ಪೊಲೀಸ್ ಮತ್ತು ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳಿಗೆ ಸಚಿವ ಎಂ.ಬಿ.ಪಾಟೀಲ ಖಡಕ್ ಸೂಚನೆ
ವಿಜಯಪುರ: ತುಬಚಿ- ಬಬಲೇಶ್ವರ ಏತ ನೀರಾವರಿ ಯೋಜನೆಯ ಪೂರ್ವ ಕಾಲುವೆಯ ಟೇಲ್ ಎಂಡ್(ಕೊನೆಯ ಭಾಗದ) ವರೆಗೆ ನೀರು ಹರಿಸಲು ಅಡ್ಡಿಪಡಿಸುವವರ ವಿರುದ್ಧ ಕಟ್ಟುನಿಟ್ಟಾಗಿ ಕಾನೂನು ಕ್ರಮ ಕೈಗೊಳ್ಳುವಂತೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಅವರು ಪೊಲೀಸ್ ಮತ್ತು ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಇಂದು ಸೋಮವಾರ ಗೃಹ ಕಚೇರಿಯಲ್ಲಿ ಪೊಲೀಸ್ ಇಲಾಖೆಯ ಅಧಿಕಾರಿಗಳು, ಕರ್ನಾಟಕ ನೀರಾವರಿ ಇಲಾಖೆಯ ಅಧಿಕಾರಿಗಳು, ಯತ್ನಾಳ, ಜಾಲಗೇರಿ, ಇಟ್ಟಂಗಿಹಾಳ, ಲೋಹಗಾಂವ, ಸೋಮದೇವರಹಟ್ಟಿ ಮುಂತಾದ ಗ್ರಾಮಸ್ಥರೊಂದಿಗೆ ಸುದೀರ್ಘ ಸಭೆ ನಡೆಸಿದ ಸಚಿವರು ಈ ಸೂಚನೆ ನೀಡಿದ್ದಾರೆ.
ತುಬಚಿ- ಬಬಲೇಶ್ವರ ಏತ ನೀರಾವರಿ ಯೋಜನೆಯ ಪೂರ್ವ ಕಾಲುವೆಗೆ ನೀರು ಹರಿಸಿದರೂ ಕಾಲುವೆಯ ಕೊನೆಯ ಭಾಗ ಟೇಲ್ ಎಂಡ್ ವರೆಗೂ ನೀರು ಸಿಗದ ಕಾರಣ ಯತ್ನಾಳ ಮತ್ತು ಇಟ್ಟಂಗಿಹಾಳ ಮುಂತಾದ ಗ್ರಾಮಗಳಿಗೆ ನೀರು ಬರುತ್ತಿಲ್ಲ. ಹಲವು ಕಡೆಗಳಲ್ಲಿ ಕೆಲವರು ನೀರು ಹರಿಸಲು ಅಡ್ಡಿ ಪಡಿಸಿದ್ದಾರೆ. ಕಾಲುವೆಗಳಿಗೂ ಹಾನಿ ಮಾಡುತ್ತಿದ್ದಾರೆ. ಬಂದ್ ಮಾಡಿರುವ ಗೇಟುಗಳನ್ನು ಕಿತ್ತಿಹಾಕಿ ನೀರು ಪಡೆಯುತ್ತಿದ್ದಾರೆ ಎಂದು ರೈತರು ಅಳಲು ತೋಡಿಕೊಂಡರು.
ಆಗ ಕೂಡಲೇ ಸ್ಪಂದಿಸಿದ ಸಚಿವರು, ಬರದ ಹಿನ್ನೆಲೆಯಲ್ಲಿ ಎಲ್ಲ ಕಡೆ ನೀರಿನ ತೊಂದರೆ ಇದೆ. ಕೇಂದ್ರ ಸರಕಾರದ ಅಸಮಂಜಸ ಮಾರ್ಗಸೂಚಿಯ ಕಾರಣ ತಿಕೋಟಾ ಬರಪೀಡಿತ ತಾಲೂಕು ಪಟ್ಟಿಗೆ ಸೇರ್ಪಡೆಯಾಗಿಲ್ಲ. ಇಂಥ ಸಂದರ್ಭದಲ್ಲಿ ರೈತರು ಸಂಕಷ್ಟದಲ್ಲಿದ್ದಾರೆ. ಪ್ರತಿಯೊಬ್ಬರಿಗೂ ನ್ಯಾಯಯುತವಾಗಿ ನೀರು ಸಿಗಬೇಕಿದೆ. ಕಾಲುವೆಯ ಕೊನೆಯ ಭಾಗದವರೆಗೆ ನೀರು ಹರಿಯುವುದಕ್ಕೆ ಅಡ್ಡಿ ಮಾಡುವವರ ವಿರುದ್ಧ ಪೊಲೀಸರು ಮತ್ತು ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳು ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಎಲ್ಲರಿಗೂ ನ್ಯಾಯ ಸಿಗುವಂತಾಗಬೇಕು. ಅಲ್ಲದೇ, ಕೂಡಲೇ ಪೊಲೀಸ್ ಮತ್ತು ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳು ಹಾಗೂ ರೈತ ಮುಖಡರು ಸಮಸ್ಯೆ ಉಂಟಾಗಿರುವ ಸ್ಥಳಕ್ಕೆ ತೆರಳಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.
