ರಷ್ಟಾಚಾರ, ವಿದ್ಯುತ್ ಕಡಿತ ಹಾಗೂ ಸರ್ಕಾರದ ಜನವಿರೋಧಿ ನೀತಿಗೆ ಖಂಡನೆ
ವಿಜಯಪುರ: ರಾಜ್ಯದಲ್ಲಿ ವರ್ಗಾವಣೆ ದಂಧೆಯಲ್ಲಿ ವ್ಯಾಪಕ ಭ್ರಷ್ಟಾಚಾರ, ವಿದ್ಯುತ್ ಕಡಿತ ಹಾಗೂ ಜನವಿರೋಧಿ ನೀತಿ ವಿರೋಧಿಸಿ ಭಾರತೀಯ ಜನತಾ ಪಕ್ಷದ ಬಿಜೆಪಿ ಕಾರ್ಯಕರ್ತರು ರಾಜ್ಯ ಕಾಂಗ್ರೆಸ್ ಸರ್ಕಾರ ವಿರುದ್ಧ ಬೃಹತ್ ಪ್ರತಿಭಟನಾ ರ‍್ಯಾಲಿ ನಡೆಸಿದರು.
ವಿಜಯಪುರದ ಡಾ.ಬಿ.ಆರ್. ಅಂಬೇಡ್ಕರ ವೃತ್ತದಿಂದ ಆರಂಭಗೊಂಡಡ ರ‍್ಯಾಲಿ ವಿವಿಧ ಮಾರ್ಗಗಳಲ್ಲಿ ಸಂಚರಿಸಿ ಜಿಲ್ಲಾಧಿಕಾರಿಗಳ ಕಚೇರಿ ತಲುಪಿತು. ಈ ವೇಳೆ ಯಾವೊಬ್ಬ ಅಧಿಕಾರಿಯೂ ಸ್ಥಳದಲ್ಲಿ ಇರದ ಕಾರಣ ಪ್ರತಿಭಟನೆ ನೇತೃತ್ವ ವಹಿಸಿದ್ದ ಸಂಸದ ರಮೇಶ ಜಿಗಜಿಣಗಿ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿ ಕೆಲ ಹೊತ್ತು ಧರಣಿ ನಡೆಸಿ ಅಸಮಾಧಾನ ಹೊರಹಾಕಿದರು.
ಮನವಿ ಸ್ವೀಕರಿಸಲು ಓರ್ವ ಅಧಿಕಾರಿಯೂ ಇಲ್ಲ ಎಂದಾದರೆ ಹೇಗೆ? ಇದು ಯಾವ ವ್ಯವಸ್ಥೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಂದುವರೆದು ಮಾತನಾಡಿದ ಅವರು, ಬೆಂಗಳೂರಿನ ಅಂಬಿಕಾಪತಿ ಅವರ ಮನೆಯಲ್ಲಿ ಕೋಟಿ ಕೋಟಿ ರೂ. ಹಣ ಪತ್ತೆಯಾಗಿದೆ, ಇದು ಕೇವಲ ಒಂದು ಉದಾಹರಣೆ ಅಷ್ಟೇ, ಗುತ್ತಿಗೆದಾರರಿಗೆ ಬಾಕಿ ಹಣ ಪಾವತಿಗೆ ಕಾಂಗ್ರೆಸ್ ಸರ್ಕಾರ ಕೋಟಿ ಕೋಟಿ ಕಮೀಷನ್ ಪಡೆಯುತ್ತಿರುವುದು ಸ್ಪಷ್ಟವಾಗಿದೆ ಎಂದು ಆಕ್ರೋಶ ಹೊರಹಾಕಿದರು.
ಪ್ರತಿಭಟನಾ ರ‍್ಯಾಲಿ ಉದ್ದೇಶಿಸಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ ಕುಚಬಾಳ, ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ, ವಿದ್ಯುತ್ ಕ್ಷಾಮ ಎದುರಾಗಿದ್ದು, ರೈತರ ಜಮೀನುಗಳಿಗೆ ವಿದ್ಯುತ್ ದೊರಕದೇ ತೊಂದರೆ ಎದುರಿಸುವಂತಾಗಿದೆ, ಇನ್ನೊಂದೆಡೆ ದುಬಾರಿ ಕರೆಂಟ್ ಬಿಲ್ ಸಾರ್ವಜನಿಕರನ್ನು ಹೈರಾಣಗೊಳಿಸಿದೆ, ರೈತರು ಹಾಗೂ ಸಾರ್ವಜನಿಕರು ನಿತ್ಯ ತೊಂದರೆ ಎದುರಿಸುವಂತಾಗಿದೆ, ಬಡವರು, ಕೂಲಿಕಾರ್ಮಿಕರು ರಾಜ್ಯ ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ, ರಾಜ್ಯ ಸರ್ಕಾರ ಆಡಳಿತ ನಡೆಸಲು ಸಂಪೂರ್ಣ ವಿಫಲವಾಗಿದ್ದು ಕೂಡಲೇ ಮುಖ್ಯಮಂತ್ರಿ ಹಾಗೂ ಎಲ್ಲ ಸಚಿವ ಸಂಪುಟ ಸದಸ್ಯರು ರಾಜಿನಾಮೆ ನೀಡಿ ಮನೆಗೆ ಹೋಗಬೇಕು ಎಂದು ಒತ್ತಾಯಿಸಿದರು.
ನಂತರ ಬಂದ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಅವರು ಮನವಿ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಪ್ರಕಾಶ ಅಕ್ಕಲಕೋಟ, ವಿಜುಗೌಡ ಪಾಟೀಲ, ಬಸವರಾಜ ಬಿರಾದಾರ, ಶಿವರುದ್ರ ಬಾಗಲಕೊಟ, ಬಾಬುರಾಜೇಂದ್ರ ನಾಯಕ, ಮಹೇಂದ್ರ ನಾಯಕ, ಗೋಪಾಲ ಘಟಕಾಂಬಳೆ, ರಾಜು ಮಗಿಮಠ, ಮಲ್, ಅಬ್ದುಲ ಸತ್ತಾರ, ವಿನಾಯಕ ದಹಿಂಡೆ, ಶರಣಬಸು ಕುಂಬಾರ, ಮಡಿವಾಳ ಯಾಳವಾರ, ಆನಂದ ಮುಚ್ಚಂಡಿ, ಸಂತೋಷ ನಿಂಬರಗಿ, ಸಂಪತ್ ಕೋಹಳ್ಳಿ, ರವಿ ಚವ್ಹಾಣ, ಸಚಿನ ಬೊಂಬಳೆ, ಸೋಮು ಮಠ, ವಿಜಯ ಬಿರಾದಾರ ಸೇರಿದಂತೆ ಮುಂತಾದವರಿದ್ದರು.