ಲೇಖನ
– ಜಯಶ್ರೀ. ಜೆ. ಅಬ್ಬಿಗೇರಿ
ಇಂಗ್ಲೀಷ್ ಉಪನ್ಯಾಸಕರು
ಬೆಳಗಾವಿ
ಮೊ: ೯೪೪೯೨೩೪೧೪೨
ಉದಯರಶ್ಮಿ ದಿನಪತ್ರಿಕೆ
ಪ್ರಿಯ ಪ್ರಿಯತಮೆ ಪ್ರಿಯಾ,
ಕಿಟಕಿಯ ಕಿಂಡಿಯಲ್ಲಿ ಒಳಗೆ ಹಣಕಿಕ್ಕಿ ಕದ್ದು ಕದ್ದು ನೋಡಿದೆ. ನೀನು ಉಟ್ಟುಕೊಳ್ಳುತ್ತಿದ್ದ ಬಂಗಾರದಂಚಿನ ಸೀರೆಯ ತುದಿಯನ್ನು ಒಂದು ಕೈಯಲ್ಲಿ ಹಿಡಿದಿದ್ದೆ. ಮತ್ತೊಂದು ಕೈಯನ್ನು ಅಂದವಾದ ನಾಭಿಯ ಹತ್ತಿರ ಇಟ್ಟು ಭಾವ ಪ್ರಪಂಚದಲ್ಲಿ ಮುಳುಗಿದ್ದೆ. ನನಗೆನಿಸಿದಂತೆ ನೀನು ನನ್ನನ್ನೇ ನೆನೆಯುತ್ತ ಕನ್ನಡಿಯ ಮುಂದೆ ನಿನ್ನನ್ನು ನೀನು ಮುದ್ದು ಮಾಡಿಕೊಳ್ಳುತ್ತಿದಿಯಾ ಎಂದು ಭಾಸವಾಯಿತು. ತುಟಿಗೆ ಹಚ್ಚಿದ ಬಣ್ಣ ನನ್ನನ್ನೇ ಕೈ ಬೀಸಿ ಕರೆದಂತೆನಿಸಿತು. ತಡ ಮಾಡದೇ ಬಂದು ನಿನ್ನ ಸಪೂರ ಗಲ್ಲದ ಮೇಲೆ ಕಲೆ ಮಾಡಿ ಬಿಡಬೇಕೆನಿಸಿತು. ಅದು ನೆನೆದು, ಕ್ಷಣಾರ್ಧದಲ್ಲಿ ಮೈ ಬಿಸಿಯಾಯಿತು. ‘ಸೀರೆಲಿ ಹುಡುಗಿಯರ ನೋಡಲೇಬಾರದು ನಿಲ್ಲಲ್ಲ ಟೆಂಪ್ರೆಚರ್.’ ಹಾಡು ತಲೆಯಲ್ಲಿ ಸುಳಿದು ಗಿರಗಟ್ಲೆ ಆಡ ತೊಡಗಿತು. ಕಪ್ಪು ಬಿಳುಪಿನ ನನ್ನ ಜೀವನ ಕಲರ್ ಫುಲ್ ಆಗೋ ಮುನ್ಸೂಚನೆ ಕಾಣತೊಡಗಿತು. ನನ್ನ ನಾನೇ ಮರೆತು ಕನಸಲ್ಲೂ ನಿನ್ನ ಮೇಲೆ ಗೀಚಿದ ಅದೆಷ್ಟೋ ಕವನಗಳು ಎದೆಯ ಗೂಡಿನಲ್ಲಿ ಬೆಚ್ಚಗೆ ಕುಳಿತಿವೆ. ಆ ಎಲ್ಲ ಕವಿತೆಗಳ ಸಾರದಂತೆ ಸಲುಗೆಯನ್ನು ಬಳಸಿ ಪ್ರೀತಿಯಲ್ಲಿ ಅಡ್ಡಾದಿಡ್ಡಿಯಾಗಿ ಹೋಗಿ ಬಿಡಬೇಕೆನಿಸಿತು. ಪ್ರೀತಿಯ ದಿಕ್ಕಿನಲ್ಲಿ ಚಲಿಸುತ್ತಿದ್ದರಿಂದ ಈಗ ನನ್ನ ಯಾನ ಸುಲಭವಾಗಿದೆ. ಕಾದು ಕಾದು ಸುರಿಯುವ ಅನುರಾಗದ ಮಳೆಯಲ್ಲಿ ಮರಳಿ ಬರದಂತೆ ನಿನ್ನ ಗುಂಗಲ್ಲಿ ತೇಲಿ ಹೋದರೆ ಮರಳಿ ಮರಳುವಿಕೆ ತುಂಬಾ ಕಷ್ಟವಾಗಿ ಬಿಡುತ್ತದೆ. ಪ್ರೀತಿಯ ಜ್ವರದ ನಂಟು ಇನ್ನಷ್ಟು ಏರಿಸಿ ನಿನ್ನ ಕಣ್ರೆಪ್ಪೆಗೆ ಸಿಹಿಮುತ್ತು ಒತ್ತಬೇಕು. ಎಂಬ ಆಸೆ ಪುಟಿಯ ತೊಡಗಿತು. ನಿನ್ನಲ್ಲೇ ಕಳೆದುಕೊಳ್ಳುವ ಕನಸಲ್ಲಿ ತಲ್ಲೀನನಾದ ನನ್ನ ಆಪ್ತ ಗೆಳೆಯ ಎಲ್ಲಿಂದಲೋ ಬಂದು ಎಚ್ಚರಿಸಿದ.
