ಒಂದೂವರೆ ಎಕರೆ ಚೆಂಡು ಹೂ ಬೆಳೆಗೆ ತಂಬಿಗೆಯಿಂದ ನೀರು ಪೂರೈಕೆ!
*– ಜಿ ಎನ್ ಬೀರಗೊಂಡ (ಮುತ್ತು)*
ಢವಳಗಿ: ರಾಜ್ಯದಲ್ಲಿ ಬರಗಾಲ ಆವರಿಕೊಂಡಿದ್ದರಿಂದ ರೈತರು ತೀವ್ರ ಕಂಗಾಲಾಗಿದ್ದು ಮುಂದೇನು? ಎಂಬ ಚಿಂತೆಯಲ್ಲಿ ವರುಣನ ಆಗಮನದ ನಿರೀಕ್ಷೆಯಲ್ಲಿ ಆಕಾಶದತ್ತ ಚಿತ್ತ ನೆಟ್ಟಿದ್ದಾರೆ.
ರೈತರ ಜಮೀನಲ್ಲಿದ್ದ ಬೋರು, ಬಾವಿಗಳು ನೀರಿಲ್ಲದೆ ಬತ್ತಿ ಹೊಗಿವೆ. ಜನ- ಜಾನುವಾರಗಳಿಗೆ ಕುಡಿಯಲು ನೀರಿಲ್ಲದೆ ಕಂಗಾಲಾಗಿದ್ದಾರೆ.
ರೈತನೋರ್ವ ತಮ್ಮ ಒಂದೂವರೆ ಎಕರೆ ಜಮೀನಿನಲ್ಲಿ ಚೆಂಡು ಹೂ ನಾಟಿ ಮಾಡಿದ್ದಾನೆ. ಆದರೆ ಸರಿಯಾದ ಮಳೆ ಮತ್ತು ವಿದ್ಯುತ್ ಅಭಾವದ ಕಾರಣ ಮೂರು ತಿಂಗಳಿಂದ ಉತ್ತಮವಾಗಿ ಬೆಳೆದ ಚೆಂಡು ಹೂವು ಬಾಡಬಾರದು ಎಂದು ಒಣಗುತ್ತಿರುವ ಚೆಂಡು ಹೂವಿನ ಗಿಡದ ಬುಡಕ್ಕೆ ಬಕೆಟ್ ನಿಂದ ತಂಬಿಗೆಯ ಮೂಲಕ ನೀರು ಹಾಕಿ ಚೆಂಡು ಹೂವಿನ ಉಳಿವಿಗೆ ನಿರಂತರ ಶ್ರಮಿಸುತ್ತಿದ್ದಾನೆ.
ಹೌದು, ಮುದ್ದೇಬಿಹಾಳ ತಾಲ್ಲೂಕಿನ ರೂಡಗಿ ಗ್ರಾಮದ ರೈತ ಮುತ್ತು ರಾಮಣ್ಣ ಕೋರಿ ಅವರು, ಅಗಸಬಾಳ ಸರ್ವೇಯಲ್ಲಿರುವ ತಮ್ಮ ಜಮೀನಿನಲ್ಲಿ ಒಂದುವರಿ ಎಕರೆಯಲ್ಲಿ ಚೆಂಡು ಹೂವಿನ ಬೆಳೆ ಹಾಕಿದ್ದಾನೆ. ಆದರೆ ಮಳೆ ಇಲ್ಲದ ಕಾರಣ ಬೋರವೆಲ್ ನಲ್ಲಿಯೂ ಸದ್ಯ ನೀರಿಲ್ಲದಂತಾಗಿದೆ. ಆದರೂ ರೈತ ಮುತ್ತು ಛಲ ಬಿಡದ ತ್ರಿವಿಕ್ರಮನಂತೆ ಸ್ವಲ್ಪ ನೀರು ಸಂಗ್ರಹಿಸಿ ಬಕೆಟ್ ನಲ್ಲಿ ತುಂಬಿ ತಂಬಿಗೆಯ ಮುಖಾಂತರ ಚೆಂಡು ಹೂವಿನ ಗಿಡಕ್ಕೆ ನಾಲ್ಕು ಜನರೊಂದಿಗೆ ಸೇರಿ ಎರಡ್ಮೂರು ದಿನಗಳ ಕಾಲ ನೀರು ಹಾಕಿ ತನ್ನ ಬದುಕಿಗೆ ಆಸರೆ ಆಗಿರುವ ಚೆಂಡು ಹೂವಿನ ಗಿಡಗಳಿಗೆ ಮತ್ತೆ ಜೀವ ನೀಡಲು ಹೆಣಗುತ್ತಿದ್ದಾನೆ. ದಸರಾ ಹಾಗೂ ದೀಪಾವಳಿ ಹಬ್ಬಕ್ಕೆ ಚೆಂಡು ಹೂವಿಗೆ ಬಂಗಾರ ಬೆಲೆ ಬರಬಹುದು, ತನ್ನ ಬದುಕಿಗೆ ಚೆಂಡು ಹೂ ಆಸರೆ ಆಗಬಹುದು ಎಂದು ರೈತ ಮುತ್ತು ಕೋರಿ ಚೆಂಡು ಹೂವಿನ ಬೆಳೆ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾನೆ.


