ಮುಖ್ಯಮಂತ್ರಿ ಎಸ್. ಸಿದ್ದರಾಮಯ್ಯ ಮತ್ತು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯಿತಿ ಅಭಿವೃದ್ಧಿ ಹಾಗೂ ಐ.ಟಿ ಮತ್ತು ಬಿ.ಟಿ ಸಚಿವ ಪ್ರಿಯಾಂಕ ಖರ್ಗೆ ಅವರಿಗೆ ವಿಧಾನ ಪರಿಷತ್ ಶಾಸಕ ಸುನೀಲಗೌಡ ಪಾಟೀಲ ಮನವಿ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಅವಧಿ ಮುಗಿಯುತ್ತಿರುವ ಗ್ರಾಮ ಪಂಚಾಯಿತಿಗಳಿಗೆ ಈಗಿರುವ ಆಡಳಿತ ಸಮಿತಿಯನ್ನು ಮರು ನೇಮಕ ಮಾಡಲು ಎಂದು ವಿಧಾನ ಪರಿಷತ್ ಶಾಸಕ ಸುನೀಲಗೌಡ ಪಾಟೀಲ ಅವರು ಮುಖ್ಯಮಂತ್ರಿ ಎಸ್. ಸಿದ್ದರಾಮಯ್ಯ ಮತ್ತು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯಿತಿ ಅಭಿವೃದ್ಧಿ ಹಾಗೂ ಐ.ಟಿ ಮತ್ತು ಬಿ.ಟಿ ಸಚಿವ ಪ್ರಿಯಾಂಕ ಖರ್ಗೆ ಅವರಿಗೆ ಮನವಿ ಮಾಡಿದ್ದಾರೆ.
ಯಾವುದೇ ಪಂಚಾಯಿತಿ ಸದಸ್ಯರ ಅವಧಿ ಮೊದಲ ಸಭೆ ಗೊತ್ತುಪಡಿಸಿದ ದಿನಾಂಕದಿಂದ ಐದು ವರ್ಷಗಳ ಅಸ್ತಿತ್ವದಲ್ಲಿದ್ದು, ಐದು ವರ್ಷಗಳ ಪೂರ್ಣಗೊಂಡ ನಂತರ ಅವಧಿ ಮುಕ್ತಾಯವಾಗುತ್ತದೆ. 2020 ರಿಂದ 2025ರ ವರೆಗೆ ರಚಿತವಾದ ರಾಜ್ಯದ ಗ್ರಾ. ಪಂ ಅವಧಿಯುವ 2026ರ ಜನೇವರಿಯಿಂದ ಮಾರ್ಚವರೆಗೆ ನಾನಾ ದಿನಾಂಕಗಳಂದು ಮುಕ್ತಾಯವಾಗಲಿದೆ. ಆದ್ದರಿಂದ ರಾಜ್ಯ ಸರಕಾರ ಅವಧಿ ಮುಗಿಯುವ ಗ್ರಾಮ ಪಂಚಾಯಿತಿಗಳಿಗೆ ಆಡಳಿತಾಧಿಕಾರಿಗಳನ್ನು ನೇಮಿಸುವಂತೆ ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಿದೆ.
ಈ ಹಿನ್ನೆಲೆಯಲ್ಲಿ ಆಡಳಿತಾಧಿಕಾರಿಗಳ ನೇಮಿಸುವ ಆದೇಶವನ್ನು ಹಿಂಪಡೆದು ಕೂಡಲೇ ಈಗಿರುವ ಆಡಳಿತ ಸಮಿತಿಯನ್ನು ಮುಂದಿನ ಆರು ತಿಂಗಳವರೆಗೆ ಮುಂದುವರೆಸಬೇಕು ಎಂದು ಸುನೀಲಗೌಡ ಪಾಟೀಲ ಒತ್ತಾಯಿಸಿದ್ದು, 90ರ ದಶಕದಲ್ಲಿ ಇದೇ ರೀತಿ ಅಂದಿನ ಸಮಿತಿಯನ್ನು ಮುಂದುವರೆಸಲಾಗಿತ್ತು ಎಂದು ಮುಖ್ಯಮಂತ್ರಿ ಮತ್ತು ಸಚಿವರಿಗೆ ನೀಡಿರುವ ಮನವಿ ಪತ್ರದಲ್ಲಿ ಗಮನ ಸೆಳೆದಿದ್ದಾರೆ.

