ಲೇಖನ
– ವೀಣಾ ಹೇಮಂತಗೌಡ ಪಾಟೀಲ್
ಮುಂಡರಗಿ
ಗದಗ ಜಿಲ್ಲೆ
ಉದಯರಶ್ಮಿ ದಿನಪತ್ರಿಕೆ
ಇತ್ತೀಚಿಗಿನ ದಿನಗಳಲ್ಲಿ ಪಾಲಕರಲ್ಲಿ ಒಂದು ಹೊಸ ರೀತಿಯ ಭ್ರಾಂತಿ ಆರಂಭವಾಗಿದೆ. ತಮ್ಮ ಮಕ್ಕಳು ಯಾವುದೇ ವಿಷಯದಲ್ಲಿ ಸೋಲಬಾರದು ಅವರು ಬಯಸುವ ಪ್ರತಿಯೊಂದು ವಸ್ತು ಅವರಿಗೆ ದೊರೆಯಲೇಬೇಕು , ಇನ್ನೂ ಮುಂದೆ ಹೋಗಿ ಈ ಹಿಂದೆ ನಮಗೆ ದೊರೆಯದ್ದು ನಮ್ಮ ಮಕ್ಕಳಿಗೆ ದೊರೆಯಲಿ ಎಂಬ ಆಶಯ. ಆದರೆ ಇದು ಶುದ್ಧ ತಪ್ಪು.
ಬೀಳುವವನು ಏಳುತ್ತಾನೆ. ಸೋತವನು ಗೆಲ್ಲುವ ಕುರಿತು ಯೋಚಿಸುತ್ತಾನೆ.. ಸೋಲೇ ಗೆಲುವಿನ ಮೆಟ್ಟಿಲು ಪ್ರತಿಯೊಂದು ಸೋಲು ಕೂಡ ಮನುಷ್ಯನಿಗೆ ಒಂದು ಹೊಸ ಪಾಠವನ್ನು ಕಲಿಸುತ್ತದೆ.
ಮಕ್ಕಳ ಸೋಲು ತಮ್ಮ ಅಹಮಿಕೆಗೆ ನೀಡುವ ಪೆಟ್ಟು ಎಂಬಂತೆ ಭಾವಿಸುವ ಪಾಲಕರು ನಮ್ಮಲ್ಲಿ ಇದ್ದಾರೆ. ಆದರೆ ನಿಜವಾಗಿಯೂ ಸೋಲನ್ನು ಒಪ್ಪಿಕೊಳ್ಳುವ ಮಗು ಆ ಸೋಲಿನಿಂದ ಉಂಟಾಗುವ ಧಕ್ಕೆಯನ್ನು ತಾಳಿಕೊಳ್ಳುವ ಸೈರಣ ಶಕ್ತಿಯನ್ನು ಪಡೆಯುತ್ತದೆ. ಸೋಲು ಗೆಲುವುಗಳು ಆಟದ ಅವಿಭಾಜ್ಯ ಅಂಗ ಇಂದಿನ ಸೋಲು ನಾಳೆಯ ಗೆಲುವಿಗೆ ಕಾರಣವಾಗುತ್ತದೆ ಎಂಬುದನ್ನು ನಾವು ಮಕ್ಕಳಿಗೆ ಕಲಿಸಬೇಕು.
