- ಚೇತನ ಶಿವಶಿಂಪಿ
ಮುದ್ದೇಬಿಹಾಳ: ಸಾಕಷ್ಟು ಅಂತಸ್ತು, ಐಶ್ವರ್ಯ ಹೊಂದಿದ ಕೆಲವರಿಗೆ ಯಾವ ವಿದ್ಯೆಯೂ ಒಲಿಯಲ್ಲ. ಕಿತ್ತು ತಿನ್ನೋ ಬಡತನ ಇರುವಲ್ಲಿ ಸಾಕಷ್ಟು ವಿದ್ಯೆಗಳು ತಾಂಡವಾಡುತ್ತಿರುತ್ತವೆ ಅನ್ನೋ ಹಿರಿಯರ ಮಾತು ನಿಜಕ್ಕೂ ಸುಳ್ಳಲ್ಲ. ಭಾರತದ ಇತಿಹಾಸವನ್ನು ಕೆದಕಿದಾಗ ಕೆಸರಲ್ಲಿ ಅರಳುವ ಕಮಲದಂತೆ ಅದೆಷ್ಟೋ ಜನ ಬಡತನದಲ್ಲಿಯೇ ಬೆಂದು ದೊಡ್ಡ ಸಾಧನೆಗಳನ್ನು ಮಾಡಿದ್ದಾರೆ. ಇದೇ ಸಾಲಿನಲ್ಲಿ ಇಲ್ಲೊಬ್ಬ ಸರ್ಕಾರಿ ನೌಕರನೂ ಖಂಡಿತ ಸೇರುತ್ತಾನೆ.
ತನ್ನ ೧೪ನೇ ವಯಸ್ಸಿನಲ್ಲಿ ತಂದೆ ತಾಯಿಯರನ್ನು ಕಳೆದುಕೊಂಡು, ಒಬ್ಬಳು ಅಕ್ಕ ಇಬ್ಬರು ತಮ್ಮಂದಿರನ್ನು ಸಲಹುವ ಭಾರ ಹೊತ್ತ ಈ ನೌಕರ ಸಧ್ಯ ಈ ಭಾಗದ ಜನತೆಯ ಮನಗೆದ್ದು, ಇಲಾಖೆಯ ಗೌರವ ಹೆಚ್ಚಿಸಿ, ಗ್ರಾಮದ ಹೆಸರನ್ನು ರಾಜ್ಯ ಮಟ್ಟದಲ್ಲಿ ಮಿಂಚಿಸಿ ಬಹು ದೊಡ್ಡ ಸಾಧನೆ ಮಾಡಿದ್ದಾನೆ.
ತಾಲೂಕಿನ ಢವಳಗಿ ಗ್ರಾಮದ ಮಡಿವಾಳಪ್ಪ ಕಲ್ಲಪ್ಪ ಗುಡಿಮನಿ ಹುಟ್ಟಿನಿಂದ ಕಡುಬಡವ. ಅವರಿವರು ಕೊಟ್ಟ ಬಟ್ಟೆಯನ್ನು ತೊಟ್ಟು, ತನ್ನ ಮತ್ತು ತನ್ನವರ ದಿನದ ಗಂಜಿಗಾಗಿ ಮಾಡದ ಕೆಲಸಗಳು ಯಾವೂ ಉಳಿದಿಲ್ಲ. ಆಗಿನ ಕಾಲದಲ್ಲಿ ಜಾತಿಯ ಭೂತವೊಂದು ಹೆಚ್ಚು ಸಂಪಾದನೆಯ ದುಡಿಮೆಗೆ ಬಹು ದೊಡ್ಡ ಬೇಲಿಯಾದ ಬಗ್ಗೆ ಈತ ಮರೆತಿಲ್ಲ. ಈ ಎಲ್ಲ ಸಮಸ್ಯೆಗಳನ್ನು ಎದುರಿಸಿ ಮುಂದೆ ನಮಗೆ ಒಳ್ಳೆಯ ದಿನಗಳು ಬರಬಹುದೆಂಬ ಆಶಾ ಭಾವನೆಯಿಂದ ಮುನ್ನುಗ್ಗುತ್ತಲೇ ಬಂದಿರುವ ಈತನಲ್ಲಿ ಅಡಗಿದ್ದವು ಹಲವಾರು ಕಲೆಗಳು.
