ದೇವರಹಿಪ್ಪರಗಿ: ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಕಡಿತಗೊಳಿಸದೇ, ಕೃಷಿ ಚಟುವಟಿಕೆಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡುವಂತೆ ಆಗ್ರಹಿಸಿ ಬಿಜೆಪಿ ಧುರೀಣ ಪ್ರಭುಗೌಡ ಬಿರಾದಾರ ನೇತೃತ್ವದಲ್ಲಿ ಅಸ್ಕಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಹೆಸ್ಕಾಂ ಎಇಇ ವಿಜಯಕುಮಾರ ಹವಾಲ್ದಾರ ಅವರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ಹೆಸ್ಕಾಂ ಕಚೇರಿಗೆ ಶುಕ್ರವಾರ ಮತಕ್ಷೇತ್ರದ ಅಸ್ಕಿ, ನೀರಲಗಿ, ಜಲಪುರ, ಹಾಗೂ ಬನ್ನಟ್ಟಿ ಪಿ.ಟಿ ಗ್ರಾಮಸ್ಥರು ಆಗಮಿಸಿ ಸತತ ವಿದ್ಯುತ್ ನಿಲುಗಡೆಯಿಂದಾಗುವ ಪರಿಣಾಮಗಳ ಕುರಿತು ಮಾಹಿತಿ ನೀಡಿ ಮಾತನಾಡಿದರು.
ಮತಕ್ಷೇತ್ರದ ಅಸ್ಕಿ ಗ್ರಾಮದಲ್ಲಿ ನಿರ್ಮಾಣಗೊಂಡಿರುವ ೧೧೦ ಕೆ.ವ್ಹಿ ವಿತರಣಾ ಕೇಂದ್ರ ಆರಂಭಕ್ಕೆ ರೈತರು ಚಂದಾಹಣ ನೀಡಿ ಸಹಕಾರ ನೀಡಿದ್ದಾರೆ. ಆದರೆ ಈಗ ಇದೇ ಕೇಂದ್ರದಿಂದ ಸಮರ್ಪಕ ವಿದ್ಯುತ್ ವಿತರಣೆಯಾಗುತ್ತಿಲ್ಲ. ಈ ಮೊದಲು ದಿನಕ್ಕೆ ೮ ಗಂಟೆಗಳ ಕಾಲ ತ್ರಿಫೇಸ್ ವಿದ್ಯುತ್ ಪೂರೈಕೆ ಆಗುತ್ತಿತ್ತು. ಈಗ ಅದು ಹಗಲು ೩ ಗಂಟೆ, ರಾತ್ರಿ ೨ ಗಂಟೆ ಪೂರೈಕೆಗೆ ಮಾತ್ರ ಸೀಮಿತವಾಗಿದೆ. ಹೀಗಾದರೆ ಜಮೀನುಗಳಿಗೆ ನೀರು ಪೂರೈಸುವುದಾದರೂ ಹೇಗೆ? ಎಂದು ಪ್ರಶ್ನಿಸಿ ಈ ಮೊದಲೇ ಮಳೆ ಅಭಾವದಿಂದ ಬಿತ್ತನೆಯಾದ ಬಹುತೇಕ ಬೆಳೆಗಳು ಒಣಗುತ್ತಿವೆ. ನೀವು ಸರಿಯಾಗಿ ವಿದ್ಯುತ್ ಪೂರೈಕೆ ಮಾಡದಿದ್ದಲ್ಲಿ ಇದ್ದ ಬೆಳೆಯು ಕೈಗೆ ಬರದಂತಾಗುತ್ತದೆ. ಆದ್ದರಿಂದ ನಮಗೆ ಇದೇ ದಿ: ೧೭ ರ ಒಳಗಾಗಿ ಸಮರ್ಪಕ ವಿದ್ಯುತ್ ಪೂರೈಕೆ ಮಾಡಬೇಕು ಇಲ್ಲದಿದ್ದಲ್ಲಿ ಅಸ್ಕಿ ಗ್ರಾಮದ ೧೧೦ ಕೆ.ವ್ಹಿ ವಿತರಣಾ ಕೇಂದ್ರಕ್ಕೆ ಬೀಗ ಹಾಕಿ ಉಗ್ರಪ್ರತಿಭಟನೆ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿ ನಂತರ ಮನವಿ ಸಲ್ಲಿಸಿದರು.
ಮಲ್ಲನಗೌಡ ಬಿರಾದಾರ. ಸಂಗನಗೌಡ ಸಂಗರೆಡ್ಡಿ. ಕಾಶೀನಾಥ ತಳವಾರ. ಮಲ್ಲಣ್ಣ ಹಿರೇಕುರುಬರ ಸೇರಿದಂತೆ ಇತರರು ಇದ್ದರು.
Related Posts
Add A Comment