ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ತಾಯಂದಿರು ಮಕ್ಕಳಲ್ಲಿ ಧಾರ್ಮಿಕ-ಸಾಮಾಜಿಕ, ನಮ್ಮ ಪರಂಪರೆ-ಸಂಪ್ರದಾಯ, ಆಚಾರ-ವಿಚಾರ, ಸಂಸ್ಕೃತಿ-ಸಂಸ್ಕಾರಗಳನ್ನು ಒಡಮೂಡಿಸುವ ಕಾರ್ಯ ಮಾಡಬೇಕು. ಅಂದಾಗ ಮಾತ್ರ ಮುಂದಿನ ಜನಾಂಗವು ನಮ್ಮ ಧಾರ್ಮಿಕ ಸಂಪ್ರದಾಯ-ವಿಧಿವಿಧಾನಗಳನ್ನು ಉಳಿಸಿ-ಬೆಳೆಸಲು ಸಾಧ್ಯ ಎಂದು ಮುಖ್ಯ ಅತಿಥಿ ಶ್ರೀಮತಿ ಮಾಯಾದೇವಿ ಚೌಧರಿ ಅವರು ಸಲಹೆ ನೀಡಿದರು.
ಅವರು ನಗರದ ಅಥಣಿ ರಸ್ತೆಯಲ್ಲಿರುವ ಅಲ್-ಅಮೀನ್ ಆಸ್ಪತ್ರೆ ಎದುರಿಗೆ ಇರುವ ಎನ್.ಜಿ.ಓ ಕಾಲನಿಯಲ್ಲಿ ಜೈ ಶ್ರೀ ಆಂಜನೇಯ ದೇವಸ್ಥಾನದ ೬ ನೇಯ ವರ್ಷದ ಜಾತ್ರಾ ಮಹೋತ್ಸವದಲ್ಲಿ ಗೋಮಾತೆ ಮತ್ತು ಬನ್ನಿ ಮಹಾಂಕಾಳಿ ಪೂಜೆ ಸಲ್ಲಿಸುವದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.
ಬದುಕು ಸಂಕೀರ್ಣಮಯವಾಗುತ್ತಿರುವ ಇಂದಿನ ಕಾಲದಲ್ಲಿ ಮನುಷ್ಯ ಏನೆಲ್ಲ ಗಳಿಸಿದರೂ ಮನಸ್ಸಿಗೆ ಶಾಂತಿ ಇಲ್ಲದಂತಾಗಿದೆ. ಹನುಮಂತ-ರಾಮನ ನಡುವಿನ ಗುರು-ಶಿಷ್ಯರ ಅವಿನಾವ ಸಂಬಂಧ ಮತ್ತು ದೈವಿಭಕ್ತಿಯೇ ನಮ್ಮೆಲ್ಲರಿಗೆ ಆದರ್ಶವಾಗಬೇಕು. ಇಡೀ ಜಗತ್ತಿನಲ್ಲಿಯೇ ಧಾರ್ಮಿಕ ಪರಂಪರೆ-ಆಚರಣೆ, ಸಂಪ್ರದಾಯ ಮತ್ತು ಸಂಸ್ಕೃತಿ-ಸಂಸ್ಕಾರಕ್ಕೆ ಹೆಸರುವಾಸಿಯಾದ ರಾಷ್ಟ್ರ ನಮ್ಮದು. ಹಲವು ಧರ್ಮ, ಸಂಪ್ರದಾಯ, ಆಚರಣೆ, ಭಾಷೆ, ಸಂಸ್ಕೃತಿ ಬೇರೆ ಬೇರೆಯಾದರೂ ಅಖಂಡತೆ ಮತ್ತು ವಿವಿಧತೆಯಲ್ಲಿ ಏಕತೆ ಎಂಬುದನ್ನು ತೋರಿಸಿಕೊಟ್ಟ ದೇಶ ನಮ್ಮದು. ನಾವೆಲ್ಲರೂ ಇಲ್ಲಿ ನಾವೆಲ್ಲರೂ ಒಂದು ಎಂಬ ಸದ್ಭಾವದಿಂದ ಬದುಕುತ್ತಿದ್ದೇವೆ. ಧಾರ್ಮಿಕ ಮತ್ತು ಪವಿತ್ರ ತಾಣಗಳಾದ ದೇವಸ್ಥಾನಗಳಲ್ಲಿ ಪೂಜಾ ಕೈಂಕರ್ಯ, ಧಾರ್ಮಿಕ ಸಂಪ್ರದಾಯ-ಪದ್ಧತಿ, ಪ್ರವಚನ, ಕೀರ್ತನೆ, ಭಜನೆ ಮತ್ತು ಎಲ್ಲರೂ ಸೇರಿ ಜಾತ್ರಾ ಮಹೋತ್ಸವ ಆಚರಿಸುವದರಿಂದ ನಮಗೆಲ್ಲ ಸುಖ-ಶಾಂತಿ, ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ ಎಂದರು.
ಅಧ್ಯಕ್ಷತೆಯನ್ನು ಶ್ರೀಮತಿ. ವಿದ್ಯಾ ಬಶೆಟ್ಟಿ ವಹಿಸಿದ್ದರು.
ಸಮಾರಂಭದ ನಂತರ ಬನ್ನಿ ಮಹಾಂಕಾಳಿ ಉಡಿ ತುಂಬುವದರೊಂದಿಗೆ ಸುಮಾರು ೫೦೦ ಕ್ಕೂ ಹೆಚ್ಚು ಸುಮಂಗಲೆಯರು ಉಡಿ ತುಂಬುವ ಕಾರ್ಯಕ್ರಮದಲ್ಲಿ ಭಾಗವಹಿಸಿ ನಮ್ಮ ಭಾರತೀಯ ಸಂಸ್ಕೃತಿಯನ್ನು ಅಭಿವ್ಯಕ್ತಿಗೊಳಿಸಿದರು.
ಸವಿತಾ ಪೂಜಾರಿ ರಾಮ ಭಜನೆಯನ್ನು ಪ್ರಸ್ತುತಪಡಿಸಿದರು.
ಪ್ರೊ. ಎಂ.ಎಸ್.ಖೊದ್ನಾಪೂರ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಕಸ್ತೂರಿ ಸಾವಳಗಿ, ಜ್ಯೋತಿ ಕೂಟನೂರ, ಸಿದ್ದಮ್ಮ ಪಾಟೀಲ, ರೇವತಿ ಬುದ್ನಿ, ಶಾಂತಾ ಕಪಾಳಿ, ಶಕುಂತಲಾ ಅಂಕಲಗಿ, ಶೀಲಾ ದೇವನಾಯಕ, ಪ್ರೇಮಾ ಕನ್ನೂರ, ಶಾಲಿನಿ ಹೂಗಾರ, ಭಾರತಿ ಪಾಟೀಲ, ಗಿರಿಜಾ ಮಠಪತಿ, ರೇವತಿ ಬುದ್ನಿಮಠ, ಭಾರತಿ ಬಿರಾದಾರ, ಆಶಾರಾಣಿ ಕೋಷ್ಠಿ, ಅಂಬಿಕಾ ರಜಪೂತ, ಪ್ರೇಮಾ ಕ್ಷತ್ರಿ, ಇನ್ನಿತರರು ಸಹ ಉಪಸ್ಥಿತರಿದ್ದರು.

