ರೈತನ ಮಗನ ಪ್ರೋತ್ಸಾಹಿಸುವಂತೆ ನಟ ಬಾಲಾಜಿ ಮನವಿ
ಉದಯರಶ್ಮಿ ದಿನಪತ್ರಿಕೆ
ಹೆಚ್ ಡಿ ಕೋಟೆ: ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಡೆವಿಲ್, ಕಿಚ್ಚ ಸುದೀಪ್ ಅಭಿನಯದ ಮಾರ್ಕ್ ಸಿನಿಮಾ ರೀತಿಯಲ್ಲೇ ಬಹುಕೋಟಿ ವೆಚ್ಚದಲ್ಲಿ ಮಾವುತ ಸಿನಿಮಾ ಮಾಡಲಾಗಿದ್ದು, ಇದೇ 30 ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ. ವೀರ ಮರಣ ಹೊಂದಿದ್ದ ಅರ್ಜುನ ಸವಿ ನೆನಪಿಗಾಗಿ ಮಾಡಿರುವ ಈ ಸಿನಿಮಾವನ್ನು ಹೆಚ್ ಡಿ ಕೋಟೆ ತಾಲೂಕಿನ ಜನ ಸಿನಿಮಾ ಥಿಯೇಟರ್ ನಲ್ಲೇ ನೋಡಿ ಆಶೀರ್ವದಿಸಬೇಕೆಂದು ನಾಯಕ ನಟ ಲಕ್ಷ್ಮೀಪತಿ ಬಾಲಾಜಿ ಮನವಿ ಮಾಡಿದರು.
ಪಟ್ಟಣದ ಶ್ರೀ ಆದಿಚುಂಚನಗಿರಿ ಪ್ರಥಮ ದರ್ಜೆ ಕಾಲೇಜು ಮತ್ತು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮಾವುತ ಸಿನಿಮಾ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದರು. ಮೈಸೂರು ದಸರಾದಲ್ಲಿ 8 ಬಾರಿ ಚಿನ್ನದ ಅಂಬಾರಿ ಹೊತ್ತು, ಕಾಡಾನೆ ಕಾರ್ಯಾಚರಣೆ ವೇಳೆ ವೀರಮರಣ ಹೊಂದಿದ್ದ ಅರ್ಜುನ ಆನೆ ಜೊತೆ ಹೆಚ್ ಡಿ ಕೋಟೆ ತಾಲೂಕಿನ ಜನತೆಗೆ ಅವಿನಾಭಾವ ಸಂಬಂಧ ಇದೆ. ಈಗಲೂ ಅರ್ಜನ ಆನೆಯನ್ನು ಮನಸಿನಲ್ಲಿಟ್ಟು ಪೂಜಿಸುತ್ತಿದ್ದೀರಿ. ಹೀಗಾಗಿ ಸಿನಿಮಾದಲ್ಲೂ ನಟಿಸಿರುವ ಆನೆಗೆ ಅರ್ಜುನ ಎಂದು ಹೆಸರಿಟ್ಟಿದ್ದೇವೆ. ಈ ಮೂಲಕ ಅರ್ಜುನ ಆನೆಗೆ ಈ ಸಿನಿಮಾವನ್ನು ಸಮರ್ಪಿಸುತ್ತಿದ್ದೇವೆ ಎಂದು ನಟ ಲಕ್ಷ್ಮೀಪತಿ ಬಾಲಾಜಿ ಹೇಳಿದರು.
ಸಿನಿಮಾ ಇಷ್ಟವಾಗದಿದ್ದರೆ ದುಡ್ಡು ವಾಪಸ್ !
ಈ ಚಿತ್ರದಲ್ಲಿ ಕೊನೆವರೆಗೂ ಸಸ್ಪೆನ್ಸ್ ಕಾಪಾಡಲಾಗಿದೆ. ಒಬ್ಬ ಪ್ರೇಕ್ಷಕನಿಗೆ ಮನರಂಜನೆಯ ದೃಷ್ಟಿಯಲ್ಲಿ ಏನು ಬೇಕು ಎಲ್ಲವೂ ಚಿತ್ರದಲ್ಲಿದೆ. ಹಾಡಿನ ಜೊತೆಗೆ ಕ್ಯೂಟ್ ಲವ್ ಸ್ಟೋರಿ ಇದೆ. ಸಾಹಸಮಯ ದೃಶ್ಯಗಳಿವೆ. ಯಾರಾದ್ರೂ ಸರಿಯೇ ಸಿನಿಮಾ ನೋಡಿ ಸಿನಿಮಾ ಚೆನ್ನಾಗಿಲ್ಲ ಎಂದು ಹೇಳಿದರೆ ಅವರ ಟಿಕೆಟ್ ದುಡ್ಡು ನಾನು ವಾಪಾಸ್ ಕೊಡುತ್ತೇನೆ ಎಂದು ನಟ ಲಕ್ಷ್ಮೀಪತಿ ಬಾಲಾಜಿ ಬಹಿರಂಗ ಸವಾಲು ಹಾಕಿದರು.

