ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕೃಷ್ಣ ನದಿ ತೀರದಲ್ಲಿ ಗಾನಯೋಗಿ ಸಂಘದ ವತಿಯಿಂದ ಸ್ವಚ್ಛತಾ ಕಾರ್ಯಕ್ರಮವನ್ನು ಯಶಸ್ವಿಯಾಗಿ ಹಮ್ಮಿಕೊಳ್ಳಲಾಯಿತು. ಪವಿತ್ರವಾದ ಕೃಷ್ಣ ನದಿಯನ್ನು ಸ್ವಚ್ಛವಾಗಿ ಕಾಪಾಡಬೇಕು ಎಂಬ ಉದ್ದೇಶದಿಂದ ಈ ಕಾರ್ಯವನ್ನು ಕೈಗೊಳ್ಳಲಾಗಿತ್ತು.
ಈ ವೇಳೆ ಮಾತನಾಡಿದ ಸಂಘದ ಅಧ್ಯಕ್ಷ ಪ್ರಕಾಶ್ ಆರ್.ಕೆ. ಅವರು, “ನದಿ ನಮ್ಮ ತಾಯಿ. ಕೇವಲ ಪೂಜೆ ಮಾಡುವುದಕ್ಕಿಂತಲೂ ನದಿಯನ್ನು ಕಾಪಾಡುವುದೇ ನಿಜವಾದ ಭಕ್ತಿ. ನಂಬಿಕೆ ಹೆಸರಲ್ಲಿ ನದಿಗಳಿಗೆ ಕಸ, ಬಟ್ಟೆ, ಪ್ಲಾಸ್ಟಿಕ್ ಹಾಗೂ ಪೂಜಾ ಸಾಮಗ್ರಿಗಳನ್ನು ಬಿಸಾಡುವುದು ಧರ್ಮವಲ್ಲ; ಅದು ಪ್ರಕೃತಿಗೆ ಮಾಡಿದ ಅಪರಾಧ” ಎಂದು ಹೇಳಿದರು.
ಸ್ವಚ್ಛ ನದಿ ಎಂದರೆ ಆರೋಗ್ಯಕರ ಸಮಾಜ ಹಾಗೂ ಭವಿಷ್ಯ ಎಂದು ಅವರು ತಿಳಿಸಿದರು.
ಇಂದು ಮಾಡಿರುವ ಸ್ವಚ್ಛತಾ ಕಾರ್ಯ ಸಣ್ಣ ಪ್ರಯತ್ನವಾಗಿರಬಹುದು, ಆದರೆ ನಾಳೆಯ ದೊಡ್ಡ ಬದಲಾವಣೆಗೆ ಇದು ಮಹತ್ವದ ಮೊದಲ ಹೆಜ್ಜೆಯಾಗಿದೆ. ಸಾರ್ವಜನಿಕರು ತಮ್ಮ ಹೊಣೆಗಾರಿಕೆಯನ್ನು ಅರಿತು ನದಿ, ಪರಿಸರ ಮತ್ತು ಪ್ರಕೃತಿಯನ್ನು ಕಾಪಾಡುವಲ್ಲಿ ಕೈಜೋಡಿಸಬೇಕು ಎಂದು ಸಂಘದ ಸದಸ್ಯರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ವಿಕಾಸ್, ರವಿ, ಸಚಿನ್, ರಾಜಕುಮಾರ್, ವೀರೇಶ್, ವಿಠ್ಠಲ್, ಸಂತೋಷ್, ಮಹೇಶ್, ಕಿರಣ್ ಹಾಗೂ ವಿಷ್ಣು ಸೇರಿದಂತೆ ಸಂಘದ ಸದಸ್ಯರು ಉಪಸ್ಥಿತರಿದ್ದು ಸ್ವಚ್ಛತಾ ಕಾರ್ಯದಲ್ಲಿ ಸಕ್ರಿಯವಾಗಿ ಭಾಗವಹಿಸಿದರು.
ಗಾನಯೋಗಿ ಸಂಘದ ಈ ಪ್ರಯತ್ನವು ಪರಿಸರ ಸಂರಕ್ಷಣೆಯ ಕುರಿತು ಜನರಲ್ಲಿ ಅರಿವು ಮೂಡಿಸುವ ದಿಕ್ಕಿನಲ್ಲಿ ಮಹತ್ವದ ಹೆಜ್ಜೆಯಾಗಿದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟರು.