ಚಿಕ್ಕಂದಿನಿಂದಲೂ ಮಕ್ಕಳಿಗೆ ಬಿದ್ದುಗಿದ್ದೀಯಾ, ಕೈ ಕಾಲು ಮುರಿದೀತು, ಬಿಸಿಲಲ್ಲಿ ಆಡಿ ಬಣ್ಣ ಸುಟ್ಟು ಹೋಗುತ್ತದೆ ಎಂದು ನಕಾರಾತ್ಮಕವಾಗಿಯೇ ಪಾಲಕರು ಬೆಳೆಸುತ್ತಾರೆ.. ಆದರೂ ಕೂಡ ಮುಂದೆ ಶಾಲೆಗೆ ಹೋಗಿ ಶಾಲೆಯಲ್ಲಿ ನಡೆಯುವ ಸ್ಪರ್ಧೆಗಳಲ್ಲಿ ಭಾಗವಹಿಸುವ ಮಕ್ಕಳನ್ನು ಮೊದಲ ಸ್ಥಾನ ಪಡೆ ಎಂದೆ ಪಾಲಕರು ಹೇಳುತ್ತಾರೆ. ಮುಂದೆ ಮಗು ಎರಡು ಇಲ್ಲವೇ ಮೂರನೇ ಸ್ಥಾನ ಗಳಿಸಿದಾಗಲೂ ಕೂಡ ಮಗುವಿನ ಬೆನ್ನು ಚಪ್ಪರಿಸಿ ಮುಂದಿನ ಬಾರಿ ಇನ್ನೂ ಹೆಚ್ಚು ಪ್ರಯತ್ನಿಸು ಎಂದು ಹೇಳಬೇಕು.

ಮಕ್ಕಳು ಮುಂದೆ ಬೆಳೆದು ದೊಡ್ಡವರಾದ ನಂತರ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸಿ ಅಲ್ಲಿ ಪದೇ ಪದೇ ಸೋಲನ್ನು ಅನುಭವಿಸಬಹುದು. ಆದರೆ ಈ ಸೋಲನ್ನು ಮತ್ತೆ ಗೆಲುವಾಗಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳಲು ಮಕ್ಕಳು ಬಾಲ್ಯದಲ್ಲಿ ಸೋಲು ಗೆಲುವಿನ ಚದುರಂಗದಾಟದ ದಾಳವಾಗಿರಲೇಬೇಕು.
ಸೋತಾಗ ಕುಗ್ಗದೆ ಗೆಲುವಿಗಾಗಿ ಪ್ರಯತ್ನಿಸುವ ಮನಸ್ಥಿತಿ ಮಕ್ಕಳಲ್ಲಿ ಇರಬೇಕು, ಜೊತೆಗೆ ಗೆದ್ದಾಗ ಹಿಗ್ಗದೆ ಸಮ ಚಿತ್ತತೆಯನ್ನು ಕಾಯ್ದುಕೊಳ್ಳುವ ರೀತಿಯಲ್ಲಿ ನಾವು ಮಕ್ಕಳನ್ನು ಬೆಳೆಸಬೇಕು.
ಇತ್ತೀಚೆಗಿನ ಹದಿಹರೆಯದ ಮಕ್ಕಳಲ್ಲಿ ಆತ್ಮಹತ್ಯೆಗಳು ಹೆಚ್ಚಾಗಲು ಅವರು ಚಿಕ್ಕಂದಿನಲ್ಲಿ ಸೋಲನ್ನು ಒಪ್ಪಿಕೊಳ್ಳದೆ ಇರುವಂತೆ ಅವರನ್ನು ಬೆಳೆಸಿರುವುದೇ ಕಾರಣ. ಮನುಷ್ಯನ ಬದುಕಿನಲ್ಲಿ ಹಲವಾರು ಏರಿಳಿತಗಳು, ಸವಾಲುಗಳು ಇರುವಂತೆಯೇ ಸೋಲು ಗೆಲುವುಗಳು ಕೂಡ ಇರುತ್ತವೆ. ಸೋತರೆ ಸತ್ತಂತೆ ಎಂಬ ಭಾವ ಮನುಷ್ಯನನ್ನು ಕುಗ್ಗಿಸುತ್ತದೆ ತಪ್ಪು ದಾರಿಗೆ ಎಳಸುತ್ತದೆ.. ಹಾಗಾಗಬಾರದು.