ಸಂತೆ ಬೀದಿಯಲ್ಲೂ ನಿನ್ನದೇ ನೆನಪು. ಮರು ಜನ್ಮ ಕೊಟ್ಟ ನಿನ್ನ ಮರೆಯುವದಾದರೂ ಎಂತು? ಮುಟ್ಟಿಸಿಕೊಳ್ಳಲಾರದ ಜಾತಿಯಲ್ಲಿ ಹುಟ್ಟಿದ್ದಿಯಾ. ಹಿಟ್ಟಿಲ್ಲದ ಹೊಟ್ಟೆಗೆ ನೀನು ಹೊಂದಿಕೊಳ್ಳಲೇಬೇಕು. ನೆತ್ತಿಗೆ ವಿದ್ಯೆಯಂತೂ ದೂರದ ಮಾತು. ಅದರಲ್ಲೂ ಉನ್ನತ ಶಿಕ್ಷಣ ಕೈಗೆಟುಕದ ಆಕಾಶ ಮಲ್ಲಿಗೆಯೇ ಸರಿ ಎಂದು ನನ್ನ ಜಾತಿಯವರೇ ನನ್ನ ಕಲಿಕೆಯ ಆಸೆಗೆ ತಣ್ಣೀರೆರಚಿದಿದ್ದರು. ಇನ್ನೇನು ನನ್ನ ಶಿಕ್ಷಣದ ಹೊಂಗನಸು ಬಿದ್ದು ಬಿಡುತ್ತದೆ ಎಂದು ಕಣ್ಣೀರುಡುತ್ತ ಊರ ಹೊರಗಿನ ಗುಡ್ಡದ ಹನುಮಂತನ ಗುಡಿಯಿಂದ ದೂರದಲ್ಲಿ ಕೂತಿದ್ದ ನನ್ನ ಮೇಲೆ ನಿನ್ನ ಕಣ್ಣು ಬಿತ್ತು. ನಿನ್ನಪ್ಪನೊಂದಿಗೆ ಶನಿ ದರುಶನಕೆ ಬಂದಿದ್ದ ನೀನು ನನ್ನ ಜೀವನದ ಹೊಸ ಬಾಗಿಲು ತೆರೆದು ಬಿಟ್ಟೆ. ಕಣ್ಣೀರಿಗೆ ಕಾರಣ ಕೇಳಿದೆ. ನನ್ನೆಲ್ಲ ನೋವಿಗೆ ಕಿವಿಯಾದ ನಿನ್ನಪ್ಪ ಸಾಂತ್ವನ ಹೇಳುವ ರೂಪದಲ್ಲಿ ಬೆನ್ನು ತಟ್ಟಿ ತಲೆ ನೇವರಿಸಿದರು. ಜಾತಿ ಮತಗಳನ್ನು ಮೀರಿದ ಮನುಜ ಮತವೊಂದೇ. ಅಲ್ಲವೇ ಎಂದು ಕಣ್ಣರಳಿಸಿ ಅಪ್ಪನನ್ನು ಪ್ರಶ್ನಿಸಿದ್ದೆ. ಅದಕ್ಕೆ ನಿನ್ನಪ್ಪ ಹ್ಞೂಂಗುಟ್ಟಿದರು. ಕಲಿಯುವ ಉತ್ಸಾಹ ಉಕ್ಕೇರುತ್ತಿದ್ದರೆ ಅದನ್ನು ಯಾವ ಅಡತಡೆಯೂ ಅಡ್ಡ ಗಟ್ಟಿ ನಿಲ್ಲಿಸಲಾಗಲ್ಲ. ನಿನ್ನ ಶಿಕ್ಷಣದ ಖರ್ಚಿಗೆ ನಾನಿದ್ದೇನೆ. ಚಿಂತಿಸದಿರು. ಓದುವುದೊಂದೇ ನಿನ್ನ ಪರಮ ಗುರಿಯಾಗಿಸಿಕೋ ಎಂದು ತೋಯುತ್ತಿದ್ದ ಕೆನ್ನೆಯನು ಒರೆಸಿದ್ದರು. ಹೀಗೆ ದೊಡ್ಡವರೆಂದೂ ಪ್ರೋತ್ಸಾಹಿಸಿದ್ದನ್ನು ಕಂಡಿರದ ಜೀವ ನಡುಗಿತು. ಅರೆ ಕ್ಷಣ ಭಯ ನಾಚಿಕೆಗಳಿಂದ ಭುವಿ ಒಡಲಲ್ಲಿ ಇಳಿದು ಹೋದೆಂತೆನಿಸಿತು. ಎಲ್ಲ ಇಲ್ಲಗಳ ಮಧ್ಯೆ ಮರುಕ್ಷಣವೇ ಹೃದಯದಲ್ಲಿ ಶಿಕ್ಷಣದ ಕನಸೊಂದು ಕಣ್ಣಿಟ್ಟಿತು. ಹಿಮಾಲಯದಷ್ಟು ದೊಡ್ಡ ಸ್ಪೂರ್ತಿ ಬಲ ಸಿಕ್ಕಂತೆನಿಸಿತು. ವಿಶ್ವ ಮಾನವನ ಮೂರ್ತ ರೂಪದಂತೆನಿಸಿದ ನಿನ್ನೆದೆಯಲ್ಲಿ ಸಮತಾ ದೇವಿ ಕಂಡಳು.
