ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಇಂದು ಮಾನವ ಜೀವನದಲ್ಲಿ ಏನೆಲ್ಲವನ್ನು ಗಳಿಸಬಲ್ಲ, ಸಂಪಾದಿಸಬಲ್ಲ. ಆದರೆ ಆತನ ಜೀವನದಲ್ಲಿ ಒಂದಿಷ್ಟು ಸುಖ-ಶಾಂತಿ, ನೆಮ್ಮದಿ ಇಲ್ಲದಂತಾಗಿದೆ. ನಗು ಸರ್ವರ ರೋಗಗಳಿಗೆ ಮದ್ದು. ಮನುಷ್ಯನ ಮೊಗದಲ್ಲಿ ಕೊಂಚ ನಗು, ಸಂತೋಷ ಮತ್ತು ಮನಸ್ಸನ್ನು ಪುಳಕಿತಗೊಳಿಸಲು ಹಾಸ್ಯ ಮತ್ತು ಸಂಗೀತ ಆಲಿಸುವುದು ಅವಶ್ಯಕ. ದೇವಸ್ಥಾನಗಳಲ್ಲಿ ಸಂಗೀತ ಸಭಾ ನಡೆಸುವುದರ ಮೂಲಕ ಧಾರ್ಮಿಕ-ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವದು ಸಂತೋಷದ ಸಂಗತಿ ಎಂದು ಮುಖ್ಯ ಅತಿಥಿ ಬಿಗ್ ಬಾಸ್ ಖ್ಯಾತಿಯ ಮೈಸೂರಿನ ಕಲಾವಿದೆ ಸುಮಾ ರಾಜಕುಮಾರ ಅವರು ಅಭಿಪ್ರಾಯಪಟ್ಟರು.
ಅವರು ನಗರದ ಅಥಣಿ ರಸ್ತೆಯಲ್ಲಿರುವ ಅಲ್-ಅಮೀನ್ ಆಸ್ಪತ್ರೆ ಎದುರಿಗೆ ಇರುವ ಆಂಜನೇಯ ದೇವಸ್ಥಾನದಲ್ಲಿ ೬ ನೆಯ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ ಜರುಗಿದ ಸಂಗೀತ ರಸಮಂಜರಿ, ಹಾಸ್ಯಮಯ ಜಾದೂ ಹಾಗೂ ಮಾತನಾಡುವ ಗೊಂಬೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಸಂಗೀತ ಮನುಷ್ಯನ ಮನೋರೋಗಗಳನ್ನು ದೂರ ಮಾಡುತ್ತದೆ. ಮನಸ್ಸಿಗೆ ಆಹ್ಲಾದ ಮತ್ತು ರಂಜನೀಯವಾದ ಕಲೆಯಾಗಿ ಮಾನಸಿಕ ನೆಮ್ಮದಿ ನೀಡುವ ಸಾಧನವಾಗಿದೆ. ಸಂಗೀತ ಕಲಿಕೆಗೆ ಯಾವುದೇ ವಯಸ್ಸಿನ ಮಿತಿಯಿಲ್ಲ. ಕಲಿಯುವ ಹಂಬಲ, ಸಾಧಿಸುವ ಛಲವೊಂದಿದ್ದರೆ ಎಂತಹ ಸಾಧನೆಯನ್ನು ಮಾಡಬಹುದು ಇದಕ್ಕೆ ಭೀಮಸೇನ್ ಜೋಶಿ ಅವರೇ ನಮಗೆಲ್ಲ ನಿದರ್ಶನವೆಂದು ಹೇಳಿದರು. ಮಾಜಿ ಸೈನಿಕರಾದ ಚಂದ್ರಶೇಖರ ಇಂಗಳೇಶ್ವರ ಅವರು ಮಾತನಾಡುತ್ತಾ, ಪ್ರತಿಯೊಬ್ಬರೂ ಜೀವನದಲ್ಲಿ “ಬದುಕು ಅಥವಾ ಸಂಸಾರ” ಎಂಬ ಜಂಜಾಟದಲ್ಲಿ ಎದುರಾಗುವ ಎಲ್ಲ ಕಷ್ಟ-ನಷ್ಟ, ಸುಖ-ದುಃಖ ಮತ್ತು ಸಮಸ್ಯೆಗಳೆಲ್ಲವನ್ನು ಸಮನಾಗಿ ಸ್ವೀಕರಿಸುತ್ತಾ, ಪ್ರತಿ ಕ್ಷಣವು ಸುಖ-ಶಾಂತಿ-ನೆಮ್ಮದಿ ಮತ್ತು ಸಮಾಧಾನದೊಂದಿಗೆ ನಮ್ಮ ಬದುಕನ್ನು ಸಾಗಿಸಬೇಕು. ಈ ದೇವಸ್ಥಾನವು ಜಾತ್ರಾ ಮಹೋತ್ಸವವನ್ನು ವಿಶೇಷವಾಗಿ ಆಚರಿಸುತ್ತಾ, ನಗರದ ಮಾದರಿ ಬಡಾವಣೆಯಾಗಿದೆ ಎಂದರು.
ಸಮಾರಂಭದಲ್ಲಿ ದತ್ತಾ ಗೋಲಂಡೆ, ಕಸ್ತೂರಿ ಸಾವಳಗಿ, ಶಕುಂತಲಾ ಅಂಕಲಗಿ, ಶಾಂತಾ ಕಪಾಳಿ, ಕಲ್ಪನಾ ರಜಪೂತ, ಸಿದ್ದಮ್ಮ ಪಾಟೀಲ, ಕಮಲಾ ತೆನಿಹಳ್ಳಿ ಇನ್ನಿತರು ವೇದಿಕೆಯ ಮೇಲಿದ್ದರು.
ನ್ಯಾಯವಾದಿ ರಾಜು ಶಿವಗೊಂಡ, ಶ್ರೀಶೈಲ ಮಾಳಿ, ಗೊಲ್ಲಾಳ ಎಚ್ಚಿ, ಎಸ್.ಬಿ.ಬಶೆಟ್ಟಿ, ಪ್ರಕಾಸ ನಾಗನೂರ, ಪ್ರೊ. ಎಂ.ಎಸ್.ಖೊದ್ನಾಪೂರ, ಎ.ಬಿ.ಬಿರಾದಾರ, ಮಹಾದೇವ ಕಪಾಳಿ, ಮಹಾದೇವ ಪಾಟೀಲ, ಚೇತನ ದೇವನಾಯಕ, ಎಸ್.ಎಂ.ಬಂಗಾರಿ, ಪ್ರೊ. ಮಾರುತಿ ಜೋಶಿ, ರಾಘವೇಂದ್ರ ಪಾಟೀಲ, ಸ್ವಪ್ನಾ ಶಿವಗೊಂಡ, ಸರೋಜಾ ಬಾಗಲಕೋಟ, ಸ್ವಪ್ನಾ ಚಾಬೂಕಸವಾರ, ದೀಪಾ ಮಠಪತಿ, ಸುಜಾತಾ ನಾಗನೂರ ಇನ್ನಿತರು ಸಹ ಉಪಸ್ಥಿತರಿದ್ದರು.

