ಉದಯರಶ್ಮಿ ದಿನಪತ್ರಿಕೆ
ಜಮಖಂಡಿ: ಹೆಣ್ಣೊಂದು ಕಲಿತರೆ ಶಾಲೆ ಒಂದು ತೆರೆದಂತೆ ಎಂಬ ನಾಣ್ಣುಡಿಯಂತೆ ಇಂದು ಪ್ರತಿಯೊಂದು ಹೆಣ್ಣು ಮಕ್ಕಳು ಶಿಕ್ಷಣವಂತರಾಗಿ ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಬೇಕೆಂದು, ಹಾಗೂ ಒಂದು ಹೆಣ್ಣು ಮಗು ಶಿಕ್ಷಣ ಪಡೆದರೆ ಇಡೀ ಕುಟುಂಬವೇ ಶೈಕ್ಷಣಿಕವಾಗಿ ಪ್ರಗತಿ ಸಾಧಿಸಲು ಸಾಧ್ಯ ಎಂದು ಮುಖ್ಯ ಶಿಕ್ಷಕ ನಾರಾಯಣ ಶಾಸ್ತ್ರಿ ಹೇಳಿದರು.
ಅವರು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯ ಪ್ರಯುಕ್ತ ಕುಂಬಾರಹಳ್ಳದ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇಂದಿನ ದಿನಮಾನದಲ್ಲಿ ಸಮಾಜದಲ್ಲಿ ಎಲ್ಲಾ ರಂಗದಲ್ಲಿಯೂ ಹೆಣ್ಣು ಮಕ್ಕಳು ಸಾಧನೆ ಮಾಡುತ್ತಿದ್ದು, ಅವರಿಗೆ ಪ್ರೋತ್ಸಾಹಿಸುವ ಕೆಲಸ ಎಲ್ಲರೂ ಮಾಡಬೇಕಾಗಿದೆ ಎಂದು ಹೇಳಿದರು.
ಶಿಕ್ಷಕ ಸಂಗಮೇಶ್ ಉಟಗಿ ಮಾತನಾಡಿ, ತೊಟ್ಟಿಲು ತೂಗುವ ಕೈ ದೇಶವನ್ನೇ ಆಳಬಹುದು ಎಂಬುದಕ್ಕೆ ನಮ್ಮ ದೇಶದ ರಾಷ್ಟ್ರಪತಿ ದ್ರೌಪದಿ ಮುರುಮು ಸಾಕ್ಷಿಯಾಗಿದ್ದಾರೆ. ಅದೇ ರೀತಿ ಉನ್ನತ ಹುದ್ದೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಅಧಿಕಾರದಲ್ಲಿರುವುದು ನೋಡಬಹುದಾಗಿದೆ. ಇದಕ್ಕೆಲ್ಲ ಮುಖ್ಯ ಕಾರಣ ಶಿಕ್ಷಣ. ಆದರೆ ಈಗಿನ ಸಮಾಜದಲ್ಲಿ ಹೆಣ್ಣು ಮಕ್ಕಳ ಮೇಲೆ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯಗಳು ನಡೆಯುತ್ತಿದ್ದು ಜೊತೆಗೆ ಬಾಲ್ಯ ವಿವಾಹಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಕಳವಕಾರಿಯಾಗಿದೆ.
ಶಿಕ್ಷಕಿ ಸವಿತಾ ಬೆನಕಟ್ಟಿ ಮಾತನಾಡಿ, ಹೆಣ್ಣು ಮಕ್ಕಳು ಶಿಕ್ಷಣವನ್ನು ಪಡೆಯುವುದಲ್ಲದೆ ಮನೆಯ ಜವಾಬ್ದಾರಿಯನ್ನು ಸಹಿತ ತೆಗೆದುಕೊಂಡು ಗಂಡಿಗೆ ಸಮಾನವಾದಂತ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಹೆಣ್ಣು ಮಕ್ಕಳು ಮನೆಯ ಎಲ್ಲಾ ಕೆಲಸ ಕಾರ್ಯಗಳನ್ನು ಪೂರೈಸಿ ಎಲ್ಲಾ ರಂಗಗಳಲ್ಲಿಯೂ ಮುಂಚೂಣಿಯಲ್ಲಿ ಇರೋದು ಸಂತಸ ಎನಿಸುತ್ತದೆ ಎಂದು ಹೇಳಿದರು.
ಹೆಣ್ಣು ಮಕ್ಕಳು ತಮ್ಮ ಮೇಲೆ ದೌರ್ಜನ್ಯ ನಡೆದರೆ ಪಾಲಕರ ಮತ್ತು ಶಿಕ್ಷಕರ ಗಮನಕ್ಕೆ ತರಬೇಕೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಿಕ್ಷಕರಾದ ಸಂಜೀವ ಝಂಬುರೆ, ಬಾಹುಬಲಿ ಮುತ್ತೂರ, ಆಸಿಫಾ ಬಾನು ಮೋಮಿನ, ಮಂಜುಳಾ ಕಡಕೋಳ, ಚಂದ್ರಕಾಂತ್ ಪೊಲೀಸ್, ಶಕುಂತಲಾ ಬಿರಾದಾರ ಹಾಗೂ ಮಕ್ಕಳು ಉಪಸ್ಥಿತರಿದ್ದರು.