ಅಂದಿನಿಂದ ಗಂಭೀರ ಅಧ್ಯಯನದಲ್ಲಿ ನಿರತನಾದೆ. ನಿಮ್ಮ ಮನೆಯ ಅನ್ನ ತಿಂದು ಬೆಳೆಯ ತೊಡಗಿದೆ. ಪೋಲಿಸ್ ಅಧಿಕಾರಿ ಆಗಬೇಕೆಂಬುದು ಖರ್ಚಿನ ಬಾಬ್ತು ಎಂದು ಮನದಲ್ಲೇ ಅದುಮಿಟ್ಟಿದ್ದನ್ನು ತಿಳಿದ ನೀನು, ದೈಹಿಕ ದೃಡತೆಗೆ ಯೋಗ ಕ್ರೀಡೆ, ಬೌದ್ಧಿಕ ಬೆಳವಣಿಗೆಗೆ ಧ್ಯಾನದ ಸಲಹೆ ನೀಡಿದೆ. ಇತಿ ಮಿತಿ ಅತಿಗಳೆಲ್ಲವನ್ನೂ ಮೀರಿದ ನಿನ್ನಪ್ಪನ ಪ್ರೋತ್ಸಾಹಕ್ಕೆ, ಕಠಿಣ ವ್ರತಾಚರಣೆಗೆ ಬಿಟ್ಟ ಬಾಣ ಗುರಿ ಮುಟ್ಟಿತು.ಏನೂ ಸಾಧಿಸಲಾಗದೆಂಬ ದುರ್ಬಲ ವರ್ಗದ ದುರ್ಬಲ ಮನದ ಹುಡುಗನನ್ನು ಸಬಲಳನನ್ನಾಗಿಸಿದ ಕೀರ್ತಿ ನಿನಗೆ ಸಲ್ಲುತ್ತದೆ ಹುಡುಗಿ.

ಅದೊಂದು ರಂಗೇರಿದ ಸಂಜೆಯಲ್ಲಿ ,ಕಿಕ್ಕಿರಿದ ಜನ ಸ್ತೋಮದಲ್ಲಿ, ಬೋಟಿಂಗ್ ನೆಪದಲ್ಲಿ ಭೇಟಿಯಾಗಿದ್ದೆವು. ಜೊತೆ ನೀನಿದ್ದರೆ ಎಲ್ಲ ಅಸಾಧ್ಯವೂ ಸಾಧ್ಯವೇ ಎಂದು ಪಿಸುಮಾತಿನಲ್ಲಿ ನಾ ಹೇಳಿದ್ದನ್ನು ಕೇಳಿಸಿಕೊಂಡು ಕಣ್ಮಿಟುಕಿಸಿದೆ. ತಟ್ಟನೇ ಎಚ್ಚರವಾದವನಂತೆ ನಿನ್ನನ್ನೇ ದಿಟ್ಟಿಸಿದೆ. ಈ ಜೀವಕ್ಕಿಂದು ನಿನ್ನಾಚೆಗೆ ಏನೂ ಗೊತ್ತಿಲ್ಲವೆನಿಸಿತು. ಮೆಲ್ಲನೇ ನಿನ್ನ ಕೈ ಹಿಡಿದೆ. ನೀನು ನಾಚಿ ದೂರ ಹೋದೆ. ‘ಕೈ ಬಿಟ್ಟು ನಿಲ್ಲ ಬೇಡಿ ಬಿದ್ದು ಬಿಡ್ತಿರಿ.’ ಎಂಬ ಹಿರಿಯರ ದ್ವನಿ ನನಗೆ ವರವಾಯಿತು. ಬಿಡಿಸಿಕೊಂಡಿದ್ದ ನಿನ್ನ ಬೆರಳಿನ ಸಂದುಗಳಿಗೆ ನನ್ನ ಬೆರಳುಗಳನ್ನು ಸೇರಿಸಿ ಗಟ್ಟಿಯಾಗಿ ಅದುಮಿದೆ. ಜನರ ನೂಕು ನುಗ್ಗಲಿಗೆ ನಿನ್ನ ಕತ್ತು ನನ್ನ ಅಧರಗಳಿಗೆ ಸಮೀಪಿಸಿತು. ಸಿಕ್ಕ ಅವಕಾಶ ತಪ್ಪಿಸಿಕೊಳ್ಳದೇ ನೀಳವಾದ ಕತ್ತಿಗೆ ಹಿತವಾಗಿ ಸಿಹಿ ಸಿಹಿಯಾದ ಬಿಸಿ ಹೂ ಮುತ್ತನಿತ್ತೆ. ನಿನಗೆ ಬೇಕಾದ್ದು ಈ ಎದೆಯಂಗಡಿಯಲ್ಲಿ ಸಿಗುತ್ತೆ ಎಂದು ನಿನ್ನೆದೆಯ ಕಡೆ ತೋರಿ, ನನ್ನ ಛೇಡಿಸಿ ನಸು ನಕ್ಕೆ. ನಿನ್ನ ಅಗಲವಾದ ಬೆನ್ನು ಸವರಿ ನಾನೂ ನಕ್ಕೆ. ಬೋಟ್ ತನ್ನದೇ ವೇಗದಲ್ಲಿ ನಮ್ಮನ್ನು ಮುಂದಕ್ಕೆ ಒಯ್ಯುತ್ತಿತ್ತು. ಜೀವನವಿಡಿ ನನ್ನ ತೋಳಲ್ಲಿ ನಿನ್ನ ಬಂಧಿಸಿ ಕೆಂದುಟಿಗಳ ಸಂಗದಲ್ಲಿ ಜೇನು ಸವಿಯುತ ಹೀಗೆಯೇ ಇದ್ದು ಬಿಟ್ಟರೆ ಎಷ್ಟು ಚೆನ್ನ ಎಂದು ಮನಸ್ಸು ಬಯಸುತ್ತಿತ್ತು. ಅಷ್ಟರಲ್ಲಿ ದಂಡೆ ತಲುಪಿತ್ತು.
ನನ್ನುಸಿರ ಉತ್ಸವ ನೀನೇ. ಈ ಜೀವದ ಸಂಭ್ರಮ ನೀನೇ. ಎಂದು ಊರಿನವರಿಗೆಲ್ಲ ಗೊತ್ತಾಗಿದೆ. ನಮ್ಮಿಬ್ಬರ ಕಳ್ಳಾಟ ಗೊತ್ತಾದ ನಿನ್ನಪ್ಪ ಮೊನ್ನೆ ಸ್ಟೇಷನ್‌ಗೆ ಬಂದು ನಮ್ಮ ಕಣ್ಣು ಮುಚ್ಚಾಲೆಯಾಟಕೆ ತೆರೆ ಎಳೆಯಲು ಹೇಳಿದರು.ಕೈ ತುಂಬ ಘಲ್ ಘಲ್ ಸದ್ದು ಮಾಡುವ ಹಸಿರು ಗಾಜಿನ ಬಳಿಯುಟ್ಟು . ಮೊಗ್ಗಿನ ಜಡೆಗೆ ಮಲ್ಲಿಗೆಯ ಮಾಲೆ ಇಳೆ ಬಿಟ್ಟು ಅಚ್ಚು ಕೆಂಪಿನ ಸಣ್ಣಂಚಿನ ರೇಷ್ಮೆಯುಟ್ಟು ಕಾಲಿಗೆ ಹೊಸ ಒಲವಿನ ನಾದ ಹೊರಡಿಸುವ ಗೆಜ್ಜೆ ಕಟ್ಟಿಕೊಂಡು ಹನುಮಂತನ ಗುಡಿಗೆ ಬಂದು ಬಿಡು ನಿನಗಾಗಿ ಕೈಯಲ್ಲಿ ಅರಿಷಿಣದ ಕೊಂಬು ಹಿಡಿದು ಕಾಯುತಿರುವೆ ಕೂಡಿ ಬಾಳೋಣ ಮನುಜ ಮತದಲಿ
ಇಂತಿ ನಿನ್ನ ಪ್ರಿಯತಮ
ಪ್ರೀತಮ್