ಸ್ಪೋಟ್ಸ್ ನಲ್ಲಿ ಈತ ನಿಸ್ಸೀಮ. ಲಾಂಗ್ ಜಂಪ್, ಹೈ ಜಂಪ್, ೧೧ಸೆಕೆಂಡುಗಳಲ್ಲಿ ನೂರು ಮೀಟರ್ ಓಟ, ಗುಂಡು ಎಸೆತ, ಚಕ್ರ ಎಸೆತ, ಫುಟ್ ಬಾಲ್, ವ್ಹಾಲಿ ಬಾಲ್, ಕ್ರಿಕೇಟ್ ಹೀಗೆ ಒಂದಲ್ಲ ಎರಡಲ್ಲ, ಈತ ಸಾಧನೆ ಮಾಡದಿರೋ ಆಟಗಳೇ ಇಲ್ಲ ಅಂತಾರೆ ಗುಡಿಮನಿ ಸ್ನೇಹಿತರು. ರಾಜ್ಯಮಟ್ಟದ ಕದಂಬ ಸೇವಾ ರತ್ನ ಪ್ರಶಸ್ತಿ ಪುರಸ್ಕೃತನಾದ ಗುಡಿಮನಿ ಇಲಾಖೆಯ ವತಿಯಿಂದ ಹಲವಾರು ಸ್ಪರ್ದೆಗಳಲ್ಲಿ ಭಾಗವಹಿಸಿ ೧೨ ಪದಕ, ೨೦ ಮೆಡಲ್‌ಗಳು ಸೇರಿದಂತೆ ಹಲವಾರು ಪ್ರಶಸ್ತಿ ಪತ್ರಗಳನ್ನು ಈಗಾಗಲೇ ಮುಡಿಗೇರಿಸಿಕೊಂಡಿದ್ದಾನೆ.
ಇದಷ್ಟೇ ಅಲ್ಲದೇ ಗ್ರಾಮೀಣ ಕ್ರೀಡೆಗಳಲ್ಲಿಯೂ ಗುಡಿಮನಿ ಸುತ್ತು ಹಳ್ಳಿಗಳಲ್ಲಿ ಹೆಸರು ಮಾಡಿದ್ದಾನೆ. ಅದರಲ್ಲೂ ವಿಶೇಶವಾಗಿ ಭಾರವಾದ ಕಲ್ಲು ಎತ್ತುವದು, ಕಬಡ್ಡಿ ಆಟದಲ್ಲಿ ಈತ ಯಾವತ್ತೂ ಮುಂದು. ನಾಟಕಗಳಲ್ಲಿ ಅಭಿನಯ, ಹಾಡು ಹಾಡುವದು ಮಾತ್ರವಲ್ಲದೇ ಅಡುಗೆ ಮಾಡುವದರಲ್ಲಿಯೂ ಈತನ ಕೈರುಚಿ ಸೂಪರ್. ಅಡುಗೆ ಅಂದರೆ ರೈಸ್ ಐಟಮ್, ಸಾಂಬಾರು ಪಲ್ಯ ಮಾತ್ರವಲ್ಲ, ರೊಟ್ಟಿ, ಚಪಾತಿ, ಹೋಳಿಗೆ, ವಿವಿಧ ಬಗೆಯ ಉಂಡೆಗಳು ಹೀಗೆ ಪ್ರತಿಯೊಂದು ಶಾಖಾಹಾರಿ ಮತ್ತು ಮಾಂಸಾಹಾರಿ ಅಡುಗೆ ತಯಾರಿಯಲ್ಲೂ ಈತನನ್ನು ಮೀರಿಸುವವರಿಲ್ಲ.
ಕಳೆದ ಹಲವು ವರ್ಷಗಳ ಹಿಂದೆ ದಿನಗೂಲಿ ನೌಕರನಾಗಿ ಢವಳಗಿ ಗ್ರಾಮ ಪಂಚಾಯತಗೆ ಸೇರಿದ ಗುಡಿಮನಿಗೆ ಯೋಗಾ ಯೋಗ ಎಂಬಂತೆ ಸರ್ಕಾರ ಖಾಯಂ ನೌಕರನನ್ನಾಗಿ ನೇಮಿಸಿಕೊಂಡಿದೆ. ಸರ್ಕಾರಿ ನೌಕರನಾದ ಬಳಿಕವೂ ತನ್ನ ಪ್ರಯತ್ನವನ್ನು ಬಿಡದ ಗುಡಿಮನಿ ತನ್ನ ೫೧ನೇ ವಯಸ್ಸಿನಲ್ಲಿಯೂ ಕೂಡ ರಾಜ್ಯವೇ ತನ್ನತ್ತ ತಿರುಗಿನೋಡುವಂತೆ ಸಾಧಿಸಿದ್ದಾನೆ.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಆಯೋಜಿಸಲಾಗುವ ಭಾರತ ನಾಗರೀಕ ಕಬಡ್ಡಿ ಸ್ಪರ್ದೆಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿರುವ ಗುಡಿಮನಿ ಆರ್‌ಡಿಪಿಆರ್ ಇಲಾಖೆಯ ಗೌರವವನ್ನೂ ಹೆಚ್ಚಿಸಿದ್ದಾನೆ. ಅ೧೬ ರಂದು ಭಾರತದ ರಾಜಧಾನಿಯಲ್ಲಿ ನಡೆಯಲಿರುವ ಸ್ಪರ್ದೆಯಲ್ಲಿ ಕಣಕ್ಕಿಳಿಯಲಿರುವ ಈತ ಗೆಲ್ಲುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾನೆ.
Related Posts
Add A Comment