ಮಾಜಿ ಸಚಿವ ದಿ.ಎಮ್.ಸಿ.ಮನಗೂಳಿ ಪುಣ್ಯಸ್ಮರಣೆ ನಿಮಿತ್ತ “ಭಗೀರಥ ಕಪ್” ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿ | ಸೌತ ಸೆಂಟ್ರಲ್ ರೈಲ್ವೆ ಹುಬ್ಬಳ್ಳಿ ರನ್ನರ್
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ದಿ.ಎಂ.ಸಿ.ಮನಗೂಳಿ ಅವರು ಒಬ್ಬ ಕ್ರೀಡಾಪಟುವಾಗಿದ್ದರು. ಅವರ ಸದಾಶಯದಂತೆ ಅವರ ಹೆಸರಿನ ಮೇಲೆ ರಾಜ್ಯ ಮಟ್ಟದ ಭಗೀರಥ ಕಪ್ ವಾಲಿಬಾಲ್ ಪಂದ್ಯವನ್ನು ಆಯೋಜನೆ ಮಾಡಲಾಗಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಸಿಂದಗಿ ನಗರದ ಎಚ್.ಜಿ. ಕಾಲೇಜಿನ ಮೈದಾನದಲ್ಲಿ ಕರ್ನಾಟಕ ವಾಲಿಬಾಲ್ ಸಂಸ್ಥೆ, ಶ್ರೀ ಎಮ್.ಸಿ.ಮನಗೂಳಿ ಪ್ರತಿಷ್ಠಾನದ ಸಂಯುಕ್ತ ಆಶ್ರಯದಲ್ಲಿ ಮಾಜಿ ಸಚಿವ ದಿ.ಎಮ್.ಸಿ.ಮನಗೂಳಿ ಅವರ ೫ನೇ ಪುಣ್ಯಸ್ಮರಣೆ ಅಂಗವಾಗಿ ಹಮ್ಮಿಕೊಂಡ ಭಗೀರಥ ಕಪ್ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಯಲ್ಲಿ ಜಯಗಳಿಸಿದ ಕರ್ನಾಟಕ ರಾಜ್ಯ ಪೊಲೀಸ್ ತಂಡಕ್ಕೆ ೧ಲಕ್ಷ ನಗದು ಹಾಗೂ ಭಗೀರಥ ಕಪ್ ನ್ನು ಸಮಾರೋಪ ಸಮಾರಂಭದಲ್ಲಿ ವಿತರಿಸಿ ಮಾತನಾಡಿದ ಅವರು, ರಾಜಕೀಯ ಎಂದರೆ ಇದೊಂದು ಸಾಮಾಜಿಕ ಸೇವೆ. ಜನ ನಮಗೆ ನೀಡಿದ ಅಧಿಕಾರವನ್ನು ಅವರ ಸೇವೆಗಾಗಿಯೇ ಮುಡಿಪಾಗಿಡಬೇಕು. ಹಿರಿಯರು ಹಾಕಿಕೊಟ್ಟ ದಾರಿಯಲ್ಲಿ ನಡೆದು ಅವರ ತತ್ವ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಅವರ ಹಾದಿಯಲ್ಲಿ ಸಾಗಿದರೆ ಬದುಕು ಸುಂದರವಾಗುತ್ತದೆ. ಯುವಕರಲ್ಲಿ ಕ್ರೀಡಾ ಮನೋಭಾವ ಬೆಳೆಸುವ ದೃಷ್ಟಿಯಿಂದ ಇಂತಹ ಕ್ರೀಡೆಗಳನ್ನು ಆಯೋಜನೆ ಮಾಡಲಾಗಿದೆ. ಇಂದಿನ ಯುವಕರು ಕೇವಲ ಕ್ರೀಡೆ ನೋಡಿ ಹೋಗದೆ ಅದನ್ನು ಅನುಕರಣೆ ಮಾಡಿ ನಿಮ್ಮ ಜೀವನದಲ್ಲಿ ಅಳವಡಿಸಿಕೊಂಡು ನೀವು ರಾಜ್ಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿ ತಾಲೂಕಿಗೆ ಕೀರ್ತಿ ತರುವಂತವರಾಗಬೇಕು. ಅಂದಾಗ ಕ್ರೀಡೆ ಆಯೋಜನೆ ಮಾಡಿದ್ದಕ್ಕೂ ಸಾರ್ಥಕವಾಗುತ್ತದೆ. ಎರಡು ದಿನಗಳ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಗೆ ಸಹಕರಿಸಿ ಶ್ರಮಿಸಿದ ತಾಲೂಕಿನ ಜನತೆಗೆ, ದೈಹಿಕ ಉಪನ್ಯಾಸಕರಿಗೆ ಹಾಗೂ ಎಲ್ಲ ಕ್ರೀಡಾಸಕ್ತರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದರು.
