ವಿಜಯಪುರ: ವಿದ್ಯುತ್ ತಂತಿ ತುಂಡಾಗಿ ಬಿದ್ದು ಐದು ಎಕರೆ ಕಬ್ಬು ನಾಶವಾಗಿರುವ ಘಟನೆ ಜಿಲ್ಲೆಯ ಕೊಲ್ಹಾರ ತಾಲೂಕಿನ ರೋಣಿಹಾಳ ಗ್ರಾಮದಲ್ಲಿ ನಡೆದಿದೆ.
ರೋಣಿಹಾಳ ಗ್ರಾಮದ ರೈತರಾದ ಶಿವಲಿಂಗಪ್ಪ ರುದ್ರಪ್ಪ ನ್ಯಾಮಗೊಂಡ ಹಾಗೂ ಶಿವಲಿಂಗವ್ವ ಭಾವಿ ಇವರಿಗೆ ಸೇರಿದ ಕಬ್ಬು ಬೆಳೆಯು ಸಂಪೂರ್ಣ ಅಗ್ನಿಗೆ ಆಹುತಿಯಾಗಿದೆ.
ಗದ್ದೆ ಮೇಲೆ ಹಾದು ಹೋಗಿರುವ ವಿದ್ಯುತ್ ತಂತಿ ತುಂಡಾಗಿ ಬಿದ್ದ ಪರಿಣಾಮ ಬೆಂಕಿ ಹೊತ್ತಿಕೊಂಡಿದೆ ಎನ್ನಲಾಗಿದೆ. ಇದರ ಪರಿಣಾಮ, ಕಟಾವಿಗೆ ಬಂದಿದ್ದ ಐದು ಎಕರೆಯಲ್ಲಿನ ಕಬ್ಬಿನ ಬೆಳೆ ಸುಟ್ಟು ನಾಶವಾಗಿದೆ. ತಕ್ಷಣವೇ ಬೆಂಕಿಯನ್ನು ನಂದಿಸಲು ಸ್ಥಳೀಯರೆಲ್ಲ ಸೇರಿ ಪ್ರಯತ್ನಿಸಿದರಾದರೂ ಬೆಳೆ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ.
ಕೈಗೆ ಬಂದ ಕಬ್ಬು ಸುಟ್ಟು ಹೋಗಿದ್ದು, ನಷ್ಟದಿಂದ ರೈತರು ಕಂಗಾಲಾಗಿದ್ದಾರೆ.
ಅಗ್ನಿ ಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಕೊಲ್ಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಘಟನಾ ಸ್ಥಳಕ್ಕೆ ಪೊಲೀಸ್ ಇಲಾಖೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ತನಿಖೆ ನಡೆಸಿದ್ದಾರೆ.
ಈ ಘಟನೆಗೆ ಹೆಸ್ಕಾಂ ಇಲಾಖೆಯ ನಿರ್ಲಕ್ಷವೇ ಕಾರಣ ಎಂದು ರೈತರು ಆರೋಪಿಸಿದ್ದಾರೆ.
Related Posts
Add A Comment