ಕಾಂಗ್ರೆಸ್‌ನ ಹಣ ಎಂದ ಬಿಜೆಪಿ-ಜೆಡಿಎಸ್ | ಪಂಚ ರಾಜ್ಯಗಳ ಚುನಾವಣೆಗೆ ಹಣ ಸಂಗ್ರಹದ ಆರೋಪ
ಬೆಂಗಳೂರು: ಆದಾಯ ತೆರಿಗೆ ಅಧಿಕಾರಿಗಳು ಗುತ್ತಿಗೆದಾರರು ಆಭರಣ ಮಳಿಗೆ ಮಾಲೀಕರು, ಮಾಜಿ ಕಾರ್ಪೋರೇಟರ್‌ಗಳಿಗೆ ಸೇರಿದ ಹಲವು ಕಡೆ ಐಟಿ ಅಧಿಕಾರಿಗಳು ಶೋಧ ನಡೆಸಿದ್ದಾರೆ. ಏಳು ಸ್ಥಳಗಳಲ್ಲಿ ದಾಳಿ ನಡೆಸುತ್ತಿದ್ದು, ಇದುವರೆಗೆ 42 ಕೋಟಿ ರೂ. ವಶಪಡಿಸಿಕೊಂಡಿದ್ದಾರೆ.
ಈ ಹಣ ಕಾಂಗ್ರೆಸ್‌ಗೆ ಸೇರಿದ್ದು, ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಬಳಸಲು ಕರ್ನಾಟಕದಲ್ಲಿ ಹಣ ಸಂಗ್ರಹಿಸುತ್ತಿದ್ದಾರೆ ಎಂದು ಬಿಜೆಪಿ, ಜೆಡಿಎಸ್ ಆರೋಪಿಸಿವೆ.
ಐದು ರಾಜ್ಯಗಳಾದ ತೆಲಂಗಾಣ, ಮಧ್ಯಪ್ರದೇಶ, ರಾಜಸ್ಥಾನ, ಮಿಜೋರಾಂ ಮತ್ತು ಛತ್ತೀಸ್‌ಗಢ ಚುನಾವಣೆಗೆ ಹಣ ನೀಡಲು ಕಾಂಗ್ರೆಸ್ ಗುತ್ತಿಗೆದಾರರಿಂದ ಕಮಿಷನ್ ಪಡೆಯುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್‌ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ.
5 ರಾಜ್ಯಗಳ ಚುನಾವಣೆ ಘೋಷಣೆಯಾದ ತಕ್ಷಣ ಕಾಟನ್ ಬಾಕ್ಸ್ ಗಳಲ್ಲಿ ಕೋಟ್ಯಂತರ ರೂಪಾಯಿ ಗುತ್ತಿಗೆದಾರರ ಮನೆಯಲ್ಲಿ ಪತ್ತೆಯಾದ ಹಣ ಯಾರದ್ದು? ಯಾರಿಂದ ಸಂಗ್ರಹಿಸಲಾಗಿದೆ? ಇದಕ್ಕೆ ಸಿಎಂ ಸಿದ್ದರಾಮಯ್ಯ ಉತ್ತರ ನೀಡಬೇಕು ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಇದೇ ವೇಳೆ ಬಿಜೆಪಿಯ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಟಿಎಂ ಆಗುತ್ತೆ ಎಂದು ಈ ಹಿಂದೆ ಅಮಿತ್ ಶಾ ಹೇಳಿದ್ದರು. ಇದೀಗ ಸಾಕ್ಷಿ ಸಮೇತ ಕಳ್ಳರು ಸಿಕ್ಕಿಬಿದ್ದಿದ್ದಾರೆ. ಯಾವ ಕಮಿಷನ್ ಮೂಲಕ ಹಣ ಸಂಗ್ರಹಿಸಿದ್ದಾರೆ ಅಂತಾ ತನಿಖೆ ಆಗಲಿ. ಸಿಎಂ, ಡಿಸಿಎಂ, ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಪಾತ್ರ ಏನು ಅಂತಾ ತನಿಖೆ ಆಗಬೇಕು. ಕೆಂಪಣ್ಣ ಕಾಂಗ್ರೆಸ್ ಪಕ್ಷದ ಏಜೆಂಟ್ ಅನ್ನೋದು ಪ್ರೂವ್ ಆಗುತ್ತಿದೆ. ಪತ್ತೆಯಾಗಿರುವ ದುಡ್ಡು ಪಂಚರಾಜ್ಯಗಳಿಗೆ ಎಲ್ಲೆಲ್ಲಿ ಹೋಗುತ್ತಿತ್ತೋ, ಈ ಬಗ್ಗೆ ತನಿಖೆಯಾದರೆ ಎಲ್ಲರೂ ಸಿಕ್ಕಿಹಾಕಿಕೊಳ್ಳುತ್ತಾರೆ ಎಂದರು.
ಬಿಜೆಪಿ ಶಾಸಕ ಡಾ.ಅಶ್ವತ್ಥ ನಾರಾಯಣ, ಎಟಿಎಂ ಸರ್ಕಾರ ಅನ್ನೋದು ಈಗ ಸಾಕ್ಷಿ ಸಮೇತ ಗೊತ್ತಾಗಿದೆ. ಕೇವಲ ಸಣ್ಣ ಮೊತ್ತವಷ್ಟೇ ಸಿಕ್ಕಿದೆ, ಇನ್ನೂ ಬಹಳಷ್ಟು ಕಡೆ ಇರುತ್ತದೆ. ಕಿರುಕುಳ ನೀಡಿ ಹೆದರಿಸಿ ಕಲೆಕ್ಷನ್ ಮಾಡಿರುವ ಈ ದುಡ್ಡು ಯಾರಿಗೆ ಸೇರಿದ್ದು ಅಂತಾ ಗುತ್ತಿಗೆದಾರರು ಹೇಳಬೇಕು. ಹಿಂಸೆ ಕೊಟ್ಟು ವಸೂಲಿ ಮಾಡಿದ್ದಾರೆಂದು ಗುತ್ತಿಗೆದಾರರು ಹೇಳಬೇಕು. ನಮ್ಮ ಸರ್ಕಾರದ ಮೇಲೆ ಆಧಾರವಿಲ್ಲದೆ ಆರೋಪ ಮಾಡಿದ್ದರು. ಅಂದು ಆಪಾದನೆ ಮಾಡಿದವರಲ್ಲಿ ಅಂಬಿಕಾಪತಿ ಒಬ್ಬ. ಯಾವುದಾದರೂ ಗುತ್ತಿಗೆದಾರರ ಹತ್ತಿರ ಕ್ಯಾಶ್ ಹೇಗೆ ಬರುತ್ತದೆ? ಇದು ಕಿಕ್ ಬ್ಯಾಕ್ ದುಡ್ಡು, ವಸೂಲಿ ದುಡ್ಡು, ಕಮಿಷನ್ ದುಡ್ಡು ಎಂದು ವಾಗ್ದಾಳಿ ನಡೆಸಿದರು.
*ಬಿಜೆಪಿ ಆರೋಪಗಳು ಆಧಾರ ರಹಿತ :ಸಿಎಂ*
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಐಟಿ ದಾಳಿ ಬಗ್ಗೆ ನಮಗ್ಯಾಕೆ ಕೇಳುತ್ತೀರಾ ಎಂದು ಪ್ರಶ್ನಿಸಿದರು.
ಯಾವ ರಾಜ್ಯಗಳಿಗೂ ನಾವು ಹಣ ಕೊಡಲ್ಲ, ಅವರು ಕೇಳುವುದಿಲ್ಲ. ಹಣ ಹೋಗಿರುವುದು ಬಿಜೆಪಿ ಅವರು ನೋಡಿದ್ದಾರಾ? ಬಿಜೆಪಿಯವರ ಮಾಡಿದ ಎಲ್ಲಾ ಆರೋಪಗಳು ಆಧಾರ ರಹಿತ ಎಂದರು.
ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಾತನಾಡಿ, ರಾಜಕೀಯ ಇಲ್ಲದೆ ಐಟಿ ಅಧಿಕಾರಿಗಳು ಬರುವುದಿಲ್ಲ. ರಾಜಕೀಯ ನಡೆಯುತ್ತಾ ಇರುವುದು ನಮಗೆ ಗೊತ್ತಿದೆ. ಬಿಜೆಪಿ ಅಧಿಕಾರದಲ್ಲಿ ಇರುವ ಕಡೆ ಐಟಿ ದಾಳಿ ನಡೆಯುವುದಿಲ್ಲ ಎಂದರು.
ಐದು ರಾಜ್ಯ ಚುನಾವಣೆಗೆ ಕರ್ನಾಟಕ ಕಲೆಕ್ಷನ್ ಸೆಂಟರ್ ಎಂಬ ಬಿಜೆಪಿ ಶಾಸಕ ಅಶ್ವತ್ಥ ನಾರಾಯಣ ಅವರ ಆರೋಪಕ್ಕೆ ತಿರುಗೇಟು ನೀಡಿದ ಅವರು, ಅವನ್ಯಾರೋ ರಸ್ತೆ ಬೀದಿಯಲ್ಲಿ ಮಾತಾಡೋವರಿಗೆ ನಾನು ಉತ್ತರ ಕೊಡುವ ಅವಶ್ಯಕತೆ ಇಲ್ಲ ಎಂದರು.