ಸಿಂದಗಿ: ಕಳೆದ ಹತ್ತಾರು ವರ್ಷಗಳಿಂದ ಸಿಂದಗಿ ಬ್ಲಾಕ್ ಕಾಂಗ್ರೆಸ್ ಸಮಿತಿಯಲ್ಲಿ ಪಾದಾಧಿಕಾರಿಗಳ ಆಯ್ಕೆಯಾಗಿರುವುದಿಲ್ಲ. ನಮ್ಮೆಲ್ಲರ ದುಡಿಮೆ, ಪ್ರಯತ್ನ ಹೋರಾಟದ ಮೂಲಕ ಇಂದು ಪದಾಧಿಕಾರಿಗಳನ್ನು ಆಯ್ಕೆಮಾಡಲಾಗಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಭಾನುವಾರ ಸಾಯಂಕಾಲದಂದು ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಹಮ್ಮಿಕೊಂಡ ನೂತನ ಪದಾಧಿಕಾರಿಗಳ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಇಂದು ನೀವು ಸನ್ಮಾನಗೊಂಡಿದ್ದೀರಿ ಎಂದರೆ ನಿಮ್ಮ ಜವಾಬ್ದಾರಿ ಹೆಚ್ಚಾದಂತೆ. ನೂತನ ಅಧ್ಯಕ್ಷರಿಗೆ ಮತ್ತು ಪದಾಧಿಕಾರಿಗಳಿಗೆ ಅವರದೇ ಯಾದ ಜವಾಬ್ದಾರಿ ನೀಡಬೇಕೆಂಬ ಉದ್ದೇಶದಿಂದ ಆಯ್ಕೆಮಾಡಲಾಗಿದೆ. ಮುಂಬರುವ ಸ್ಥಳೀಯ ಮಟ್ಟದಿಂದ ಹಿಡಿದು ರಾಜ್ಯ ಮಟ್ಟದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವಲ್ಲಿ ತಳಮಟ್ಟದಿಂದ ನಾವೆಲ್ಲರೂ ಕಾರ್ಯಕರ್ತರಾಗಿ ಕಾರ್ಯನಿರ್ವಹಿಸೋಣ ಎಂದರು.
ಯಾರಲ್ಲಿಯೂ ಕಾರ್ಯದರ್ಶಿ, ಸಹ ಕಾರ್ಯದರ್ಶಿ ಸದಸ್ಯರಾಗಿದ್ದೇವೆ ಎಂಬ ಅಸಮಾಧಾನ ಬೇಡ ಕಾಂಗ್ರೆಸ್ ಪಕ್ಷದಲ್ಲಿ ಕೆಳ ಹಂತದಿಂದ ಪಕ್ಷನಿಷ್ಠೆಯಿಂದ ದುಡಿದು ಶಾಸಕ, ಸಂಸದ, ವಿಪ ಸದಸ್ಯರಾದ ಉದಾಹರಣೆಗಳು ಸಾಕಷ್ಟಿವೆ. ನಿರಂತರವಾಗಿ ಚರ್ಚೆಯ ಮೂಲಕ ಸಂಘಟನೆ ಬಲಗೊಳ್ಳಲಿ ಎಂದು ಸಲಹೆ ನೀಡಿದರು.
ಇದೇ ವೇಳೆ ಜಿ.ಪಂ ಮಾಜಿ ಉಪಾಧ್ಯಕ್ಷ ಮಲ್ಲಣ್ಣ ಸಾಲಿ, ಪುರಸಭೆ ಮಾಜಿ ಸದಸ್ಯ ರಾಜಶೇಖರ ಕೂಚಬಾಳ, ಕಾಂಗ್ರೆಸ್ ಮುಖಂಡ ವಾಯ್.ಸಿ ಮಯೂರ ಮಾತನಾಡಿದರು.
ಈ ವೇಳೆ ನೂತನವಾಗಿ ಆಯ್ಕೆಯಾದ ೨೯ಜನ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು.
ದುಡಿಮೆ, ಸಂಘಟನಾ ಶಕ್ತಿ ಮತ್ತು ಹೋರಟಾದ ಮೂಲಕ ರಾಜಕೀಯವಾಗಿ ಬೆಳೆಯಲು ಈ ಮೂರು ಸೂತ್ರಗಳನ್ನು ನಿಮ್ಮಲ್ಲಿ ಅಳವಡಿಸಿಕೊಳ್ಳಬೇಕು. ಮುಂದಿನ ದಿನಮಾನಗಳಲ್ಲಿ ಕಾಂಗ್ರೆಸ್ ಪಕ್ಷದ ನಾಯಕರು ಸಿಂದಗಿ ಮತಕ್ಷೇತ್ರದ ಅಭಿವೃದ್ದಿಗೆ ಹೆಚ್ಚಿನ ಅನುದಾನ ನೀಡುತ್ತೇವೆ ಎಂದು ಭರವಸೆ ನೀಡಿದ್ದಾರೆ.
- ಅಶೋಕ ಮನಗೂಳಿ
ಶಾಸಕರು, ಸಿಂದಗಿ