ಉದಯರಶ್ಮಿ ದಿನಪತ್ರಿಕೆ
ಇಂಡಿ: ಅಮೋಘಸಿದ್ದನ ಚರಿತ್ರೆ, ಸಾಂಸ್ಕೃತಿಕ ವೈಶಿಷ್ಟ್ಯತೆ, ಅವರ ಆಚಾರ-ವಿಚಾರಗಳು, ಸ್ತ್ರೀ ಅಸ್ತಿತ್ವ, ಆಚರಣೆಗಳ ಕುರಿತಾಗಿನ ವಿವಿಧ ಮಜಲುಗಳನ್ನು ಈ ಕೃತಿಯಲ್ಲಿ ಬಂಡಗರ ಅವರು ಹಾಸುಹೊಕ್ಕಾಗಿಸಿದ್ದಾರೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿದ್ವಾಂಸ ಡಾ.ಎಫ್ ಟಿ ಹಳ್ಳಿಕೇರಿ ಹೇಳಿದರು.
ಶನಿವಾರದಂದು ನಗರದ ಸರಕಾರಿ ನೌಕರರ ಭವನದಲ್ಲಿ ನೆಲೆ ಪ್ರಕಾಶನ ಸಂಸ್ಥೆ ಸಿಂದಗಿ ಹಾಗೂ ಭೀಮಾoತರಂಗ ಸಾಹಿತ್ಯಕ-ಸಾಂಸ್ಕೃತಿಕ ಜಗಲಿ ಕೇಂದ್ರ ಇಂಡಿ ಅವರ ಸಹಯೋಗದಲ್ಲಿ ಚಿದಂಬರ ಬಂಡಗರ ರಚಿಸಿದ ‘ಡಾ.ಚನ್ನಪ್ಪ ಕಟ್ಟಿ:ಹಾಲುಮತದ ಅಧ್ಯಯನಗಳು’ ಕೃತಿ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಹಾಲುಮತ ಇತಿಹಾಸವು ಮನುಕುಲದ ಇತಿಹಾಸವಾಗಿದೆ. ಅದರ ಕುರಿತು ಇನ್ನು ಹೆಚ್ಚು ಸಂಶೋಧನೆಗಳಾಗಬೇಕಾಗಿದೆ. ಹಾಲುಮತ ಸಂಸ್ಕೃತಿ ವಿದೇಶಿಯರು ಮೆಚ್ಚಿ ಅಧ್ಯಯನ ಮಾಡಿ ಹಲವಾರು ಮಹತ್ವಪೂರ್ಣ ಕೃತಿಗಳನ್ನು ರಚಿಸಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಾನಪದ ವಿದ್ವಾಂಸ ಡಾ ಎಂ ಎಂ ಪಡಶೆಟ್ಟಿ ಮಾತನಾಡಿ, 21 ನೇ ಶತಮಾನದ ಈ ಸಂದರ್ಭದಲ್ಲಿ ಪರಂಪರೆ ಒಂದನ್ನು ಮರು ಕಟ್ಟುವಾಗ ಎಲ್ಲ ಜಾಗೃತಿಯನ್ನು ಡಾ.ಕಟ್ಟಿ ಅವರು ವಹಿಸಿದ್ದು ಎದ್ದು ಕಾಣುತ್ತದೆ ಎಂದು ಹೇಳಿದರು.
ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಡಾ.ಚನ್ನಪ್ಪ ಕಟ್ಟಿ ಮಾತನಾಡಿ, ವೈಚಾರಿಕ ದೃಷ್ಟಿಕೋನ,
ಸತ್ಯದ ಹುಡುಕಾಟ, ವಾಸ್ತವಿಕ ನೆಲೆಯಲ್ಲಿ ವಿಶ್ಲೇಷಣೆ ಬಂಡಗರ ಅವರ ಈ ಕೃತಿಯಲ್ಲಿ ಎದ್ದು ಕಾಣುತ್ತದೆ ಎಂದು ಹೇಳಿದರು.
ಬಾಗಲಕೋಟ ಬಸವೇಶ್ವರ ಕಲಾ ಮಹಾವಿದ್ಯಾಲಯದ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ ವಿರುಪಾಕ್ಷಿ ಎನ್ ಬಿ ಕೃತಿ ಪರಿಚಯಿಸಿದರು.
ಕೃತಿ ಲೇಖಕ ಚಿದಂಬರ ಬಂಡಗರ ಪ್ರಾಸ್ತಾವಿಕವಾಗಿ ಮಾತನಾಡಿದರು.
ದೇವರ ನಾವದಗಿಯ ಸೋಮಲಿಂಗ ಒಡೆಯರ ಸಾನಿಧ್ಯ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಖ್ಯಾತ ಸಂಶೋಧಕ ಡಾ ಡಿ ಎನ್ ಅಕ್ಕಿ, ನಿಂಗಣ್ಣ ಕಲಬುರ್ಗಿ, ಎಂ ಎಸ್ ಹಯ್ಯಾಳ್ಕರ್ ವೇದಿಕೆಯಲ್ಲಿದ್ದರು.
ಎಚ್ ಎಸ್ ಏಳೆಗಾಂವ ಪ್ರಾರ್ಥಿಸಿದರು. ವೈ ಜಿ ಬಿರಾದಾರ ಸ್ವಾಗತಿಸಿದರು. ಸಂತೋಷ ಬಂಡೆ ನಿರೂಪಿಸಿದರು. ಸಂಗನಗೌಡ ಹಚಡದ ಅತಿಥಿಗಳ ಪರಿಚಯ ಮಾಡಿ, ವಂದಿಸಿದರು.
ಬಿ ಡಿ ಪಾಟೀಲ, ಎಸ್ ಆರ್ ಪಾಟೀಲ, ನಿಂಗಣ್ಣ ಬಿರಾದಾರ, ವೈ ಟಿ ಪಾಟೀಲ, ಎಸ್ ವಿ ಹರಳಯ್ಯ, ಪಿ.ಜಿ.ಕಲ್ಮನಿ, ಗೀತಯೋಗಿ, ಡಿ.ಬಿ ಬಿರಾದಾರ, ಆರ್ ಎಸ್ ಪಾಟೀಲ, ಎಸ್ ಎಸ್ ಈರಣಕೇರಿ, ಮನು ಪತ್ತಾರ, ಆರ್ ವ್ಹಿ ಪಾಟೀಲ, ಡಾ ರಾಜಶ್ರೀ ಮಾರನೂರ, ರೇಣುಕಾ ನಾಗಠಾಣ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