ಪಾಲಕರು ಸಾಧ್ಯವಾದಲ್ಲಿ ತಮ್ಮ ಮಕ್ಕಳಿಗೆ ತಾವು ಈ ಹಿಂದೆ ತಮ್ಮ ಬದುಕಿನಲ್ಲಿ ಪ್ರಯತ್ನ ಪಟ್ಟ ಮತ್ತು ಸೋತ ಉದಾಹರಣೆಗಳನ್ನು ನೀಡಬೇಕು. ಮತ್ತೆ ಪ್ರಯತ್ನಿಸಿ ಗೆದ್ದ ಉದಾಹರಣೆಗಳನ್ನು ನೋಡಿದ ಮಕ್ಕಳು ನಾವು ಕೂಡ ಹೀಗೆ ಸೋಲಬಹುದು ಮತ್ತು ಮರಳಿ ಯತ್ನವ ಮಾಡುವ ಮೂಲಕ ಗೆಲ್ಲಬಹುದು ಎಂದು ತಮಗರಿವಿಲ್ಲದೆ ಕಲಿಯುತ್ತಾರೆ. ಮಕ್ಕಳು ಭಯ ವಿಹ್ವಲತೆಯಿಂದ ಬಳಲುವುದಕ್ಕಿಂತ ಭಯ ಮುಕ್ತ ವಾತಾವರಣದಲ್ಲಿ ಬೆಳೆಯಬೇಕು.
ಇನ್ನು ಮಕ್ಕಳಲ್ಲಿ ಸೋತ ಕೂಡಲೇ ವ್ಯಸನಗಳಿಗೆ ಈಡಾಗುವ ಸಾಧ್ಯತೆಗಳನ್ನು ಇತ್ತೀಚಿನ ದಿನಗಳಲ್ಲಿ ನಾವು ಕಾಣುತ್ತಿದ್ದೇವೆ. ಇದು ಖಂಡಿತವಾಗಿಯೂ ತಪ್ಪು. ಇಂದು ಬಿತ್ತಿದ ಬೀಜ ಮೊಳಕೆಯೊಡೆದು ಸಸಿಯಾಗಿ ನಿಧಾನವಾಗಿ ತನ್ನ ಎಲ್ಲಾ ಅಂಗಗಳನ್ನು ಚಾಚಿಕೊಂಡು ದೊಡ್ಡ ಮರವಾಗಿ ಬೆಳೆಯಲು ಸಾಕಷ್ಟು ವರ್ಷಗಳ ಸಮಯವೇ ಬೇಕು. ಆಳವಾಗಿ ಬೇರೂರಿದ ಮರ ಯಾವುದೇ ರೀತಿಯ ಬಿರುಗಾಳಿಗೂ ಸಿಲುಕುವುದಿಲ್ಲ ಅಲ್ಲವೇ? ಹಾಗೆಯೇ ಮಕ್ಕಳನ್ನು ಬೆಳೆಸುವ ನಿಟ್ಟಿನಲ್ಲಿ ಭಯಮುಕ್ತ ವಾತಾವರಣವನ್ನು ಸೃಷ್ಟಿಸಿ ತಾಳ್ಮೆಯ ಪಾಠವನ್ನು ಮಕ್ಕಳಿಗೆ ಹೇಳಿಕೊಡಲೇಬೇಕು.
ಮೌಲ್ಯಗಳೆಂಬ ಭದ್ರಬುನಾದಿಯನ್ನು ಮಕ್ಕಳಿಗೆ ಚಿಕ್ಕಂದಿನಿಂದಲೇ ಹಾಕಿದಾಗ ಮುಂದೆ ಬೆಳೆದು ದೊಡ್ಡವರಾದ ಮಕ್ಕಳು ಯಾವುದೇ ರೀತಿಯ ಸಂಘರ್ಷಗಳು ಸವಾಲುಗಳನ್ನು ಎದುರಿಸಲು ಸಿದ್ದರಾಗುತ್ತಾರೆ. ಆ ನಿಟ್ಟಿನಲ್ಲಿ ಮಕ್ಕಳನ್ನು ಬೆಳೆಸುವ ಪಾಲಕರು ತಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಿದರೆ ಭವ್ಯ ಭವಿಷ್ಯದ ನಾಗರಿಕರನ್ನು ತಯಾರು ಮಾಡಿದ ಕೀರ್ತಿ ಅವರದಾಗುತ್ತದೆ.


