ಬಿಜೆಪಿ ಪಕ್ಷದ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ನೀತಿನ್ ನಬೀನ್ ನೇಮಕಗೊಂಡ ಹಿನ್ನೆಲೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಬಿಜೆಪಿ ಪಕ್ಷದ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ನೀತಿನ್ ನಬೀನ್ ನೇಮಕಗೊಂಡ ಹಿನ್ನೆಲೆಯಲ್ಲಿ ವಿಜಯಪುರದಲ್ಲಿ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದರು.
ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಸಮಾವೇಶಗೊಂಡ ಬಿಜೆಪಿ ಮುಖಂಡರು, ಕಾರ್ಯಕರ್ತರು ಪರಸ್ಪರ ಸಿಹಿ ಹಂಚಿ ನೂತನ ಅಧ್ಯಕ್ಷರಿಗೆ ಶುಭ ಕೋರಿದರು.
ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಮಾತನಾಡಿ, ಬಿಜೆಪಿಯಲ್ಲಿ ನಿಷ್ಠಾವಂತ ಕಾರ್ಯಕರ್ತರಿಗೆ ಮಣೆ ಇದೆ, ಯಾರು ಪಕ್ಷಕ್ಕಾಗಿ ದುಡಿಯುತ್ತಾರೋ ಅವರಿಗೆ ಹುದ್ದೆ ಒಲಿದು ಬರುತ್ತದೆ, ಯುವಕರಾಗಿರುವ ನೀತಿನ್ ನಬೀನ್ ಅವರಿಗೆ ದೊಡ್ಡ ಹುದ್ದೆಯನ್ನು ಪಕ್ಷ ನೀಡಿದೆ, ಅವರ ಸಾರಥ್ಯದಲ್ಲಿ ಪಕ್ಷ ಇನ್ನಷ್ಟೂ ಉತ್ಸಾಹ ಭರಿತವಾಗಿ ಮುನ್ನಡೆಯಲಿದೆ ಎಂದರು.
ಬಿಜೆಪಿ ಬಗ್ಗೆ ಜನತೆ ಅಪಾರ ಒಲವು ಹೊಂದಿದ್ದಾರೆ, ಪ್ರಧಾನಿ ಮೋದಿಜಿ ಅವರ ಆಡಳಿತವನ್ನು ಅಪಾರವಾಗಿ ಮೆಚ್ಚಿಕೊಂಡಿದ್ದಾರೆ ಎಂಬುದಕ್ಕೆ ಮುಂಬೈ ಮಹಾನಗರ ಪಾಲಿಕೆ ಚುನಾವಣೆಯೇ ಸಾಕ್ಷಿ, ಬಿಹಾರ ಚುನಾವಣೆಯಲ್ಲಿಯೂ ಜಯಬೇರಿ ಬಾರಿಸಿದ್ದ ಬಿಜೆಪಿ ಈಗ ಗೆಲುವಿನ ಅಲೆಯಲ್ಲಿ ಮುನ್ನಡೆಯುತ್ತಿದೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಮಾತನಾಡಿ, ಬಿಜೆಪಿ ದೇಶಾಭಿಮಾನವನ್ನು ಉಸಿರಾಗಿಸಿಕೊಂಡ ಪಕ್ಷ, ಈ ಕಾರಣಕ್ಕಾಗಿಯೇ ವಿಶ್ವದ ದೊಡ್ಡ ರಾಜಕೀಯ ಪಕ್ಷ ಎಂಬ ಕೀರ್ತಿಗೆ ಪಾತ್ರವಾಗಿದೆ, ಯುವಕರಿಗೆ ರಾಷ್ಟ್ರೀಯ ಅಧ್ಯಕ್ಷ ಸ್ಥಾನ ನೀಡಿರುವುದು ಯುವಕರಲ್ಲಿ ಹರ್ಷ ಮೂಡಿಸಿದೆ ಹಾಗೂ ಯುವ ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ಮೂಡಿಸಿದೆ ಎಂದರು. ಯುವಜನತೆ ಬಿಜೆಪಿಯ ಬೆನ್ನಿಗೆ ಇದ್ದಾರೆ ಎಂದರು.
ಸಂಸದ ರಮೇಶ ಜಿಗಜಿಣಗಿ, ಮುಖಂಡರಾದ ವಿಜುಗೌಡ ಪಾಟೀಲ, ಚಂದ್ರಶೇಖರ ಕವಟಗಿ, ಕಾಸುಗೌಡ ಬಿರಾದಾರ, ಸಂದೀಪ್ ಪಾಟೀಲ್ ಡಾ.ಸುರೇಶ ಬಿರಾದಾರ, ಮಹೇಂದ್ರಕುಮಾರ ನಾಯಕ, ಮಳುಗೌಡ ಪಾಟೀಲ, ಉಮೇಶ ಕೋಳಕೂರ, ಕೃಷ್ಣಾ ಗುನ್ಹಾಳಕರ, ಶಿವರುದ್ರ ಬಾಗಲಕೋಟ, ಬಸವರಾಜ ಬೈಚಬಾಳ, ಮಲ್ಲಮ್ಮ ಜೋಗೂರ, ಸ್ವಪ್ನಾ ಕಣಮುಚನಾಳ, ಭಾರತಿ ಭುಯ್ಯಾರ, ಜಯಶ್ರೀ ಅಫಝಲಪೂರ, ಮಲ್ಲಿಕಾರ್ಜುನ ದೇವರಮನಿ, ರಾಜೇಶ ತಾವಸೆ, ಭೀಮಾಶಂಕರ ಹದನೂರ, ವಿಜು ಜೋಶಿ, ರಾಜಕುಮಾರ ಸಗಾಯಿ, ರಾಹುಲ ಜಾಧವ, ಶರಣಬಸು ಕುಂಬಾರ, ಸಂತೋಷ ನಿಂಬರಗಿ, ಭರತ ಕುಲಕರ್ಣಿ, ಪಾಪುಸಿಂಗ ರಜಪೂತ, ಚಿನ್ನು ಚಿನಗುಂಡಿ, ಭರತ ಕೋಳಿ, ಬಸು ಹಳ್ಳಿ, ರವಿ ಬಿರಾದಾರ, ಆನಂದ ಮುಚ್ಚಂಡಿ, ವಿನೋದ ಕೊಳೂರಗಿ, ನಾಗರಾಜ ಸಿ.ಎಂ, ಸಂತೋಷ ಮಮದಾಪೂರ ಪಾಲ್ಗೊಂಡಿದ್ದರು.