ಕಾಲೇಜಿನ ಮೈದಾನದಲ್ಲಿ ಆಯೋಜಿಸಿದ್ದ ಭಗೀರಥ ಕಪ್ ವಾಲಿಬಾಲ್ ಟೂರ್ನಿಯ ಫೈನಲ್ ರೋಚಕ ಪಂದ್ಯದಲ್ಲಿ ಉತ್ತಮವಾಗಿ ಆಡಿದ ಕರ್ನಾಟಕ ಪೊಲೀಸ್ ತಂಡ ಸೌತ ಸೆಂಟ್ರಲ್ ರೈಲ್ವೆ ಹುಬ್ಬಳ್ಳಿ ತಂಡವನ್ನು (೩–೧ ಸೆಟ್‌ನಿಂದ) ಮಣಿಸಿ ಅರ್ಹ ಗೆಲುವು ದಾಖಲಿಸಿತು. ಎ.ಎಸ್.ಸಿ. ಬೆಂಗಳೂರು ತಂಡ ಮೂರನೇ ಸ್ಥಾನ ಪಡೆದರೆ, ಸ್ಟೋರ್ಟ್ಸ್ ಹಾಸ್ಟೆಲ್ ತಂಡ ನಾಲ್ಕನೇ ಸ್ಥಾನ ಗಳಿಸಿತು.
ವಿಜೇತ ತಂಡಕ್ಕೆ ಆಕರ್ಷಕ ಟ್ರೋಫಿ ಹಾಗೂ ರೂ. ೧ಲಕ್ಷ ನಗದು ಬಹುಮಾನ ನೀಡಲಾಯಿತು. ರನ್ನರ್ಸ್ ತಂಡಕ್ಕೆ ಆಕರ್ಷಕ ಟ್ರೋಫಿಯೊಂದಿಗೆ ರೂ.೭೫ ಸಾವಿರ, ೩ನೇ ಸ್ಥಾನ ಪಡೆದುಕೊಂಡ ತಂಡಕ್ಕೆ ರೂ. ೫೦ ಸಾವಿರ, ೪ನೇ ಸ್ಥಾನ ಪಡೆದ ತಂಡಕ್ಕೆ ರೂ.೨೫ ಸಾವಿರ ನಗದು ಬಹುಮಾನ ನೀಡಲಾಯಿತು.
ಇದೇ ಸಂದರ್ಭದಲ್ಲಿ, ಸಾರಂಗಮಠದ ಪೀಠಾಧಿಪತಿ ಶ್ರೀ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು, ಕರ್ನಾಟಕ ವಾಲಿಬಾಲ್ ಸಂಸ್ಥೆಯ ಪ್ರ.ಕಾರ್ಯದರ್ಶಿ ಲಕ್ಷ್ಮಿನಾರಾಯಣ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ, ಸಿಂದಗಿ ಬ್ಲಾಕ್ ತಾಲೂಕಾಧ್ಯಕ್ಷ ಸುರೇಶ ಪೂಜಾರಿ, ಆಲಮೇಲ ಬ್ಲಾಕ್ ಅಧ್ಯಕ್ಷ ಸಾದಿಕ್ ಸುಂಬಡ, ಆಲಮೇಲ ಎಪಿಎಂಸಿ ಅಧ್ಯಕ್ಷ ಬಸು ಬಾಗೇವಾಡಿ, ಗ್ಯಾರಂಟಿ ಯೋಜನೆ ಅಧ್ಯಕ್ಷ ಶ್ರೀಶೈಲ ಕವಳಗಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ನರಸಿಂಹ ತಿವಾರಿ, ಮಾಜಿ ಪುರಸಭೆ ಉಪಾಧ್ಯಕ್ಷ ಸಂದೀಪ ಚೌರ, ಬಾಲಾಜಿ ಪ್ರಭು, ರವಿಕುಮಾರ, ನಾಗೇಶ್ವರಾವ್, ಛಲಪತಿ, ಮಂಜುನಾಥ, ಡಾ.ರವಿ ಗೋಲಾ, ಡಾ.ಅರವಿಂದ ಮನಗೂಳಿ, ಸೋಮನಗೌಡ ಬಿರಾದಾರ, ಅಶೋಕ ಕೋಳಾರಿ, ವಾಯ್.ಸಿ.ಮಯೂರ, ರಾಜಶೇಖರ ಕೂಚಬಾಳ ಸೇರಿದಂತೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಕ್ರೀಡಾಭಿಮಾನಿಗಳು, ಮನಗೂಳಿ ಅವರ ಅಭಿಮಾನಿಗಳು ಹಾಗೂ ತಾಲೂಕಿನ ದೈಹಿಕ ಶಿಕ್ಷಕರು ಇದ್ದರು.