ಈ ಹಿನ್ನೆಲೆಯಲ್ಲಿ ಪೊಲೀಸರು ಮತ್ತು ನಿಗಮದ ಅಧಿಕಾರಿಗಳು ಹಾಗೂ ರೈತ ಮುಖಂಡರು ಕಾಲುವೆಗಳ ಪರಿಶೀಲನೆಗೆ ತೆರಳಿದರು.
ಈ ಸಂದರ್ಭದಲ್ಲಿ ವಿಜಯಪುರ ಗ್ರಾಮೀಣ ಡಿವೈಎಸ್ಪಿ ಗಿರಿಮಲ್ಲ ಎಚ್.ತಳಕಟ್ಟಿ, ಸಿಪಿಐ ರಾಯಗೊಂಡ ಎನ್. ಜಾನರ, ಕರ್ನಾಟಕ ನೀರಾವರಿ ನಿಗಮದ ಸೂಪರಿಂಟೆಂಡೆಂಟ್ ಎಂಜಿನಿಯರ್ ಬಿ. ಆರ್. ರಾಠೋಡ, ಎಕ್ಸಿಕ್ಯೂಟಿವ್ ಎಂಜಿನಿಯರ್ ಎಸ್. ಜೆ. ಶ್ರೀನಾಥ, ಅಸಿಸ್ಟಂಟ ಎಕ್ಸಿಕ್ಯೂಟಿವ್ ಎಂಜಿನಿಯರ್ ಪ್ರವೀಣ ಹುಣಸಿಕಟ್ಟಿ, ರಾಜೇಂದ್ರ ರೂಢಗಿ, ಸಿದ್ದು ಲಾಂಡಗೆ, ರೈತ ಮುಖಂಡರು ಉಪಸ್ಥಿತರಿದ್ದರು.
ಇದೇ ವೇಳೆ ಸಚಿವ ಎಂ. ಬಿ. ಪಾಟೀಲ ಅವರನ್ನು ಭೇಟಿ ಮಾಡಿದ ಭಾರತೀಯ ಕಿಸಾನ್ ಸಂಘದ ರಾಜ್ಯ ಉಪಾಧ್ಯಕ್ಷ ಗುರುನಾಥ ಬಗಲಿ, ಜಿಲ್ಲಾಧ್ಯಕ್ಷ ಮಲ್ಲನಗೌಡ ಪಾಟೀಲ ಮುಂತಾದ ಮುಖಂಡರು ಇಂಡಿ ತಾಲೂಕಿನ ತಡವಲಗಾ ಕಾಲುವೆಗೆ ನೀರು ಹರಿಸಬೇಕು. ವಿದ್ಯುತ್ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಮನವಿ ಮಾಡಿದರು.
ರೈತರ ಮನವಿಗೆ ಸ್ಪಂದಿಸಿದ ಸಚಿವರು ಈಗಾಗಲೇ ಜಿಲ್ಲಾದ್ಯಂತ ಟೇಲ್ ಎಂಡ್ ವರೆಗೆ ಕಾಲುವೆಗಳಿಗೆ ನೀರು ಹರಿಸಲು ಸೂಚನೆ ನೀಡಿರುವುದಾಗಿ ತಿಳಿಸಿದರು.
ಇದೇ ವೇಳೆ, ವಿಜಯಪುರ ಜಿಲ್ಲೆಯ ನಾನಾ ಭಾಗಗಳಿಂದ ಆಗಮಿಸಿದ್ದ ರೈತರ ಸಮಸ್ಯೆ ಆಲಿಸಿದ ಸಚಿವ ಎಂ. ಬಿ. ಪಾಟೀಲ ಅವರು, ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿ ಪರಿಹಾರ ಒದಗಿಸಿದರು.